ADVERTISEMENT

SSLC | ಶೇ 50ಕ್ಕಿಂತ ಕಡಿಮೆ ಫಲಿತಾಂಶ: ಸರ್ಕಾರಿ ಅಧಿಕಾರಿಗಳಿಗೆ 52 ಶಾಲೆ ದತ್ತು

ಡಿ.ಎಂ.ಕುರ್ಕೆ ಪ್ರಶಾಂತ
Published 31 ಆಗಸ್ಟ್ 2025, 7:41 IST
Last Updated 31 ಆಗಸ್ಟ್ 2025, 7:41 IST
ರವೀಂದ್ರ
ರವೀಂದ್ರ   

ಚಿಕ್ಕಬಳ್ಳಾಪುರ: ಜಿಲ್ಲೆಯು ಕಳೆದ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 63.20 ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 22ನೇ ಸ್ಥಾನಕ್ಕೆ ಕುಸಿದಿತ್ತು. ಈ ಕಳಪೆ ಫಲಿತಾಂಶ ತೀವ್ರ ಟೀಕೆಗೆ ಗುರಿಯಾಗಿತ್ತು. 

2025–26ನೇ ಸಾಲಿನಲ್ಲಿ ಈ ಹಿಂದಿನ ವರ್ಷದ ಕಳಪೆ ಫಲಿತಾಂಶವನ್ನು ಮರೆಸಲು ಮತ್ತು ಉತ್ತಮ ಫಲಿತಾಂಶವನ್ನು ಪಡೆಯಲು ಶಿಕ್ಷಣ ಇಲಾಖೆಯು ಈಗಿನಿಂದಲೇ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. 

ಈಗ 2025–26ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗಾಗಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಜಿಲ್ಲಾ ಅಧಿಕಾರಿಗಳಿಗೆ ಶಾಲೆಗಳನ್ನು ದತ್ತು  ನೀಡಲಾಗಿದೆ. ಕಳೆದ ಬಾರಿ ಶೇ 50ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಸರ್ಕಾರಿ ಪ್ರೌಢಶಾಲೆಗಳನ್ನು ಈ ದತ್ತು ಯೋಜನೆಗೆ ಆಯ್ಕೆ ಮಾಡಲಾಗಿದೆ. 

ADVERTISEMENT

ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ವಿವಿಧ ಇಲಾಖೆಗಳು, ನಿಗಮಗಳ ಜಿಲ್ಲಾ ಅಧಿಕಾರಿಗಳು ಶಾಲೆಗಳನ್ನು ದತ್ತು ಪಡೆದಿದ್ದಾರೆ. ಈ ದತ್ತು ಪ್ರಕ್ರಿಯೆ ಫಲಿತಾಂಶ ವೃದ್ಧಿಗೆ ಕಾರಣವಾಗಲಿದೆ ಎನ್ನುವ ವಿಶ್ವಾಸವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸುವರು.

‘ಪರೀಕ್ಷಾ ಫಲಿತಾಂಶದ ವೃದ್ಧಿಗಾಗಿ ಜಿಲ್ಲೆಯ ಇತರೆ ಇಲಾಖೆಗಳ ಅಧಿಕಾರಿಗಳ ಸಹಕಾರ ಅಗತ್ಯ’ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕರು ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿದ್ದರು.

ಶೇ 50ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಸರ್ಕಾರಿ ಪ್ರೌಢಶಾಲೆಗಳಲ್ಲಿ ಫಲಿತಾಂಶ ವೃದ್ಧಿಗೊಳಿಸುವ ಹಿನ್ನೆಲೆಯಲ್ಲಿ ಪ್ರೌಢಶಾಲೆಗಳನ್ನು ದತ್ತು ನೀಡಲು ಪಟ್ಟಿ ಸಿದ್ದಪಡಿಸಿ ಅನುಮೋದನೆ ನೀಡುವಂತೆ ಕೋರಿದ್ದರು.  

ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಸುಧಾರಿಸಲು ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕೆ ಪರಿವೀಕ್ಷಿಸಬೇಕು. ಮುಖ್ಯ ಶಿಕ್ಷಕರು ಮತ್ತು ಎಲ್ಲ ಸಹ ಶಿಕ್ಷಕರಿಗೆ ಮಾರ್ಗದರ್ಶನ ನೀಡಬೇಕಾಗಿದೆ.

