ADVERTISEMENT

ಚಿಕ್ಕಬಳ್ಳಾಪುರ: 30 ಪರಿಸರ ಎಂಜಿನಿಯರ್‌ಗಳ ಭೇಟಿ

ಗೊಬ್ಬರಕ್ಕಾಗಿ ರೈತರಿಗೆ ಹಸಿ ಕಸ ಪೂರೈಕೆ ವೀಕ್ಷಿಸಿದ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 21 ಮೇ 2025, 15:33 IST
Last Updated 21 ಮೇ 2025, 15:33 IST
ಚಿಕ್ಕಬಳ್ಳಾಪುರದ ಅಣಕನೂರಿನಲ್ಲಿ ನಗರಸಭೆ ಮತ್ತು ರೈತರ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಹಸಿಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಘಟಕಗಳಿಗೆ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳ 30 ಪರಿಸರ ಎಂಜಿನಿಯರ್‌ಗಳು ಭೇಟಿ ನೀಡಿದ್ದರು
ಚಿಕ್ಕಬಳ್ಳಾಪುರದ ಅಣಕನೂರಿನಲ್ಲಿ ನಗರಸಭೆ ಮತ್ತು ರೈತರ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಹಸಿಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಘಟಕಗಳಿಗೆ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳ 30 ಪರಿಸರ ಎಂಜಿನಿಯರ್‌ಗಳು ಭೇಟಿ ನೀಡಿದ್ದರು   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆಯು ತನ್ನಲ್ಲಿ ನಿತ್ಯ ಉತ್ಪತ್ತಿ ಆಗುತ್ತಿರುವ ಹಸಿ ಕಸವನ್ನು ಗೊಬ್ಬರವನ್ನಾಗಿ ರೂಪಿಸಲು ರೈತರಿಗೆ ನೀಡುತ್ತಿದೆ. ನಗರಸಭೆಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿ ಸರ್ಕಾರವು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಸಹ ನೀಡಿದೆ. ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವ ಈ ಕಾರ್ಯ ಗಮನ ಸೆಳೆದಿದೆ. 

ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳ 30 ಪರಿಸರ ಎಂಜಿನಿಯರ್‌ಗಳು ಮಂಗಳವಾರ ಇಲ್ಲಿನ ನಗರಸಭೆಗೆ ಭೇಟಿ ನೀಡಿದ್ದರು. ಅಧಿಕಾರಿಗಳಿಂದ ಮಾಹಿತಿ ಪಡೆದು ಅಣಕನೂರಿನ ರೈತರ ಗೊಬ್ಬರದ ತಾಕುಗಳಿಗೆ ಭೇಟಿ ನೀಡಿದರು.

ರೈತರಿಂದ ಗೊಬ್ಬರ, ಅದರ ಬಳಕೆ, ನಗರಸಭೆಯಿಂದ ಆಗುತ್ತಿರುವ ಅನುಕೂಲಗಳ ಮಾಹಿತಿ ಪಡೆದರು. ನಗರಸಭೆಯಲ್ಲಿ ನಿತ್ಯ ಎಷ್ಟು ಟನ್ ಹಸಿ ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಅದನ್ನು ಯಾವ ರೀತಿಯಲ್ಲಿ ಎಷ್ಟು ರೈತರಿಗೆ ಗೊಬ್ಬರಕ್ಕಾಗಿ ನೀಡಲಾಗುತ್ತಿದೆ. ರೈತರು ಗೊಬ್ಬರವನ್ನಾಗಿ ಮಾಡಿ ಯಾವುದಕ್ಕೆ ಬಳಕೆ ಮಾಡುತ್ತಿದ್ದಾರೆ ಎನ್ನುವ ಸಮಗ್ರ ಮಾಹಿತಿ ಪಡೆದರು.

ADVERTISEMENT

ಈ ವೇಳೆ ರೈತರು ‘ಈ ಗೊಬ್ಬರವು ಬೆಳೆಗಳಿಗೆ ಅನುಕೂಲವಾಗಿದೆ. ಬೇಡಿಕೆಯೂ ಇದೆ. ನಮ್ಮ ಹೊಲಗಳಲ್ಲಿನ ಬೆಳೆಗೆ ಬಳಸುತ್ತಿದ್ದೇವೆ’ ಎಂದು ಪ್ರಾತ್ಯಕ್ಷಿಕೆಯ ಜೊತೆಗೆ ವಿವರಿಸಿದರು. 

ಪರಿಸರ ಎಂಜಿನಿಯರ್‌ಗಳ ತಂಡವು ನಗರಸಭೆ ಆವರಣದಲ್ಲಿ ನಿರ್ಮಿಸಿರುವ ಪೌರಕಾರ್ಮಿಕರ ವಿಶ್ರಾಂತಿ ಗೃಹಕ್ಕೂ ಭೇಟಿ ನೀಡಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ನಗರಸಭೆ ಮತ್ತು ರೈತರ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಕಸ ವಿಲೇವಾರಿಗೆ ಒಂದು ವರ್ಷವಾಗಿದೆ. ಇದು ರಾಜ್ಯದಲ್ಲಿ ಮಾದರಿ ಎನ್ನುವ ಯೋಜನೆಯಾಗಿದೆ. ಸರಳವಾಗಿ ನಡೆಯುತ್ತಿರುವ ಈ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೀವು ಸಹ ನಿಮ್ಮ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಮಾದರಿಯನ್ನು ಜಾರಿಗೊಳಿಸಬಹುದು ಎಂದು ಪರಿಸರ ಎಂಜಿನಿಯರ್‌ಗಳಿಗೆ ಸಲಹೆ ನೀಡಿದರು.

ಇದು ಕಸವು ರಸವಾಗುವ ಪ್ರಕ್ರಿಯೆ. ಇಂತಹ ಮಾದರಿಗಳನ್ನು ಅಳವಡಿಸಿಕೊಳ್ಳುವುದರಿಂದ ನಗರಸಭೆ ಮತ್ತು ರೈತರಿಗೆ ಅನುಕೂಲವಾಗಿದೆ. ತ್ಯಾಜ್ಯ ನಿರ್ವಹಣೆಯೂ ಸುಲಭವಾಗಿದೆ ಎಂದು ಹೇಳಿದರು.

ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ನಿರ್ದೇಶಕಿ ಮಾಧವಿ, ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ಪರಿಸರ ಎಂಜಿನಿಯರ್ ಪಿ.ಉಮಾಶಂಕರ್ ಮತ್ತಿತರರು ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.