ADVERTISEMENT

ಚಿಕ್ಕಬಳ್ಳಾಪುರ: ಕೋಟಿಗೂ ಹೆಚ್ಚು ತೆರಿಗೆ ಉಳಿಸಿಕೊಂಡ ಎಪಿಎಂಸಿ

ಡಿ.ಎಂ.ಕುರ್ಕೆ ಪ್ರಶಾಂತ
Published 13 ಏಪ್ರಿಲ್ 2025, 6:48 IST
Last Updated 13 ಏಪ್ರಿಲ್ 2025, 6:48 IST
ಚಿಕ್ಕಬಳ್ಳಾಪರ ಎ‍ಪಿಎಂಸಿ ಕಾರ್ಯದರ್ಶಿ ಕಚೇರಿ
ಚಿಕ್ಕಬಳ್ಳಾಪರ ಎ‍ಪಿಎಂಸಿ ಕಾರ್ಯದರ್ಶಿ ಕಚೇರಿ   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆಯು ತನ್ನ ಆದಾಯ ಸಂಗ್ರಹಣೆಗೂ ಮುಂದಾಗುತ್ತಿಲ್ಲ. ಆದಾಯ ಸೋರಿಕೆ ತಡೆಗೂ ಗಮನವಹಿಸುತ್ತಿಲ್ಲ. ‘ಸ್ವಹಿತಾಸಕ್ತಿ’, ಪ್ರತಿಷ್ಠೆ, ರಾಜಕಾರಣವೇ ಪ್ರಮುಖವಾಗಿದೆ.

ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಅಂಗಡಿ ಮಳಿಗೆಗಳ ಮಾಲೀಕರು ನಗರಸಭೆಗೆ ಬಹಳಷ್ಟು ವರ್ಷಗಳಿಂದ ತೆರಿಗೆಯನ್ನೇ ಪಾವತಿಸಿಲ್ಲ. ಹೀಗೆ ಚಿಕ್ಕಬಳ್ಳಾಪುರ ಎಪಿಎಂಸಿ ಆವರಣದ ಮಳಿಗೆಗಳಿಂದಲೇ ನಗರಸಭೆಗೆ ₹ 1 ಕೋಟಿಗೂ ಹೆಚ್ಚು ತೆರಿಗೆ ಬಾಕಿ ಉಳಿದಿದೆ.

ಎಪಿಎಂಸಿಯಲ್ಲಿ ಒಟ್ಟು 218 ಅಂಗಡಿ ಮಳಿಗೆಗಳು ಇವೆ. ಈ ಪೈಕಿ 63 ಮಿನಿ ಅಂಗಡಿಗಳು ಮತ್ತು 155 ದೊಡ್ಡ ಅಂಗಡಿಗಳು ಇವೆ. ಐದಾರು ವರ್ಷಗಳಿಂದಲೂ ಈ ಮಳಿಗೆಗಳವರು ತೆರಿಗೆ ಪಾವತಿಸಿಲ್ಲ. ನಗರಸಭೆಯ ಅಂದಾಜಿನ ಪ್ರಕಾರ ₹ 1.40 ಕೋಟಿ ತೆರಿಗೆ ಬಾಕಿ ಇದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತೆರಿಗೆ ಬಾಕಿ ಇರಲಿ ನಗರಸಭೆ ಮತ್ತು ಎಪಿಎಂಸಿ ಅಧಿಕಾರಿಗಳ ನಿರಾಸಕ್ತಿಯೇ ಕಾರಣ ಎನ್ನಲಾಗುತ್ತಿದೆ.

ADVERTISEMENT

‘ಈ ಹಿಂದೆ ಎಪಿಎಂಸಿ ಅಧಿಕಾರಿಗಳ ಜೊತೆ ತೆರಿಗೆ ಪಾವತಿಯ ಬಗ್ಗೆ ಸಭೆ ಸಹ ನಡೆಸಿದ್ದೇವೆ. ಅಂಗಡಿ ಮಾಲೀಕರಿಗೆ ಈ ಬಗ್ಗೆ ಸೂಚಿಸುವಂತೆಯೂ ತಿಳಿಸಿದ್ದೆವು. ಆದರೆ ಅವರು ಯಾವುದೇ ಕ್ರಮವಹಿಸಲಿಲ್ಲ’ ಎಂದು ನಗರಸಭೆ ಅಧಿಕಾರಿಗಳು ತಿಳಿಸುವರು.

