ADVERTISEMENT

ಹಾವು, ನಾಯಿ ಕಡಿತಕ್ಕೆ ಬೆಚ್ಚಿದ ಚಿಕ್ಕಬಳ್ಳಾಪುರ

10 ವರ್ಷದಲ್ಲಿ 97,666 ನಾಯಿ, ನಾಲ್ಕು ವರ್ಷದಲ್ಲಿ 2,556 ಜನರಿಗೆ ಹಾವು ಕಡಿತ

ಡಿ.ಎಂ.ಕುರ್ಕೆ ಪ್ರಶಾಂತ
Published 15 ಅಕ್ಟೋಬರ್ 2025, 6:39 IST
Last Updated 15 ಅಕ್ಟೋಬರ್ 2025, 6:39 IST
ಸಾಂದರ್ಭಿಕ
ಸಾಂದರ್ಭಿಕ   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಾವು ಮತ್ತು ನಾಯಿ ಕಡಿತಕ್ಕೆ ಒಳಗಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚುತ್ತಿದೆ. ನಾಯಿ ಕಡಿತದಿಂದ ರೇಬಿಸ್ ರೋಗಕ್ಕೆ ತುತ್ತಾಗಿ ಜಿಲ್ಲೆಯಲ್ಲಿ ಜನರು ಮೃತಪಡುತ್ತಲೇ ಇದ್ದಾರೆ. ಮತ್ತೊಂದು ಕಡೆ ತೋಟಗಳಲ್ಲಿ ಕೆಲಸ ನಿರತ ರೈತರು ಸೇರಿದಂತೆ ವಿವಿಧ ವಲಯಗಳ ಜನರೂ ಹಾವು ಕಡಿತಕ್ಕೆ ಬಲಿ ಆಗುತ್ತಿದ್ದಾರೆ. 

ಹೀಗೆ ಚಿಕ್ಕಬಳ್ಳಾಪುರ ಜಿಲ್ಲೆಯ ನಾಗರಿಕರು ಹಾವು ಮತ್ತು ನಾಯಿ ಕಡಿತಕ್ಕೆ ಬೆಚ್ಚಿ ಬೀಳುತ್ತಿದ್ದಾರೆ.

ಚಿಕ್ಕಬಳ್ಳಾಪುರ ನಗರ ಸೇರಿದಂತೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಾಯಿಗಳ ಹಾವಳಿ ವಿಪರೀತವಾಗಿವೆ. ಜಿಲ್ಲೆಯ ಕೆಲವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆದು ಹಲವು ವರ್ಷಗಳೇ ಕಳೆದಿವೆ. ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಹಲವು ವರ್ಷ ಹಣ ಮೀಸಲಿಟ್ಟಿದ್ದರೂ ಶಸ್ತ್ರಚಿಕಿತ್ಸೆ ಸಾಧ್ಯವಾಗಿರಲಿಲ್ಲ. ಪ್ರಸಕ್ತ ವರ್ಷ ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆದಿದೆ. 

ADVERTISEMENT

ಇತ್ತೀಚೆಗೆ ಪೆರೇಸಂದ್ರದಲ್ಲಿ ನಾಯಿಯೊಂದು 10ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿತ್ತು. ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ದಾಳಿ ನಡೆಸಿದ ನಿದರ್ಶನಗಳು ಇವೆ. ನಾಯಿಗಳ ಉಪಟಳದ ಕಾರಣ ಕೆಲವು ಬಡಾವಣೆಗಳಲ್ಲಿ ಮನೆಗಳ ಮುಂಭಾಗದಲ್ಲಿ ಮಕ್ಕಳನ್ನು ಆಟವಾಡಲು ಬಿಡುವುದಕ್ಕೆ ಪೋಷಕರು ಭಯಪಡುತ್ತಿದ್ದಾರೆ. 

2025ರ ಸೇರಿ ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ 97,666 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಕೋವಿಡ್ ವರ್ಷಗಳಲ್ಲಿ ಜನರ ಓಡಾಟ ಕಡಿಮೆ ಇತ್ತು. ಈ ವರ್ಷಗಳಲ್ಲಿ ಮಾತ್ರ ನಾಯಿ ಕಡಿತದ ಪ್ರಕರಣಗಳು ಕಡಿಮೆ ಇವೆ. ಉಳಿದಂತೆ ಪ್ರತಿ ವರ್ಷವೂ ದೊಡ್ಡ ಸಂಖ್ಯೆಯಲ್ಲಿಯೇ ನಾಯಿ ದಾಳಿ ವರದಿಯಾಗಿವೆ.

