
ಚಿಕ್ಕಬಳ್ಳಾಪುರ: ಮೊಬೈಲ್‌ಫೋನ್ ಆಧಾರಿತ ಹಾಜರಾತಿ ವ್ಯವಸ್ಥೆ(ಕೆಎಎಎಂಎಸ್–ಕಾಮ್ಸ್) ಅನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆ ಹೆಜ್ಜೆ ಇಟ್ಟಿದೆ. ಈ ಭಾಗವಾಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಿ. ರಮೇಶ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಈ ಬಗ್ಗೆ ನಿರ್ದೇಶನ ಸಹ ನೀಡಿದ್ದಾರೆ.
ಅಲ್ಲದೆ ಜಿಲ್ಲಾ ಶಿಕ್ಷಣ ಇಲಾಖೆ ಅಂದುಕೊಂಡ ರೀತಿಯಲ್ಲಿ ಆದರೆ ‘ಕಾಮ್ಸ್’ ವ್ಯವಸ್ಥೆ ಈ ತಿಂಗಳ ಅಂತ್ಯದ ವೇಳೆಗೆ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಳ್ಳಲಿದೆ. ಸದ್ಯ ಡಿಡಿಪಿಐ ಕಚೇರಿ, ಜಿಲ್ಲೆಯ ವಿವಿಧ ಬಿಇಒ ಕಚೇರಿಗಳಲ್ಲಿ ಮೊಬೈಲ್‌ಫೋನ್ ಆಧಾರಿತ ಹಾಜರಾತಿ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದೆ.
ಈಗಾಗಲೇ ಜಿಲ್ಲೆಯ ಬಹಳಷ್ಟು ಶಾಲೆಗಳ ಶಿಕ್ಷಕರು ‘ಕಾಮ್ಸ್’ ಅಪ್ಲಿಕೇಷನ್ ಡೌನ್‌ಲೋಡ್ ಸಹ ಮಾಡಿಕೊಂಡಿದ್ದಾರೆ. ಎಚ್‌ಆರ್‌ಎಂಎಸ್‌ಗೆ ಕೆಜೆಡಿ ನಂಬರ್ ಜೋಡಣೆ ಆಗಬೇಕು. ಆ ನಂತರವೇ ಈ ವ್ಯವಸ್ಥೆ ಅನುಷ್ಠಾನ ಸಾಧ್ಯ. ಆದರೆ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಇನ್ನೂ ಕೆಜೆಡಿ ನಂಬರ್ ಜೋಡಣೆ ಆಗದ ಕಾರಣ ಹಳೇ ವ್ಯವಸ್ಥೆಯೇ ಮುಂದುವರಿದಿದೆ.
ಏನಿದು ಕಾಮ್ಸ್: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು, ಶಿಕ್ಷಕಿಯರು ಹಾಗೂ ಸಿಬ್ಬಂದಿಯ ಹಾಜರಾತಿ ಖಾತ್ರಿಗೆ ಶಾಲಾ ಶಿಕ್ಷಣ ಇಲಾಖೆಯು ತಂತ್ರಜ್ಞಾನದ ಮೊರೆ ಹೋಗಿದೆ. ಮೊಬೈಲ್‌ಫೋನ್ ಆಧಾರಿತ ಹಾಜರಾತಿ ವ್ಯವಸ್ಥೆ(ಕೆಎಎಎಂಎಸ್–ಕಾಮ್ಸ್) ಅನುಷ್ಠಾನಗೊಳಿಸುತ್ತಿದೆ. ಕಡ್ಡಾಯವಾಗಿ ತಂತ್ರಾಂಶವನ್ನು ಮೊಬೈಲ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿ ನೌಕರರೂ ಹೆಸರನ್ನು ನೋಂದಾಯಿಸಿಕೊಂಡು ಪ್ರತಿದಿನ ಹಾಜರಾತಿಯನ್ನು ಆ ತಂತ್ರಾಂಶದಲ್ಲೇ ಲಾಗಿನ್ ಹಾಗೂ ಲಾಗ್‌ಔಟ್ ಆಗುವ ಮೂಲಕ ನಿರ್ವಹಿಸಬೇಕು. ಇದು ಡಿ.20ರಿಂದಲೇ ಇದು ಜಾರಿಗೆ ಬಂದಿದೆ. ಆದರೆ ಜಿಲ್ಲೆಯಲ್ಲಿ ಇನ್ನೂ ಅನುಷ್ಠಾನದ ಹಂತದಲ್ಲಿ ಇದೆ.
