ಚಿಕ್ಕಬಳ್ಳಾಪುರ: ಇಲ್ಲಿನ ನಗರಸಭೆ ಅಧ್ಯಕ್ಷ ಎ.ಗಜೇಂದ್ರ ವಿರುದ್ಧ ಆಡಳಿತ ಪಕ್ಷದ ಸದಸ್ಯರೇ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾನ್ಯ ಸಭೆ ನಡೆಸದಿದ್ದರೆ ನಗರಸಭೆಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಡಿ.ಎಸ್.ಆನಂದರೆಡ್ಡಿ ಬಾಬು, ಇವರು ಅಧ್ಯಕ್ಷರಾಗಿ 9 ತಿಂಗಳಾಗಿದೆ. ಆದರೆ ಒಂದೇ ಒಂದು ಸಾಮಾನ್ಯ ಸಭೆ ನಡೆಸಿದ್ದಾರೆ. ಸಭೆ ನಡೆಸುವಂತೆ ಪೌರಾಯುಕ್ತರಿಗೆ ಎರಡು ಬಾರಿ ಮನವಿ ಮಾಡಿದರೂ ಗಮನವಹಿಸುತ್ತಿಲ್ಲ. ಈಗ ಅಂತಿಮ ಎಚ್ಚರಿಕೆ ನೀಡುತ್ತಿದ್ದು ಸಭೆ ನಡೆಸದಿದ್ದರೆ ನಗರಸಭೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.
ಸಾಮಾನ್ಯಸಭೆಯಲ್ಲಿ ನಗರದ ಕುಂದುಕೊರತೆಗಳು, 15ನೇ ಹಣಕಾಸು ಯೋಜನೆಯ ಅನುದಾನ ಹಂಚಿಕೆ ಸೇರಿದಂತೆ ವಿವಿಧ ವಿಚಾರಗಳನ್ನು ಚರ್ಚಿಸಬೇಕಿದೆ ಎಂದರು.
ಅಧ್ಯಕ್ಷರು ಮತ್ತು ಪೌರಾಯುಕ್ತರ ಆಡಳಿತದಲ್ಲಿ ಚಿಕ್ಕಬಳ್ಳಾಪುರವು ಅಭಿವೃದ್ಧಿಯಿಂದ ಕುಂಠಿತವಾಗಿದೆ. ಜನಪರ ಮತ್ತು ಅಭಿವೃದ್ಧಿ ಪರವಾದ ಚಿಂತನೆಗಳೇ ಇಲ್ಲ. ನಾನು ಅಧ್ಯಕ್ಷನಾಗಿದ್ದ ವೇಳೆ ಅಮೃತ್–2 ಯೋಜನೆಯಡಿ ₹ 10 ಕೋಟಿ ಅನುದಾನ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿತ್ತು. ಸರ್ಕಾರ ₹ 3 ಕೋಟಿ ಬಿಡುಗಡೆ ಮಾಡಿತು. ಇದರಲ್ಲಿ ₹ 2.60 ಕೋಟಿಯಲ್ಲಿ ಜಕ್ಕಲಮಡುಗು ಜಲಾಯಶದ ಹೂಳು ತೆಗೆಯಬೇಕಾಗಿತ್ತು. ಹೂಳು ತೆಗೆದಿದ್ದರೆ ಮತ್ತಷ್ಟು ನೀರು ಸಂಗ್ರಹಕ್ಕೆ ಅವಕಾಶವಾಗುತ್ತಿತ್ತು. ಆದರೆ ಆ ಕೆಲಸ ನಡೆದಿಲ್ಲ ಎಂದರು.