ಯಾವುದೇ ನಗರ ಸ್ಥಳೀಯ ಸಂಸ್ಥೆಗೆ ಆದಾಯ ಸಂಗ್ರಹ ಪ್ರಮುಖವಾಗುತ್ತದೆ. ತೆರಿಗೆ ಮೂಲಗಳೇ ನಗರಸಭೆ ಆದಾಯ ಪ್ರಮುಖ ಆಧಾರ. ಆದರೆ ಚಿಕ್ಕಬಳ್ಳಾಪುರ ನಗರಸಭೆಯು ತೆರಿಗೆ ವಸೂಲಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸದಸ್ಯರೇ ಹೇಳುತ್ತಿದ್ದಾರೆ.

ನ್ಯಾಯಾಲಯಕ್ಕೆ ಮೊರೆ:

ಒಂದೆಡೆ ಆದಾಯವನ್ನೇ ಸಂಗ್ರಹಿಸದೆ ನಗರಸಭೆ ಕೈ ಚೆಲ್ಲಿದ್ದರೆ ಮತ್ತೊಂದು ಕಡೆ ನಗರ ಸಂತೆ ಮಾರುಕಟ್ಟೆಯ ಅಂಗಡಿ ಮಳಿಗೆಗಳ ಹರಾಜು ಸಹ ಕುತೂಹಲಕ್ಕೆ ಕಾರಣವಾಗಿದೆ. 99 ಮಳಿಗೆಗಳ ಮರು ಹರಾಜಿಗೆ ಏ.16ರಂದು ಸಮಯ ನಿಗದಿಗೊಳಿಸಲಾಗಿದೆ. ಆದರೆ ಕೆಲವು ಅಂಗಡಿ ಮಳಿಗೆಗಳ ಬಾಡಿಗೆದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಏ.15ಕ್ಕೆ ಹೈಕೋರ್ಟ್ ಮುಂದೆ ವಿಚಾರಣೆ ಇದೆ. ಆದ್ದರಿಂದ 16ರ ಮಳಿಗೆ ಹರಾಜಿನ ಬಗ್ಗೆ ತೀವ್ರ ಕುತೂಹಲ ಮೂಡಿದೆ. 

ಪ್ರಭಾವಿಗಳು ನಗರ ವ್ಯಾಪ್ತಿಯ ಅರಳಿಕಟ್ಟೆಗಳನ್ನು ಒತ್ತುವರಿ ಮಾಡಿ ಅಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿದ್ದಾರೆ. ಆ ಮಳಿಗೆಗಳನ್ನು ಬಾಡಿಗೆಗೆ ಸಹ ನೀಡಿದ್ದಾರೆ. ಅರಳಿಕಟ್ಟೆಗಳ ಒತ್ತುವರಿ ತೆರವುಗೊಳಿಸುವಂತೆ ಕರ್ನಾಟಕ ಪುಲಿಕೇಶಿ ಸಂಘದ ಸದಸ್ಯರು ನಗರಸಭೆಗೆ ಮನವಿ ಸಹ ನೀಡಿದ್ದಾರೆ. ಹೀಗಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೌನವಾಗಿದ್ದಾರೆ.

ನಗರಸಭೆಯ ಆಸ್ತಿ ರಕ್ಷಿಸಬೇಕು. ನಗರಸಭೆ ಆಸ್ತಿಗಳು ಎಂದು ಫಲಕ ಅಳವಡಿಸಬೇಕು ಎಂದು ನಾಗರಿಕ ಸಂಘಟನೆಗಳು ಆಗ್ರಹಿಸುತ್ತಿವೆ. ಆದರೆ ಈ ಬಗ್ಗೆಯೂ ನಗರಸಭೆ ಜಪ್ಪಯ್ಯ ಎಂದಿಲ್ಲ.

