ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ಮತ್ತು ಸಂಸದ ಡಾ.ಕೆ.ಸುಧಾಕರ್ ಸ್ವಗ್ರಾಮ ಪೆರೇಸಂದ್ರ. ವಿಧಾನಸಭಾ ಚುನಾವಣೆಯಲ್ಲಿ ಈ ಗ್ರಾಮದ ಮತದಾರರು ಪ್ರದೀಪ್ ಈಶ್ವರ್ ಅವರನ್ನು ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಸಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ಉತ್ತಮ ಮತಗಳು ದೊರೆತಿವೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಂಚಾಯಿತಿ ಕೇಂದ್ರವಾದ ಪೆರೇಸಂದ್ರವು ರಾಜಕೀಯ ಜಿದ್ದಾಜಿದ್ದಿನ ಅಖಾಡವೂ ಆಗಿದೆ. ರಾಜಕೀಯ ನಾಯಕರು ಈ ಗ್ರಾಮವನ್ನು ಪ್ರಧಾನವಾಗಿ ಇಟ್ಟುಕೊಂಡು ಸವಾಲು ಮತ್ತು ಪ್ರತಿ ಸವಾಲುಗಳನ್ನು ಸಹ ಹಾಕಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಗ್ರಾಮದಲ್ಲಿ ಲೋಕಸಭೆ, ವಿಧಾನಸಭಾ ಚುನಾವಣೆಗಳಲ್ಲಿ ಎಲ್ಲ ಪಕ್ಷಗಳ ರಾಜ್ಯ ಮಟ್ಟದ ನಾಯಕರು ರ‍್ಯಾಲಿ, ಸಮಾವೇಶಗಳನ್ನು ನಡೆಸುವರು.
ತಮಗೆ ಹೆಚ್ಚು ಮತಗಳು ದೊರೆತ ಕಾರಣವೊ ಅಥವಾ ಸ್ವಗ್ರಾಮ ಪ್ರೀತಿಯ ಕಾರಣಕ್ಕೊ ಶಾಸಕ ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರದ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಖನಿಜ ಪ್ರತಿಷ್ಠಾನದ ಹಣದಲ್ಲಿ ಅನುಷ್ಠಾನವಾಗುತ್ತಿರುವ ಕಾಮಗಾರಿಗಳಲ್ಲಿ ಹೆಚ್ಚಿನವುಗಳನ್ನು ಸ್ವಗ್ರಾಮ ಪೆರೇಸಂದ್ರಕ್ಕೆ ಮೀಸಲಿಟ್ಟಿದ್ದಾರೆ.
ಜಿಲ್ಲೆಯಲ್ಲಿನ ಗಣಿಗಾರಿಕೆ ಸಂಬಂಧಿತ ಚಟುವಟಿಕೆಗಳಿಂದ ಬಾಧಿತಗೊಂಡ ವ್ಯಕ್ತಿಗಳ ಹಾಗೂ ಪ್ರದೇಶಗಳ ಹಿತಾಸಕ್ತಿ ಮತ್ತು ಪ್ರಯೋಜನಕ್ಕಾಗಿ ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಿದ ರೀತಿಯಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಕೆಲಸ ಮಾಡುತ್ತದೆ.
2023ರ ಡಿ.28ರಂದು ನಡೆದ ಖನಿಜ ಪ್ರತಿಷ್ಠಾನ ಟ್ರಸ್ಟ್ (ಡಿಎಂಎಫ್‌ಟಿ) ಗೌರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ಜಿಲ್ಲೆಯಲ್ಲಿ ನಡೆಸಬೇಕಾದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಅನುಷ್ಠಾನ ಸಂಸ್ಥೆಗಳನ್ನು ನೇಮಿಸಿ ಸಂಬಂಧಪಟ್ಟ ಅನುಷ್ಠಾನ ಇಲಾಖೆಗಳಿಂದ ಅಂದಾಜು ಪಟ್ಟಿ ಪಡೆದು ಕಾಮಗಾರಿಗಳನ್ನು ಹಂತ ಹಂತವಾಗಿ ಅನುದಾನದ ಲಭ್ಯತೆಗೆ ಅನುದಾನ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ.
