ADVERTISEMENT

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ತಣಿಯದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಮೇ 2025, 14:05 IST
Last Updated 10 ಮೇ 2025, 14:05 IST
ಪ್ರದೀಪ್ ಈಶ್ವರ್
ಪ್ರದೀಪ್ ಈಶ್ವರ್   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿನ ಕಾಂಗ್ರೆಸ್ ಪಕ್ಷದಲ್ಲಿನ ಬೇಗುದಿ ಮತ್ತು ಶಾಸಕ ಪ್ರದೀಪ್ ಈಶ್ವರ್‌ ಮೇಲಿನ ಅಸಮಾಧಾನ, ಪಕ್ಷದಲ್ಲಿನ ಗುಂಪುಗಾರಿಕೆ ಮತ್ತೊಮ್ಮೆ ಸ್ಫೋಟವಾಗಿದೆ. 

ಚಿಕ್ಕಬಳ್ಳಾಪುರ ಹೊರ ವಲಯದ ಚದುಲಪುರ ಕ್ರಾಸ್‌ನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಐಎಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್ ಅವರು ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಮುಖಂಡರ ಸಭೆ ನಡೆಸಿದರು.

ಮಧ್ಯಾಹ್ನದಿಂದ ಸಭೆ ಆರಂಭವಾಯಿತು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಸಭೆಯು ಕೊನೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿನ ಜಗಳ ಮತ್ತೊಮ್ಮೆ ಬೀದಿಗೆ ಬಂದಿತು. ಖುದ್ದು ವರಿಷ್ಠ ನಾಯಕರ ಮುಂದೆಯೇ ಪಕ್ಷದಲ್ಲಿನ ಅಸಮಾಧಾನ ಮತ್ತು ಬಣ ಜಗಳ ಬಯಲಾಯಿತು.

ADVERTISEMENT

ಡಾ.ಕೆ.ಸುಧಾಕರ್ ಅವರನ್ನು ಎದುರು ಹಾಕಿಕೊಂಡು ಪಕ್ಷ ಕಟ್ಟಿದ್ದೇವೆ. ಆದರೆ ಶಾಸಕರು ನಮ್ಮ ಕರೆ ಸ್ವೀಕರಿಸುವುದಿಲ್ಲ. ನಮ್ಮನ್ನು ದೂರವಿಟ್ಟಿದ್ದಾರೆ. ಗೆಲುವಿಗೆ ಶ್ರಮಿಸಿದವರನ್ನೇ ದೂರವಿಟ್ಟಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನಿಂದ ಬಂದವರಿಗೆ ಮನ್ನಣೆ ನೀಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ನಿರಾಸೆ ಹೊಂದಿದ್ದಾರೆ. ಈಗಲೇ ಎಚ್ಚೆತ್ತು ಸರಿಪಡಿಸದಿದ್ದರೆ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ ನಾಶವಾಗುತ್ತದೆ ಎಂದು ಮುಖಂಡರು ಆರೋಪಿಸಿದರು.

ಈ ಬೆಳವಣಿಗೆಗಳ ನಡುವೆ ಪ್ರದೀಪ್ ಈಶ್ವರ್ ಪರವಾಗಿ ಮಾತನಾಡಲು ಮುಂದಾದ ಮಂಡಿಕಲ್ ಮತ್ತು ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್ ಅವರ ಮೇಲೆ ಪ್ರಮುಖ ಕಾಂಗ್ರೆಸ್ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಕೈ ಮಿಸಲಾಯಿಸುವ ಹಂತಕ್ಕೂ ತಲುಪಿತ್ತು. 