ಶಾಲಾ ಶಿಕ್ಷಣ ಇಲಾಖೆಯು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ, ಇಲಾಖೆಯ ಕಚೇರಿಗಳಲ್ಲಿ ಬಯೊಮೆಟ್ರಿಕ್ ಹಾಜರಾತಿ ಯಂತ್ರಗಳನ್ನು ಕೈಬಿಟ್ಟು, ಮೊಬೈಲ್ ಆಧಾರಿತ ‘ಕಾಮ್ಸ್’ (ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ) ಜಾರಿಗೊಳಿಸಲು ಇಲಾಖೆ ಮುಂದಾಗಿದೆ.
ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಶಾಲೆಗಳ ಅಕ್ಷಾಂಶ ಹಾಗೂ ರೇಖಾಂಶಗಳು ತಂತ್ರಾಂಶದಲ್ಲಿ ನಮೂದಾಗಿರುವುದರಿಂದ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ಡಿಡಿಪಿಐ ಪತ್ರದ ಮೂಲಕ ಬಿಇಒಗಳಿಗೆ ತಿಳಿಸಿದ್ದಾರೆ.
ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಮೊಬೈಲ್ ಆಧಾರಿತ ಹಾಜರಾತಿ ತಂತ್ರಾಂಶವನ್ನು ಡೌನ್‌ಲೊಡ್ ಮಾಡಿಕೊಳ್ಳಬೇಕು. ಸದರಿ ತಂತ್ರಾಂಶದಲ್ಲಿ ಹೆಸರನ್ನು ನೋಂದಾಯಿಸಿಕೊಂಡು ಪ್ರತಿ ದಿನದ ಹಾಜರಾತಿಯನ್ನು ನಿರ್ವಹಿಸಬೇಕು ಎಂದು ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ನಿರ್ದೇಶನ ನೀಡಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ತಾಲೂಕು ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯಲ್ಲಿ ಹಾಜರಾತಿ ನಮೂದಿಸುತ್ತಿರುವ ಬಗ್ಗೆ ವರದಿ ಪಡೆದು ಜಿಲ್ಲಾ ಕಚೇರಿಗೆ ವರದಿ ನೀಡಬೇಕು. ತಂತ್ರಾಂಶದ ಬಳಕೆಯಲ್ಲಿ ಸಮಸ್ಯೆಗಳು ಉಂಟಾದಲ್ಲಿ ತಾಲ್ಲೂಕು ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಉಪನಿರ್ದೇಶಕರು ಆದೇಶಿಸಿದ್ದಾರೆ.
ಎಲ್ಲ ಶಾಲೆಗಳಲ್ಲಿಯೂ ಅನುಷ್ಠಾನ ಶೀಘ್ರ
‘ಮೊಬೈಲ್‌ಫೋನ್ ಆಧಾರಿತ ಹಾಜರಾತಿ ವ್ಯವಸ್ಥೆ ಬಗ್ಗೆ ಬಿಆರ್‌ಸಿ ಮತ್ತು ಸಿಆರ್‌ಸಿಗೆ ತರಬೇತಿ ಸಹ ನೀಡಿದ್ದೇವೆ. ಜಿಲ್ಲೆಯಲ್ಲಿರುವ ಇಲಾಖೆಯ ಎಲ್ಲ ಕಚೇರಿಗಳಲ್ಲಿ ಅನುಷ್ಠಾನವಾಗಿದೆ. ಶಾಲೆಗಳಲ್ಲಿ ಅನುಷ್ಠಾನವಾಗಬೇಕು. ಈ ತಿಂಗಳಾಂತ್ಯಕ್ಕೆ ಎಲ್ಲ ಶಾಲೆಗಳಲ್ಲಿಯೂ ಅನುಷ್ಠಾನವಾಗುತ್ತದೆ’ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಮ್ಮಲ್ಲಿ ಆಗಿಲ್ಲ’
ಈಗಾಗಲೇ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದೇವೆ. ಎಚ್‌ಆರ್‌ಎಂಎಸ್‌ಗೆ ಕೆಜೆಡಿ ನಂಬರ್ ಜೋಡಣೆಯಾಗದ ಕಾರಣ ಚಿಕ್ಕಬಳ್ಳಾಪುರದಲ್ಲಿ ಅನುಷ್ಠಾನ ಸಾಧ್ಯವಾಗಿಲ್ಲ ಎಂದು ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ರಜೆಯನ್ನೂ ಈ ಅಪ್ಲಿಕೇಷನ್‌ನಲ್ಲಿಯೇ ಹಾಕಬೇಕು. ಬೆಳಿಗ್ಗೆ ಮತ್ತು ಸಂಜೆ ನಿಗದಿತ ಸಮಯದಲ್ಲಿಯೇ ನಾವು ಹಾಜರಾತಿ ಹಾಕಬೇಕು ಎಂದರು.