ಯಾವ ಯಾವ ಕಾಮಗಾರಿಗಳನ್ನು ಕೈಗೊಳ್ಳಬೇಕು ಎನ್ನುವ ಕ್ರಿಯಾ ಯೋಜನೆಯನ್ನು ಸಹ ರೂಪಿಸಲಾಗಿದೆ. ಆ ಪ್ರಕಾರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ 1.75 ಕೋಟಿಯ ಅಂದಾಜು ಮೊತ್ತಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ.
ಒಟ್ಟು ಐದು ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಈ ಪೈಕಿ ನಾಲ್ಕು ಕಾಮಗಾರಿಗಳು ನೇರವಾಗಿ ಪೆರೇಸಂದ್ರಕ್ಕೆ ಸಂಬಂಧಿಸಿದ್ದರೆ ಉಳಿದ ಒಂದು ಕಾಮಗಾರಿಯೂ ಪೆರೇಸಂದ್ರಕ್ಕೆ ಹೊಂದಿಕೊಂಡಂತೆ ಇದೆ.
ಯಾವ ಕಾಮಗಾರಿಗೆ ಕ್ರಿಯಾ ಯೋಜನೆ: ಪೆರೇಸಂದ್ರ ಗ್ರಾಮದ ತರಕಾರಿ ಕೃಷ್ಣಪ್ಪ ಮನೆಯಿಂದ ಅಶ್ವತ್ಥನಾರಾಯಣಚಾರಿ ಮನೆಯವರೆಗೆ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ₹ 50 ಲಕ್ಷ, ಬೀದಿ ದೀಪಗಳನ್ನು ಅಳವಡಿಸುವ ಕಾಮಗಾರಿಗೆ ₹ 35 ಲಕ್ಷ, ಪೆರೇಸಂದ್ರದ ಅಂಗನವಾಡಿ ಕೇಂದ್ರದಿಂದ ಶಾಲೆಯವರೆಗೆ ಸಿಸಿ ರಸ್ತೆ ಕಾಮಗಾರಿಗೆ ₹ 10 ಲಕ್ಷ, ಪೆರೇಸಂದ್ರದ ರಘುಪತಿ ಮನೆಯಿಂದ ಕೃಷ್ಣಮೂರ್ತಿ ಮನೆವರೆಗೆ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ₹ 30 ಲಕ್ಷಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ.
ಪೆರೇಸಂದ್ರ–ಗುಡಿಬಂಡೆ ಮುಖ್ಯರಸ್ತೆಯಿಂದ ಮುತ್ತುಕದಹಳ್ಳಿ ಗ್ರಾಮದವರೆಗಿನ ಸಿಸಿ ರಸ್ತೆ ಮತ್ತ ಚರಂಡಿ ನಿರ್ಮಾಣ ಕಾಮಗಾರಿಗೆ ₹ 50 ಲಕ್ಷಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಈ ಮೂಲಕ ಶಾಸಕರು ಸ್ವಗ್ರಾಮದ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಖನಿಜ ಪ್ರತಿಷ್ಠಾನದ ಹಣವನ್ನು ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕೆ ಮೀಸಲಿಟ್ಟಿದ್ದಾರೆ. ಡಿಎಂಎಫ್ ಹಣದಲ್ಲಿ ತಮ್ಮ ಕ್ಷೇತ್ರದ 13 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಿದ್ದಾರೆ. ಘಟಕಗಳ ನಿರ್ಮಾಣಕ್ಕೆ ₹ 1 ಕೋಟಿ ವೆಚ್ಚದ ಕ್ರಿಯಾ ಯೋಜನೆ ರೂಪಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಕಾಮಗಾರಿಗೂ ಡಿಎಂಎಫ್ ಹಣದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಬಾಗೇಪಲ್ಲಿ ಚಿಕ್ಕಬಳ್ಳಾಪುರ ಗೌರಿಬಿದನೂರು ಶಿಡ್ಲಘಟ್ಟಕ್ಕೆ ತಲಾ ₹ 25 ಲಕ್ಷ ಮತ್ತು ಗುಡಿಬಂಡೆಯಲ್ಲಿ ₹ 10 ಲಕ್ಷ ವೆಚ್ಚದ ಕ್ರಿಯಾ ಯೋಜನೆ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.