ಹೀಗೆ ಆದಾಯ ಸೋರಿಕೆ ತಡೆ, ಆದಾಯ ಸಂಗ್ರಹಣೆಗೆ ಗಮನ, ನಗರಸಭೆ ಆಸ್ತಿಗಳ ರಕ್ಷಣೆಗೆ ಹೆಜ್ಜೆ ಇಡಬೇಕಾದ ನಗರಸಭೆ ಮಾತ್ರ ಎಲ್ಲವನ್ನೂ ಕೈ ಚೆಲ್ಲಿದೆ.

‘ಒಬ್ಬೊಬ್ಬರಾಗಿ ಪಾವತಿಸುತ್ತಿದ್ದಾರೆ’

ಎಪಿಎಂಸಿಗೆ ಈ ಬಗ್ಗೆ ತಿಳಿಸಿದ್ದೇವೆ. ಈಗ ಒಬ್ಬೊಬ್ಬರಾಗಿಯೇ ಬಂದು ತೆರಿಗೆ ಪಾವತಿಸುತ್ತಿದ್ದಾರೆ. ಇತ್ತೀಚೆಗೆ ಒಬ್ಬರು ₹ 1.20 ಲಕ್ಷ ಪಾವತಿಸಿದ್ದಾರೆ. ಉಳಿದವರೂ ಪಾವತಿಸುವ ಭರವಸೆ ನೀಡಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ದಲಿತರಿಗೆ ಮತ್ತೆ ಅನ್ಯಾಯವಾಗುವುದೇ?

ಸಂತೆ ಮಾರುಕಟ್ಟೆಯ ಮಳಿಗೆ ಹರಾಜು ನಡೆಯದಿದ್ದರೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಅನ್ಯಾಯವಾಗುತ್ತದೆ. 30 ವರ್ಷಗಳ ಹಿಂದೆ ಹರಾಜು ನಡೆದಿತ್ತು. ಆಗ ಎಸ್‌ಸಿ ಎಸ್‌ಟಿಯವರಿಗೆ ಮಳಿಗೆಗಳನ್ನು ಮೀಸಲಿಟ್ಟಿರಲಿಲ್ಲ. ಅಲ್ಲದೆ ಪೌರಾಡಳಿತ ನಿಯಮಗಳ ಪ್ರಕಾರ 12 ವರ್ಷಗಳಿಗೆ ಒಮ್ಮೆ ಮರು ಹರಾಜು ನಡೆಯಬೇಕು. ಆ ನಿಯಮವೂ ಉಲ್ಲಂಘನೆ ಆಗಿದೆ. ಈಗ 99 ಮಳಿಗೆಗಳ ಮರು ಹರಾಜು ಹಗ್ಗಜಗ್ಗಾಟದ ನಡುವೆ 16ಕ್ಕೆ ನಿಗದಿ ಆಗಿದೆ. ಎಸ್‌ಸಿ ಎಸ್‌ಟಿ ಮತ್ತು ಅಂಗವಿಕಲರಿಗೆ ಮಳಿಗೆಗಳನ್ನು ಮೀಸಲಿಡಲಾಗಿದೆ. ಮಳಿಗೆ ಹರಾಜು ನಡೆಸಬೇಕು ಎಂದು ಕೆಲವು ದಲಿತ ಸಂಘಟನೆಗಳು ಒತ್ತಾಯಿಸಿ ನಗರಸಭೆ ಮುಂದೆ ಪ್ರತಿಭಟನೆ ಸಹ ನಡೆಸಿದ್ದವು. ಒಂದು ವೇಳೆ ಮಳಿಗೆ ಹರಾಜು ನಡೆಯದಿದ್ದರೆ ಮತ್ತೆ ಪರಿಷ್ಟರಿಗೆ ಅನ್ಯಾಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.