ಚಿಕ್ಕಬಳ್ಳಾಪರ: ವಿವಿಧ ಕೃಷಿ ಪರಿಕರಗಳನ್ನು ಆಯಾ ಕಾಯ್ದೆಗಳ ಅನುಸಾರ ಯಾವುದೇ ಕೊರತೆ, ಲೋಪದೋಷಗಳಾಗದಂತೆ ರೈತರಿಗೆ ವಿತರಿಸಬೇಕು ಎಂದು ಉಪ ಕೃಷಿ ನಿರ್ದೇಶಕಿ ಜಿ. ದೀಪಶ್ರೀ ಕೃಷಿ ಪರಿಕರ ಮಾರಾಟಗಾರರಿಗೆ ಸೂಚಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕೃಷಿ ಪರಿಕರ ಮಾರಾಟಗಾರರ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಪೂರೈಕೆ ಮತ್ತು ಸಮರ್ಪಕ ನಿರ್ವಹಣೆ ಕುರಿತ ಸಭೆಯಲ್ಲಿ ಮಾತನಾಡಿದರು.
ತಾಲ್ಲೂಕಿನ ಎಲ್ಲಾ ಕೃಷಿ ಪರಿಕರ ಮಾರಾಟಗಾರರಿಗೆ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ, ಕೀಟನಾಶಕಗಳು ಮತ್ತು ಬಿತ್ತನೆ ಬೀಜ ವಿತರಿಸುವ ಸಂದರ್ಭದಲ್ಲಿ ಅವುಗಳ ಗುಣಮಟ್ಟ ಖಾತ್ರಿ ಪಡಿಸಿಕೊಂಡು ನಿಗದಿತ ದರಗಳಲ್ಲಿ ಮಾರಾಟ ಮಾಡಬೇಕು. ರಸಗೊಬ್ಬರಗಳ ದಾಸ್ತಾನು ದರ ಪಟ್ಟಿಯನ್ನು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಬೇಕು ಎಂದು ಹೇಳಿದರು.
ವಿವಿಧ ಪರಿಕರಗಳನ್ನು ಖರೀದಿಸುವ ರೈತರಿಗೆ ರಸೀದಿಯನ್ನು ಕಡ್ಡಾಯವಾಗಿ ಸೂಕ್ತ ವಿವರಗಳೊಂದಿಗೆ ನೀಡಬೇಕು. ವಿವಿಧ ಪರಿಕರಗಳ ದಾಸ್ತಾನು ವಿವರಗಳನ್ನು ಇಲಾಖೆಗೆ ಕಾಲಕಾಲಕ್ಕೆ ಸಲ್ಲಿಸಬೇಕು. ರಸಗೊಬ್ಬರಗಳನ್ನು ರೈತರ ಆಧಾರ್ ಕಾರ್ಡ್ ಪಡೆದು ಪಿ.ಓ.ಎಸ್ ಯಂತ್ರದ ಮೂಲಕವೇ ವಿತರಿಸಬೇಕು. ರಸಗೊಬ್ಬರ ಬಿತ್ತನೆ ಬೀಜ ಮತ್ತು ಕೀಟನಾಶಕ ಕಾಯ್ದೆಗಳ ಅನುಸಾರ ವಹಿವಾಟು ನಡೆಸಬೇಕು ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಸಿ. ಮುನಿರಾಜ ಮಾತನಾಡಿ, ವಿವಿಧ ಕೃಷಿ ಪರಿಕರಗಳನ್ನು ನಿಗದಿತ ದರದಲ್ಲಿ ಮಾರಾಟ ಮಾಡಬೇಕು. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಡಿಎಪಿ ಗೊಬ್ಬರ ಸರಬರಾಜು ಮತ್ತು ವಿತರಣೆಯನ್ನು ವ್ಯವಸ್ಥಿತವಾಗಿ ಮಾಡಬೇಕು. ಡಿಎಪಿ ಗೊಬ್ಬರದ ಬದಲಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಸಂಯುಕ್ತ ಗೊಬ್ಬರಗಳನ್ನು ಬಳಸಲು ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಮಾರಾಟಗಾರರಿಗೆ ಸೂಚಿಸಿದರು.
ಡಿಎಪಿ ಗೊಬ್ಬರದಲ್ಲಿ ಸಾರಜನಕ ಮತ್ತು ರಂಜಕ ಪ್ರಧಾನ ಪೋಷಕಾಂಶಗಳು ಮಾತ್ರ ಇವೆ. ಬೆಳೆಗಳಿಗೆ ಬೇಕಾಗುವ ಪ್ರಮುಖ ಇನ್ನೊಂದು ಪ್ರಧಾನ ಪೋಷಕಾಂಶ ಪೊಟ್ಯಾಶ್ ಇರುವುದಿಲ್ಲ. ಇದರಿಂದ ಗಿಡಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಡಿಎಪಿ ಬಳಸುವುದರಿಂದ ಮಣ್ಣಿನಲ್ಲಿ ರಂಜಕ ಅಂಶ ಹೆಚ್ಚಾಗುತ್ತದೆ. ಅಗತ್ಯವಾದ ಲಘು ಪೋಷಕಾಂಶಗಳಾದ ಸತು (ಜಿಂಕ್) ಮತ್ತು ಕಬ್ಬಿಣದ ಕೊರತೆ ಉಂಟಾಗುತ್ತದೆ. ಬೆಳೆ ಇಳುವರಿ ಕಡಿಮೆಯಾಗುತ್ತದೆ ಎಂದು ಹೇಳಿದರು.
ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಮಂಜುನಾಥ್, ರೈತರಿಗೆ ಸಕಾಲದಲ್ಲಿ ಗುಣಮಟ್ಟದ ಕೃಷಿ ಪರಿಕರಗಳನ್ನು ನೀಡಲಾಗುವುದು. ಪರಿಕರಗಳ ಮಾರಾಟಗಾರರು ಇಲಾಖೆಯ ಇತರೆ ಯೋಜನೆಗಳ ಬಗ್ಗೆ ಹೆಚ್ಚಿನ ರೈತರಿಗೆ ಮಾಹಿತಿ ನೀಡಬೇಕು ಎಂದರು.
ಕೃಷಿ ಅಧಿಕಾರಿ ವಿ. ರಾಮಚಂದ್ರ, ನಯನಾ ದೇವಿ, ಕೃಷಿ ಇಲಾಖೆಯ ಸಿಬ್ಬಂದಿ ಮತ್ತು ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಮಾರಾಟಗಾರರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.