
ಚೇಳೂರು: ಇಲ್ಲಿ ತಾಲ್ಲೂಕು ಕಚೇರಿ ಆರಂಭವಾಗಿ ಕೆಲ ವರ್ಷಗಳೇ ಕಳೆದರೂ, ಇದುವರೆಗೂ ಕಚೇರಿಗೆ ಸಂಬಂಧಿಸಿದ ಹಲವು ವಿಭಾಗಗಳು ಆರಂಭವಾಗಿಲ್ಲ. ಇದರಿಂದ ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ಪಡೆಯಲು ಬಾಗೇಪಲ್ಲಿ ತಾಲ್ಲೂಕು ಕಚೇರಿ ಅವಲಂಬಿಸಿದ್ದಾರೆ.
ತಾಲ್ಲೂಕು ಕಚೇರಿಗೆ ಸ್ವಂತ ಕಟ್ಟಡವಿಲ್ಲ. ಪಟ್ಟಣದ ಹೊರವಲಯದ ಗರಿಗರೆಡ್ಡಿಪಾಳ್ಯ ಬಳಿ ಬಾಡಿಗೆ ಕಟ್ಟಡದಲ್ಲಿ ತಾಲ್ಲೂಕು ಕಚೇರಿ ನಡೆಯುತ್ತಿದೆ. ಆದರೆ ಇಲ್ಲಿಗೆ ಬರುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಕುರ್ಚಿಯ ವ್ಯವಸ್ಥೆಯೂ ಇಲ್ಲ. ಸಾರ್ವಜನಿಕರು ತಮ್ಮ ಕೆಲಸ ಆಗುವವರೆಗೂ ನಿಂತುಕೊಂಡೇ ಇರಬೇಕಾದ ಸ್ಥಿತಿ ಇದೆ.
ತಹಶೀಲ್ದಾರ್ ಕೊಠಡಿ ಮೊದಲ ಮಹಡಿಯಲ್ಲಿದೆ. ಮೆಟ್ಟಿಲುಗಳೂ ಇಕ್ಕಟ್ಟಾಗಿವೆ. ವೃದ್ಧರು, ಅಂಗವಿಕಲರು ತಹಶೀಲ್ದಾರ್ ಅವರನ್ನು ಭೇಟಿ ಮಾಡಲು ಪ್ರಯಾಸ ಪಡಬೇಕಿದೆ. ಪ್ರತಿ ಸರ್ಕಾರಿ ಕಚೇರಿಗೆ ಅಂಗವಿಕಲರು ಗಾಲಿ ಕುರ್ಚಿಯ ಮೂಲಕ ಬರಲು ಅನುಕೂಲ ಆಗುವಂತೆ ರ‍್ಯಾಂಪ್ ನಿರ್ಮಿಸಬೇಕು ಎಂಬ ನಿಯಮವಿದೆ. ಆದರೆ ಇಲ್ಲಿ ಆ ವ್ಯವಸ್ಥೆಯೂ ಇಲ್ಲ.
ಕಚೇರಿ ಮುಂಭಾಗದಲ್ಲಿ ಇತ್ತೀಚೆಗೆ ನಿರ್ಮಿಸಲಾಗಿರುವ ಚರಂಡಿಯು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಬದಲು ತೀವ್ರ ತೊಂದರೆಗೆ ಕಾರಣವಾಗಿದೆ. ಚರಂಡಿ ಕಾಮಗಾರಿ ಅಪೂರ್ಣಗೊಂಡಿದ್ದು, ಅದರ ಮೇಲೆ ಸ್ಲಾಬ್‌ಗಳನ್ನು ಅಳವಡಿಸಿಲ್ಲ. ಕಚೇರಿಗೆ ಬರುವ ಜನರು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವುದರಿಂದ ಚರಂಡಿ ದಾಟಿ ಹೋಗುವ ಸ್ಥಿತಿ ಇದೆ. ಇತ್ತೀಚೆಗೆ ಸಿಬ್ಬಂದಿಯೊಬ್ಬರು ಚರಂಡಿಗೆ ಬಿದ್ದು ಗಾಯಗೊಂಡಿದ್ದಾರೆ
ಖಾತೆ ಬದಲಾವಣೆಗೆ ಬೇಕಾಗಿರುವ ಪ್ರಮುಖ ದಾಖಲೆಗಳಿಗೆ ಸಾರ್ವಜನಿಕರನ್ನು ಬಾಗೇಪಲ್ಲಿಯಿಂದ ಚೇಳೂರಿಗೆ, ಚೇಳೂರಿನಿಂದ ಬಾಗೇಪಲ್ಲಿ ತಾಲೂಕಿಗೆ ಅಲೆಸಲಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪ.
ನಾಡಕಚೇರಿಯಲ್ಲಿ ವಿವಿಧ ಸೇವೆಗಳನ್ನು ಪಡೆಯುವ ಸಲುವಾಗಿ ಪೂರಕ ದಾಖಲೆಗಳನ್ನು ಲಗತ್ತಿಸಿ ಅರ್ಜಿಗಳನ್ನು ಸಲ್ಲಿಸಿದರೂ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ.