ಅನಿಲ ಚಿತಾಗಾರದ ಕೆಲಸಗಳನ್ನು ಪೂರ್ಣಗೊಳಿಸಿ ಅದನ್ನು ತಮ್ಮ ಸುಪರ್ದಿಗೆ ಪಡೆದು ನಿರ್ವಹಣೆ ಮಾಡುವ ಬಗ್ಗೆ ಇಚ್ಛಾಶಕ್ತಿ ಇಲ್ಲ. ಮಳೆಗಾಲದ ಮುನ್ನೆಚ್ಚರಿಕೆ ಕ್ರಮವಾಗಿ ಚರಂಡಿಗಳ ಹೂಳು ತೆಗೆಯಬೇಕು. ಮಳೆಗಾಲದ ಸಿದ್ಧತೆಗಳ ಬಗ್ಗೆ ಗಮನವಹಿಸಬೇಕು. ಆದರೆ ಈ ಯಾವ ಬಗ್ಗೆಯೂ ಆಲೋಚನೆಗಳು ಇಲ್ಲ. ಪೌರಾಯುಕ್ತರು ಮತ್ತು ಅಧ್ಯಕ್ಷರು ಎಲ್ಲ ವಾರ್ಡ್‌ಗಳಿಗೆ ಭೇಟಿ ನೀಡಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಬೇಕಿತ್ತು. ಆದರೆ ಇವರು ಎಲ್ಲಿಗೂ ಭೇಟಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ಸದಸ್ಯ ಸುಬ್ರಹ್ಮಣ್ಯಾಚಾರಿ ಮಾತನಾಡಿ, ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆಯ ವಿಚಾರವು ಅಜೆಂಡಾದಲ್ಲಿ ಇತ್ತು. ಆದರೆ ಅಂತಿಮವಾಗಿ ಅದನ್ನು ಕೈ ಬಿಟ್ಟಿದ್ದಾರೆ. ನಾಗರಿಕರ ‘ಇ’ ಖಾತೆ, ‘ಬಿ’ ಖಾತೆಗಳು ಆಗುತ್ತಿಲ್ಲ. ಲೇಔಟ್‌ಗಳ ಖಾತೆಗಳನ್ನು ಮಾತ್ರ ಅಧ್ಯಕ್ಷರು ಖುದ್ದಾಗಿ ಮುಂದೆ ನಿಂತು ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಾವು ಆಡಳಿತ ಪಕ್ಷದಲ್ಲಿ ಇದ್ದೇವೊ ಇಲ್ಲವೊ ಗೊತ್ತಿಲ್ಲ. ಅಧ್ಯಕ್ಷರು ಕರೆ ಸ್ವೀಕರಿಸುವುದಿಲ್ಲ. ಹಣ ಬರುವ ಕಾರ್ಯಗಳು ಇದ್ದರೆ ತಕ್ಷಣವೇ ಮಾಡುವರು. ಜನರ ಕೆಲಸಗಳನ್ನು ಮಾಡಿಕೊಡಲು ಸಾಧ್ಯವಾಗುತ್ತಿಲ್ಲ ಎಂದರು.
ಸದಸ್ಯ ಯತೀಶ್ ಮಾತನಾಡಿ, ಅಭಿವೃದ್ಧಿ ಕಾರ್ಯಗಳ ವಿಚಾರವಾಗಿ ಅಧ್ಯಕ್ಷರು, ಅಧಿಕಾರಿಗಳು ಯಾರಿಗೂ ಸ್ಪಂದಿಸುತ್ತಿಲ್ಲ. ಪ್ರತಿ ವಾರ್ಡ್‌ಗಳಿಗೂ ಭೇಟಿ ನೀಡಿಲ್ಲ. ಜಿಲ್ಲಾಧಿಕಾರಿ ಅವರು ನಗರಸಭೆಗೆ ಭೇಟಿ ನೀಡಿ ಅಧ್ವಾನಗಳ ಬಗ್ಗೆ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷರು ನಗರ ಅಭಿವೃದ್ಧಿಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದರು.
ಸದಸ್ಯ ಸತೀಶ್, ಮುಖಂಡರಾದ ಮುನಿರಾಜು, ಶ್ರೀನಿವಾಸ್ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
- ‘ನನಗೆ ಮತ ನೀಡಿಲ್ಲ’
ಗಜೇಂದ್ರ ಅವರಿಗೆ ಮತ ನೀಡಿದ್ದಕ್ಕೆ ನಮಗೆ ಬೇಸರವಿದೆ. ಇವರು ಕೇವಲ ಮೂರ್ನಾಲ್ಕು ವಾರ್ಡ್‌ಗಳಿಗೆ ಅಧ್ಯಕ್ಷರು ಎನಿಸಿದ್ದಾರೆ. 31 ವಾರ್ಡ್‌ಗೂ ಅಧ್ಯಕ್ಷರಲ್ಲ ಎಂದು ಸದಸ್ಯರು ಕಿಡಿಕಾರಿದರು. ‘ನೀವು ನನ್ನ ನೋಡಿ ಮತ ಹಾಕಿಲ್ಲ. ಸುಧಾಕರ್ ಅವರು ಹೇಳಿದ್ದಕ್ಕೆ ಮತ ಹಾಕಿದ್ದೀರಿ. ಏನಾದರೂ ಮಾಡಿಕೊಳ್ಳಿ’ ಎಂದು ಅಧ್ಯಕ್ಷರು ನಮಗೆ ಖುದ್ದಾಗಿ ಹೇಳಿದ್ದಾರೆ ಎಂದು ಸದಸ್ಯ ಸುಬ್ರಹ್ಮಣ್ಯಾಚಾರಿ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.