ADVERTISEMENT

ಶಾಸಕರಿಂದ ಚಿಲ್ಲರೆ ರಾಜಕೀಯ: ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ

22ನೇ ವಾರ್ಡ್‌ನ ವಿನಾಯಕ ನಗರ ಮುಖ್ಯರಸ್ತೆ ಟೆಂಡರ್ ರದ್ದುಗೊಳಿಸಿದ್ದಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 6:54 IST
Last Updated 5 ಅಕ್ಟೋಬರ್ 2025, 6:54 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಂಜುನಾಥ್ ಮಾತನಾಡಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಂಜುನಾಥ್ ಮಾತನಾಡಿದರು   

ಚಿಕ್ಕಬಳ್ಳಾಪುರ: ‘ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಕ್ಷೇತ್ರದ ಅಭಿವೃದ್ಧಿ ಚಿಂತನೆ ಇಲ್ಲ. ಚಿಲ್ಲರೆ ರಾಜಕೀಯ ರೂಢಿಸಿಕೊಂಡಿದ್ದಾರೆ’ ಎಂದು ನಗರಸಭೆ ಸದಸ್ಯೆ ಸ್ವಾತಿ ಅವರ ಪತಿ ಮಂಜುನಾಥ್ ಆರೋಪಿಸಿದರು.

ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘22ನೇ ವಾರ್ಡ್ ವ್ಯಾಪ್ತಿಯ ವಿನಾಯಕನಗರದ ಮುಖ್ಯ ರಸ್ತೆ ಹಾಳಾಗಿದೆ. ನಾಗರಿಕರಿಗೆ ಸಮಸ್ಯೆ ಆಗುತ್ತಿದೆ. ಅಭಿವೃದ್ಧಿಗೆ ಕ್ರಮವಹಿಸಬೇಕು ಎಂದು ನಗರಸಭೆಗೆ ಮನವಿ ಮಾಡಿದ್ದೆವು. ಆ ಪ್ರಕಾರ ಕಾಮಗಾರಿ ಮಂಜೂರಾಗಿ ₹ 16 ಲಕ್ಷ ವೆಚ್ಚದ ಟೆಂಡರ್ ಆಗಿತ್ತು. ಕಾಮಗಾರಿ ನಡೆಯುತ್ತಿರುವಾಗಲೇ ಪ್ರದೀಪ್ ಈಶ್ವರ್ ಕಾಮಗಾರಿ  ರದ್ದುಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರು ಮತ್ತು ಅವರ ಬೆಂಬಲಿಗರು ಅಧಿಕಾರಿಗಳ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಇವರು ಮಾತೆತ್ತಿದರೆ ನಾನು ದೊಡ್ಡ ಮಟ್ಟದವನು ಎಂದು ಹೇಳಿಕೊಳ್ಳುತ್ತಾರೆ. ಆದರೆ ಚಿಲ್ಲರೆ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.

ADVERTISEMENT

ಯಾವುದೇ ರೈತರು ಸಹ ರಸ್ತೆ ಕಾಮಗಾರಿ ವಿಚಾರವಾಗಿ ದೂರು ನೀಡಿಲ್ಲ. ರೈತರೇ ಮುಂದೆ ನಿಂತು ಕಾಮಗಾರಿ ಮಾಡಿಸುತ್ತಿದ್ದಾರೆ. ಆದರೆ ಶಾಸಕರ ಸೂಚನೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾಮಗಾರಿ ರದ್ದು ಮಾಡಿದ್ದಾರೆ ಎಂದರು.

ಶಾಸಕರಾಗಿ ಎರಡೂವರೆ ವರ್ಷವಾದರೂ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. 22ನೇ ವಾರ್ಡ್‌ಗೆ ಭೇಟಿ ನೀಡಿದ ವೇಳೆ ರಾಜಕಾಲುವೆ ನಿರ್ಮಿಸುವೆ ಎಂದು ಭರವಸೆ ನೀಡಿದ್ದರು. ಆ ಭರವಸೆ ನೀಡಿ ಆರು ತಿಂಗಳಾದರೂ ಕಾಮಗಾರಿ ಆರಂಭವಾಗಿಲ್ಲ ಎಂದರು.

ಶಾಸಕರ ಸಹೋದರನ ಮನೆಯ ಬಳಿ ನಗರಸಭೆ ಹಣದಲ್ಲಿ ಎರಡು ಕೊಳವೆ ಬಾವಿ ಕೊರೆಯಲಾಗಿದೆ. ಅಲ್ಲಿ ನೀರಿನ ಸಮಸ್ಯೆ ಇಲ್ಲದಿದ್ದರೂ ಎರಡು ಕೊಳವೆ ಬಾವಿ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು. 

22ನೇ ವಾರ್ಡ್‌ನಲ್ಲಿ ಅಭಿವೃದ್ಧಿ ವಿಚಾರವಾಗಿ ಅಡ್ಡಿಗಳನ್ನು ಮಾಡಲಾಗುತ್ತಿದೆ. ಇದು ರಾಜಕೀಯ ಪ್ರೇರಿತ ಎಂದರು. 

ನಗರಸಭೆ ಸದಸ್ಯೆ ಸ್ವಾತಿ, ಕಾರ್ಮಿಕ ಸಂಘಟನೆ ಮುಖಂಡ ಮೂರ್ತಿ ಜಿ.ಬಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಬಿ.ವಿ ಆನಂದ್, ಮಂಜುನಾಥ್, ಮುನಿರಾಜು, ಪಿಳ್ಳಪ್ಪಯ್ಯ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.