ರೇಬೀಸ್‌ಗೆ 16 ಬಲಿ: 

ನಾಯಿ ಕಡಿತದಿಂದ 2016ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 16 ಜನರು ಮೃತಪಟ್ಟಿದ್ದಾರೆ. ಪ್ರತಿ ವರ್ಷವೂ ಒಬ್ಬರಾದರೂ ಜಿಲ್ಲೆಯಲ್ಲಿ ನಾಯಿ ಕಡಿತದಿಂದ ಮರಣಹೊಂದಿದ್ದಾರೆ. 2016ರಲ್ಲಿ ಶಿಡ್ಲಘಟ್ಟ, 2018ರಲ್ಲಿ ಬಾಗೇಪಲ್ಲಿ,2024 ಮತ್ತು 2025ರಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ತಲಾ ಒಬ್ಬರು, 2017ರಲ್ಲಿ ಶಿಡ್ಲಘಟ್ಟ ಮತ್ತು ಗೌರಿಬಿದನೂರು ತಾಲ್ಲೂಕಿನಲ್ಲಿ ತಲಾ ಒಬ್ಬರು, 2019ರಲ್ಲಿ ಗೌರಿಬಿದನೂರು ಮತ್ತು ಗುಡಿಬಂಡೆಯ ತಲಾ ಒಬ್ಬರು, 2021ರಲ್ಲಿ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ತಾಲ್ಲೂಕಿನಲ್ಲಿ ತಲಾ ಒಬ್ಬರು ನಾಯಿ ಕಡಿತದಿಂದ ಮರಣಹೊಂದಿದ್ದಾರೆ. 2022ರಲ್ಲಿ ಬಾಗೇಪಲ್ಲಿಯಲ್ಲಿ ಇಬ್ಬರು ಮತ್ತು ಗೌರಿಬಿದನೂರಿನಲ್ಲಿ ಇಬ್ಬರು, 2023ರಲ್ಲಿ ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಗೌರಿಬಿದನೂರು ತಾಲ್ಲೂಕಿನಲ್ಲಿ ತಲಾ ಒಬ್ಬರು ನಾಯಿ ಕಡಿತದಿಂದ ಜೀವ ಕಳೆದುಕೊಂಡಿದ್ದಾರೆ.

ಮತ್ತೊಂದು ಕಡೆ ಹಾವು ಕಡಿತದ ಪ್ರಕರಣಗಳೂ ಜಿಲ್ಲೆಯಲ್ಲಿ ಹೆಚ್ಚುತ್ತಿವೆ. ರೈತರು ತಮ್ಮ ಜಮೀನುಗಳಲ್ಲಿ ಕೆಲಸ ಮಾಡುವಾಗ ಸುರಕ್ಷಾ ಕ್ರಮಗಳನ್ನು ಪಾಲಿಸದಿರುವುದು, ಹೊಲ, ತೋಟಗಳಲ್ಲಿ ಓಡಾಡುವಾಗ ಹಾವು ಕಚ್ಚಿರುವ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಿವೆ. 

2025 ಸೇರಿ ನಾಲ್ಕು ವರ್ಷದಲ್ಲಿ 2,556 ಜನರಿಗೆ ಹಾವು ಕಡಿದಿದೆ. ಹೀಗೆ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹಾವು ಕಡಿತದ ಪ್ರಕರಣಗಳೂ ಏರುತ್ತಿವೆ. 

ಹಾವು ಕಡಿತಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೂರು ವರ್ಷದಲ್ಲಿ 13 ಮಂದಿ  ಜೀವ ತೆತ್ತಿದ್ದಾರೆ. 2023ರಲ್ಲಿ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ತಾಲ್ಲೂಕಿನ ತಲಾ ಒಬ್ಬರು, 2024ರಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಇಬ್ಬರು, ಗೌರಿಬಿದನೂರು ಮತ್ತು ಗುಡಿಬಂಡೆಯ ತಲಾ ಒಬ್ಬರು ಹಾವು ಕಡಿತಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. 2025ರ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಗೌರಿಬಿದನೂರು ತಾಲ್ಲೂಕಿನಲ್ಲಿ ನಾಲ್ಕು, ಗುಡಿಬಂಡೆಯಲ್ಲಿ ತಲಾ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಇಬ್ಬರು ಸಹ ಅಕ್ಟೋಬರ್‌ನಲ್ಲಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಹಾವು ಕಡಿತಕ್ಕೆ ಜೀವ ಕಳೆದುಕೊಂಡಿದ್ದು ಅವರ ಲೆಕ್ಕ ಬಾಕಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.