ಇವೆಲ್ಲವೂ ಒಂದಡೆಯಾದರೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರದಿರುವುದು ಬಹುದೊಡ್ಡ ಸಮಸ್ಯೆಯಾಗಿದೆ. ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದೆ ತಡವಾಗಿ ಬರುವುದು ಅಥವಾ ಮುಂಚಿತವಾಗಿ ಹೊರಡುವುದು ಸಾಮಾನ್ಯ ಎನಿಸಿದೆ ಎಂದು ಸಾರ್ವಜನಿಕರು ಆರೋಪಿಸುವರು.
ಚೇಳೂರಿನಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ತಾಲ್ಲೂಕು ಆಡಳಿತ ಸೌಧದ ಕಚೇರಿ ಅವ್ಯವಸ್ಥೆ ಚರ್ಚೆಯಾಗಿತ್ತು. ಅವ್ಯವಸ್ಥೆಗಳನ್ನು ಸರಿಪಡಿಸಬೇಕು ಎಂದು ಶಾಸಕ ಎಸ್ ಎಸ್ ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೂ ಕ್ರಮವಾಗಿಲ್ಲ.
ಶೌಚಾಲಯ ಸೌಲಭ್ಯ ಇಲ್ಲದೆ ಪರದಾಟ: ಕಚೇರಿ ಅವರಣದಲ್ಲಿ ಸಾರ್ವಜನಿಕರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಅದರಲ್ಲೂ ಮಹಿಳೆಯರ ಪಾಡು ಹೇಳತೀರದು. ಪುಟ್ಟ ಮಕ್ಕಳನ್ನು ಹೊತ್ತು ಸರದಿ ಸಾಲಿನಲ್ಲಿ ನಿಂತುಕೊಳ್ಳಲು ಆಗದೆ ಪರಿತಪಿಸುವ ಮಹಿಳೆಯರಿಗೆ ಶೌಚಾಲಯಕ್ಕೆ ಹೋಗಬೇಕಾದರೆ ಎಲ್ಲಿಗೆ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ.
ಸರ್ಕಾರಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬ ಅಧಿಕಾರಿಯೂ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಬೇಕು ಎಂಬ ಸರ್ಕಾರದ ಆದೇಶವಿದೆ. ಆದರೆ ಚೇಳೂರು ತಾಲ್ಲೂಕು ಕಚೇರಿ ಸಿಬ್ಬಂದಿ ಈ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ಇದರಿಂದಾಗಿ ಕಚೇರಿಯಲ್ಲಿ ಕೆಲಸ ಮಾಡುವವರು ಯಾರು? ಮಧ್ಯವರ್ತಿಗಳು ಯಾರು? ಎಂಬ ಗೊಂದಲ ಸಾರ್ವಜನಿಕರಲ್ಲಿ ಮೂಡುತ್ತಿದೆ.
‘ಸ್ಲ್ಯಾಬ್ ಅಳವಡಿಸಲು ತಿಳಿಸುವೆ’
ಕಡ್ಡಾಯವಾಗಿ ಗುರುತಿನ ಚೀಟಿ ಧರಿಸುವಂತೆ ಸಿಬ್ಬಂದಿಗೆ ಸೂಚಿಸಲಾಗುವುದು. ಕಚೇರಿ ಮುಂಭಾಗದ ಚರಂಡಿಗೆ ಸ್ಲ್ಯಾಬ್ ಅಳವಡಿಸಲು ಸಂಬಂಧಪಟ್ಟವರಿಗೆ ತಕ್ಷಣ ತಿಳಿಸಲಾಗುವುದು.– ಶ್ವೇತಾ ಬಿ.ಕೆ. ತಹಶೀಲ್ದಾರ್ ಚೇಳೂರು
ಪ್ರಮಾಣ ಪತ್ರಕ್ಕೆ ಅಲೆದಾಟ ಸಣ್ಣ ರೈತ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿ 15 ರಿಂದ 20 ದಿನಗಳಾದರೂ ಪ್ರಮಾಣ ಪತ್ರ ದೊರೆತಿಲ್ಲ. ಚೇಳೂರು ತಾಲ್ಲೂಕು ಕಚೇರಿ ಆಡಳಿತ ವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನವಾಗಿದೆ. ಎಲ್ಲಾ ಪೂರಕ ದಾಖಲೆಗಳನ್ನು ಸಲ್ಲಿಸಿದರೂ ಪ್ರತಿ ದಿನ ಪರದಾಡುವುದು ತಪ್ಪುತ್ತಿಲ್ಲ.– ಲಕ್ಷ್ಮಣ, ರೈತ
ಕಚೇರಿಗೆ ಅಲೆದಾಟ ಚೇಳೂರಿನಲ್ಲಿ ತಾಲ್ಲೂಕು ಕಚೇರಿ ಇದ್ದರೂ ಖಾತೆ ಬದಲಾವಣೆ ದಾಖಲೆಗಳಿಗಾಗಿ ಬಾಗೇಪಲ್ಲಿ ತಾಲ್ಲೂಕು ಕಚೇರಿ ಅವಲಂಬಿಸಬೇಕಾಗಿದೆ. ಇಲ್ಲಿನ ಅಧಿಕಾರಿಗಳೂ ಸರಿಯಾದ ಮಾಹಿತಿ ನೀಡದೆ ಪ್ರತಿದಿನ ಕಚೇರಿಗಳಿಗೆ ಅಲೆದಾಡುವಂತೆ ಮಾಡುತ್ತಿದ್ದಾರೆ.– ರಾಜೇಶ್, ಸಾರ್ವಜನಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.