ADVERTISEMENT

ಚಿಕ್ಕಬಳ್ಳಾಪುರ: ವರ್ಷದಲ್ಲಿ 39 ಬಾಲಕಾರ್ಮಿಕರ ಪತ್ತೆ

ಬಾಲಕಾರ್ಮಿಕ ಯೋಜನಾ ಸಂಸ್ಥೆ ಸಭೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 14:21 IST
Last Updated 8 ಏಪ್ರಿಲ್ 2025, 14:21 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಬಾಲಕಾರ್ಮಿಕ ಯೋಜನಾ ಸಂಸ್ಥೆ ಸಭೆಯಲ್ಲಿ ಜಿಲ್ಲಾಧಿಕಾರಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನಾ ಆಂದೋಲನ ಭಿತ್ತಿಪತ್ರಗಳನ್ನು ಹಾಗೂ ಕರಪತ್ರಗಳನ್ನು ಬಿಡುಗಡೆಗೊಳಿಸಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಬಾಲಕಾರ್ಮಿಕ ಯೋಜನಾ ಸಂಸ್ಥೆ ಸಭೆಯಲ್ಲಿ ಜಿಲ್ಲಾಧಿಕಾರಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನಾ ಆಂದೋಲನ ಭಿತ್ತಿಪತ್ರಗಳನ್ನು ಹಾಗೂ ಕರಪತ್ರಗಳನ್ನು ಬಿಡುಗಡೆಗೊಳಿಸಿದರು   

ಚಿಕ್ಕಬಳ್ಳಾಪುರ: ಬಾಲಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ  ಅನುಷ್ಠಾನಕ್ಕೆ ನೇಮಕಗೊಂಡಿರುವ ಇಲಾಖೆಗಳು ಬಾಲಕಾರ್ಮಿಕರನ್ನು ರಕ್ಷಣೆ ಮಾಡುವ ದಾಳಿಗಳಿಗೆ ತಮ್ಮ ಇಲಾಖೆಯ ವಾಹನಗಳನ್ನು ಬಳಸಿಕೊಳ್ಳಬಹುದು,  ಪೊಲೀಸ್ ರಕ್ಷಣೆ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ  ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬಾಲಕಾರ್ಮಿಕ ಯೋಜನಾ ಸಂಸ್ಥೆ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಮತ್ತು ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಬಾಲಕಾರ್ಮಿಕರು ಹಾಗೂ ಕಿಶೋರ ಕಾರ್ಮಿಕರ ಪತ್ತೆ ಹಾಗೂ ಪುನರ್ವಸತಿ ಕಾರ್ಯವು ನಿರಂತರವಾಗಿ ನಡೆಯುತ್ತಿದೆ. 2024ರ ಏ.1ರಿಂದ 2025ರ ಮಾ.31ರವರೆಗೆ ತಪಾಸಣೆಗಳನ್ನು ಕೈಗೊಳ್ಳಲಾಗಿದೆ ಎಂದರು.

ADVERTISEMENT

ಈ ತಪಾಸಣೆಯಲ್ಲಿ 39 ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. ಈ ಮಕ್ಕಳಿಗೆ ಸರ್ಕಾರದಿಂದ ಪುನರ್ವಸತಿ ಕಲ್ಪಿಸಲಾಗಿದೆ. ತಪ್ಪಿತಸ್ಥ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.

ಉಚಿತ ಮತ್ತು ಕಡ್ಡಾಯ ಶಿಕ್ಷಣ ಪ್ರತಿ ಮಗುವಿನ ಹಕ್ಕು. ಅದನ್ನು ಪ್ರತಿ ಮಗುವಿಗೆ ದೊರಕಿಸುವುದು ನಾಗರಿಕರ ಕರ್ತವ್ಯ. ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ಅನ್ವಯ ಎಲ್ಲಾ ಉದ್ಯೋಗ ಮತ್ತು ಕೆಲಸ ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಎಂದರು.

ಅಂತಹ ಅಪರಾಧಕ್ಕೆ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ₹ 20,000ದಿಂದ ₹ 50,000 ವರೆಗೆ ದಂಡ ಅಥವಾ ಎರಡು ಶಿಕ್ಷೆಗಳನ್ನು ವಿಧಿಸಲು ಅವಕಾಶವಿದೆ. ಬಾಲಕಾರ್ಮಿಕ ಪದ್ಧತಿ ಪ್ರೋತ್ಸಾಹಿಸುವ ಪೋಷಕರಿಗೂ ಶಿಕ್ಷೆ ವಿಧಿಸಲು ಅವಕಾಶವಿದೆ. ತಪ್ಪಿತಸ್ಥ ಮಾಲೀಕರು ಪ್ರತಿ ಮಗುವಿಗೆ ₹ 20,000ವನ್ನು ಮಕ್ಕಳ ಪುನರ್ವಸತಿಗೆ ರಚಿಸಲಾದ ಕಲ್ಯಾಣ ನಿಧಿಗೆ ಪಾವತಿಸಬೇಕು ಎಂದು ಹೇಳಿದರು. 

ಇಂತಹ ಕೃತ್ಯಗಳಲ್ಲಿ ಭಾಗಿ ಆಗುವ ಸಂಘಟನೆಗಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098ಗೆ ಕರೆಮಾಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಬಾಗೇಪಲ್ಲಿ ತಾಲೂಕಿನಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳ ವಸತಿ ಶಾಲೆ ನಿರ್ಮಾಣಕ್ಕೆ 9.38 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದರು.

ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶಬಾನಾ ಅಜ್ಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಆರ್.ಕೆ ವೆಂಕಟೇಗೌಡ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಮುನಿಕೆಂಪೇಗೌಡ, ರೇಷ್ಮೆ ಇಲಾಖೆ ಉಪನಿರ್ದೇಶಕ ಎಸ್.ಬೋಜಣ್ಣ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.