ಗೌರಿಬಿದನೂರು: ಉತ್ತರ ಪಿನಾಕಿನಿ ನದಿಗೆ ಕಾರ್ಖಾನೆಯ ರಾಸಾಯನಿಕ ತ್ಯಾಜ್ಯವನ್ನು ಹರಿಬಿಡಲಾಗುತ್ತಿದೆ. ಇದರಿಂದ ಮರಳೂರು ಗ್ರಾಮದ ಸುತ್ತಮುತ್ತಲಿನ ಜನರಲ್ಲಿ ಆತಂಕ ಮನೆ ಮಾಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಾಲ್ಲೂಕಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಉತ್ತರ ಪಿನಾಕಿನಿ ನದಿ ಕಳೆದ ಒಂದು ವಾರದಿಂದ ಉಕ್ಕಿ ಹರಿಯುತ್ತಿದೆ. ನಗರದಲ್ಲಿರುವ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಿಸಲು ಸಕ್ಕರೆ ಕಾರ್ಖಾನೆ ಬಳಿ ಈ ನದಿಗೆ ಅಡ್ಡಲಾಗಿ ಕಿಂಡಿ ಆಣೆಕಟ್ಟು ನಿರ್ಮಿಸಲಾಗಿದೆ. ಈ ಮೂಲಕ ನದಿಯ ಸ್ವಲ್ಪ ಪ್ರಮಾಣದ ನೀರನ್ನು ಮರಳೂರು, ಇಡಗೂರು, ಚಂದನದೂರು ಸೇರಿದಂತೆ ಇತರೆ ಕೆರೆಗಳಿಗೆ ಹರಿಸಲಾಗುತ್ತಿದೆ. ಆದರೆ, ತಾಲ್ಲೂಕಿನಲ್ಲಿರುವ ಕೆಲವು ಕಾರ್ಖಾನೆಗಳು ಮಂಗಳವಾರ ರಾತ್ರಿ ರಾಸಾಯನಿಕವನ್ನು ಮರಳೂರು ಕಾಲುವೆಗೆ ಬಿಟ್ಟಿವೆ. ಇದರಿಂದ ನೀರು ಬಣ್ಣಕ್ಕೆ ತಿರುಗಿದೆ ಎಂದು ರೈತ ಸಂಘ ಮತ್ತು ಹಸಿರುಸೇನೆಯ ತಾಲ್ಲೂಕು ಅಧ್ಯಕ್ಷ ಲೋಕೇಶ್ ದೂರಿದರು.
ನೀರು ಕಲುಷಿತವಾಗಿರುವುದರಿಂದ ಸುತ್ತಮುತ್ತಲಿನ ರೈತರು ಹಾಗೂ ಗ್ರಾಮಸ್ಥರು ಜೀವಭಯದ ಆತಂಕಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ನೀರಿನ ಪರೀಕ್ಷೆಗಾಗಿ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಆದರೆ, ಈವರೆಗೆ ಸಂಬಂಧಪಟ್ಟ ಇಲಾಖೆ ಮಾಹಿತಿ ನೀಡಿಲ್ಲ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ, ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಅರವಿಂದ್ ಕೆ.ಎಂ, ಸಣ್ಣ ನೀರಾವರಿ ಇಲಾಖೆ ಅಭಿಯಂತರ ಶ್ರೀನಿವಾಸ್ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.