‘ಪ್ರಜಾವಾಣಿ’ ಜೊತೆ ಮಾತನಾಡಿದ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವು ಮುಖಂಡರು ನಾಗಭೂಷಣ್ ಅವರ ಮೇಲೆ ಹಲ್ಲೆಯೂ ನಡೆದಿದೆ ಎಂದು ತಿಳಿಸಿದರು. ಖುದ್ದು ನಾಗಭೂಷಣ್, ‘ಹಲ್ಲೆ ನಡೆದಿಲ್ಲ. ಜೋರು ಜೋರಾಗಿ ಮಾತುಗಳು ಆದವು’ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರದೀಪ್ ಈಶ್ವರ್‌ಗೆ ಟಿಕೆಟ್ ನೀಡಿ ಎಂದಿದ್ದ ಮತ್ತು ಅವರ ಚುನಾವಣೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದ ಕಾಂಗ್ರೆಸ್‌ನ ಪ್ರಮುಖ ಮುಖಂಡರೇ ಇಂದು ಶಾಸಕರ ವಿರುದ್ಧ ಇದ್ದಾರೆ. ಇದು ಜಿಲ್ಲೆಯ ಕಾಂಗ್ರೆಸ್‌ನ ಎಲ್ಲರಿಗೂ ತಿಳಿದ ವಿಚಾರ. ಈ ಗುಂಪಿನಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರು, ಜಿ.ಪಂ ಮಾಜಿ ಸದಸ್ಯರು, ನಗರಸಭೆ ಸದಸ್ಯರು ಹೀಗೆ ದೊಡ್ಡ ಸಂಖ್ಯೆಯಲ್ಲಿಯೇ ಇದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ದಶಕಗಳಿಂದ ಕಾಂಗ್ರೆಸ್‌ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರದೀಪ್ ಈಶ್ವರ್ ಗೆಲುವಿನ ನಂತರ ಕಾಂಗ್ರೆಸ್ ಚಿಕ್ಕಬಳ್ಳಾಪುರದಲ್ಲಿ ಎರಡು ಬಣಗಳಾಗಿವೆ.

‘ಶಾಸಕರು ತಮಗೆ ಸ್ಪಂದಿಸುತ್ತಿಲ್ಲ. ಬಹಿರಂಗವಾಗಿಯೇ ನಮಗೆ ಮುಖಂಡರ ಅಗತ್ಯವಿಲ್ಲ ಎಂದೇ ಹೇಳುತ್ತಿದ್ದಾರೆ. ಗ್ರಾಮಗಳಿಗೆ ಭೇಟಿ ನೀಡಿದಾಗಲೂ ಸ್ಥಳೀಯ ಮುಖಂಡರಿಗೆ ತಿಳಿಸುವುದಿಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಥಿತಿ ಕಷ್ಟವಾಗುತ್ತಿದೆ. ಸಂಘಟನೆಯೂ ಇಲ್ಲ. ಪಕ್ಷದ ಕಾರ್ಯಕ್ರಮಗಳಲ್ಲಿಯೂ ಶಾಸಕರು ಪಾಲ್ಗೊಳ್ಳುವುದಿಲ್ಲ’ ಎಂದು ಅಭಿಷೇಕ್ ದತ್ ಬಳಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಪಿಎಲ್‌ಡಿ ಬ್ಯಾಂಕ್, ನಗರಸಭೆ ಮತ್ತು ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದೇವೆ. ಸಂಘಟನೆ ಇಲ್ಲದಿದ್ದರೆ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸುವುದಾದರೂ ಹೇಗೆ ಎಂದರು.

ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಹುರುಪಿನಿಂದ ಸಜ್ಜಾಗಬೇಕಾಗಿದ್ದ ಕಾಂಗ್ರೆಸ್‌ ಪಕ್ಷದಲ್ಲಿ ಈಗ ಅಸಮಾಧಾನದ ಹೊಗೆ ಎದ್ದಿದೆ. ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ಹೂಡಿಕೆ ಯಾರು ಮಾಡುತ್ತಾರೆ? ಎಲ್ಲರೂ ಒಗ್ಗಟ್ಟಿನಿಂದ ನಡೆಯುವರೇ ಅಥವಾ ಆ ಚುನಾವಣೆಯ ವೇಳೆಯೂ ಗೊಂದಲ ಮುಂದುವರೆಯುವುದೇ ಎನ್ನುವ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.