ಯಾವ ಶಾಲೆ; ಯಾವ ಅಧಿಕಾರಿ ದತ್ತು: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಬಾಗೇಪಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ, ಜಿ.ಪಂ ಸಿಇಒ ಡಾ.ವೈ.ನವೀನ್ ಭಟ್ ಗೌರಿಬಿದನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಬಾಗೇಪಲ್ಲಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಜಿ.ಪಂ ಉಪಕಾರ್ಯದರ್ಶಿ ಅತಿಕ್ ಪಾಷಾ ಮಂಚೇನಹಳ್ಳಿಯ ಸರ್ಕಾರಿ ‍ಪ್ರೌಢಶಾಲೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ತೇಜಾನಂದರೆಡ್ಡಿ ಗೌರಿಬಿದನೂರಿನ ಕೋಟೆ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ದತ್ತು ಪಡೆದಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆದಿಶೇಷರಾವ್ ಗೌರಿಬಿದನೂರಿನ ದಾರಿನಾಯಕನಪಾಳ್ಯದ ಕೆಪಿಎಸ್ ಶಾಲೆ, ಜಿಲ್ಲಾ ವಕ್ಪ್ ಅಧಿಕಾರಿ ನವೀದ್ ಚಿಂತಾಮಣಿಯ ನೂತನ ಪ್ರೌಢಶಾಲೆ, ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ  ಅಲೀಪುರದ ಸರ್ಕಾರಿ ಪ್ರೌಢಶಾಲೆ, ರೇಷ್ಮೆ ಇಲಾಖೆ ಉಪನಿರ್ದೇಶಕ ಮರಿಯಪ್ಪ  ಚಿಕ್ಕಬಳ್ಳಾಪುರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ, ಡಿಎಚ್‌ಒ ಡಾ.ಮಹೇಶ್ ಕುಮಾರ್ ಅವರಿಗೆ ಅಲಕಾಪುರ ಸರ್ಕಾರಿ ಪ್ರೌಢಶಾಲೆ, ಸಹಕಾರ ಸಂಘಗಳ ಉಪನಿಬಂಧಕ ಶಂಕರ್ ಅವರಿಗೆ ಗುಡಿಬಂಡೆಯ ಬಾಲಕಿಯರ ಪ್ರೌಢಶಾಲೆ, ಜಿಲ್ಲಾ ಆಯುಷ್ ಅಧಿಕಾರಿ ತಬೀಬಾ ಭಾನು ಅವರಿಗೆ ಮಂಡಿಕಲ್ಲು ಕೆಪಿಎಸ್ ಶಾಲೆ ದತ್ತು ನೀಡಲಾಗಿದೆ.

ವಾಲ್ಮೀಕಿ ನಿಗಮದ ವ್ಯವಸ್ಥಾಪಕ ಶ್ರೀನಿವಾಸ್‌ಗೆ ಗುಡಿಬಂಡೆ ಕೆಪಿಎಸ್ ಶಾಲೆ, ಜಿಲ್ಲಾ ಸಾಂಖ್ಯ ಸಂಗ್ರಹಣಾಧಿಕಾರಿ ಶಿವಕುಮಾರ್‌ಗೆ ಪೆರೇಸಂದ್ರ ಪ್ರೌಢಶಾಲೆ, ಎಪಿಎಂಸಿ ನಿರ್ದೇಶಕಿ ವಿನುತಾ ಶಿಡ್ಲಘಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಾವೀದಾ ಖಾನಂ ಅವರಿಗೆ ಪಾತಪಾಳ್ಯ ಪ್ರೌಢಶಾಲೆ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಗಾಯತ್ರಿ ಅವರಿಗೆ ಆವಲಗುರ್ಕಿ ಪ್ರೌಢಶಾಲೆ, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಉಪನಿರ್ದೇಶಕರಿಗೆ ಪೋಶೆಟ್ಟಿಹಳ್ಳಿ ಪ್ರೌಢಶಾಲೆ, ಪರಿಸರ ಅಧಿಕಾರಿ ದೊಡ್ಡಶರಣಯ್ಯ ಅವರಿಗೆ ತಿಮ್ಮಂಪಲ್ಲಿ ಪ್ರೌಢಶಾಲೆ, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ವಿಷ್ಣು ಕಾಮತ್‌ಗೆ ವಾಟದ ಹೊಸಹಳ್ಳಿ ಪ್ರೌಢಶಾಲೆ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕರ ಎಂ.ಜುಂಜಣ್ಣ ಅವರಿಗೆ ವರ್ಲಕೊಂಡ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ್ ಅವರಿಗೆ ಯಲ್ಲಂಪಲ್ಲಿ ಶಾಲೆ,  ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ರಂಗಪ್ಪ ಅವರಿಗೆ ನಂದಿ ಪ್ರೌಢಶಾಲೆ ದತ್ತು ನೀಡಲಾಗಿದೆ. 

ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್ ಲತಾ ಅವರಿಗೆ ನಗರಗೆರೆ, ಜಿಲ್ಲಾ ಕಾರ್ಮಿಕ ಅಧಿಕಾರಿ ಶಬಾನ ಅಜ್ಮಿ ಅವರಿಗೆ ತಗಳವಾರ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ವಿಶ್ವನಾಥ್ ಅವರಿಗೆ ಯಲ್ಲೋಡು, ಅಬಕಾರಿ ಉಪ ಆಯುಕ್ತ ನರೇಂದ್ರ ಬಾಬುಗೆ ರೆಡ್ಡಿಗೊಲ್ಲವಾರಹಳ್ಳಿ, ಗ್ರಂಥಾಲಯ ಅಧಿಕಾರಿ ಶಂಕರಪ್ಪಗೆ ಸೊನಗಾನಹಳ್ಳಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರವೀಣ್ ಪಾಟೀಲ್‌ಗೆ ಚಿಂತಾಮಣಿಯ ಬಾಲಕರ ಪ್ರೌಢಶಾಲೆ, ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ರಮೇಶ್‌ಗೆಗೆ ಬಶೆಟ್ಟಹಳ್ಳಿ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿ ಸಭಾ ಅಂಜುಮ್ ಅವರಿಗೆ ದ್ಯಾವಪ್ಪಗುಡಿ ಶಾಲೆ ಜವಾಬ್ದಾರಿ ನೀಡಲಾಗಿದೆ.

ಮೀನುಗಾರಿಗೆ ಉಪನಿರ್ದೇಶಕ ವಿಶ್ವನಾಥ್ ಅವರಿಗೆ ಸೋಮನಾಥಪುರ, ಕ್ರೆಡಲ್ ಎಂಜಿನಿಯರ್ ಗೌತಮಿಗೆ ಹಳೇಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್‌ಗೆ ಆನೆಮಡಗು, ಸ್ಥಳೀಯ ಲೆಕ್ಕಪರಿಶೋಧನ ಇಲಾಖೆಯ ಸಹಾಯಕ ನಿರ್ದೇಶಕ ಮುರುಗೇಶ್‌ಗೆ ಜಂಗಮಕೋಟೆ, ಕಾನೂನು ಮಾಪನ ಇಲಾಖೆ ಸಹಾಯಕ ನಿಯಂತ್ರಕ ಚೌಡಪ್ಪಗೆ ಪಲ್ಲಿಚೆರ್ಲು, ಕೌಶಾಲಾಭಿವೃದ್ಧಿ ಅಧಿಕಾರಿ ಪ್ರಸಾದ್‌ಗೆ ಚಿನ್ನಸಂದ್ರ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಯಶವಂತ್‌ಗೆ ವರದನಾಯಕನಹಳ್ಳಿ, ವಾಲ್ಮೀಕಿ ನಿಗಮದ ಶ್ರೀನಿವಾಸ್‌ಗೆ ಉಲ್ಲೋಡು, ನಿರ್ಮಿತಿ ಕೇಂದ್ರದ ತೇಜಸ್ ರೆಡ್ಡಿಗೆ ಕಾದಲವೇಣಿ, ಅಗ್ನಿಶಾಮಕ ಅಧಿಕಾರಿ ಸಿದ್ದೇಗೌಡ ಗೆ ನಾಗಸಂದ್ರ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ಕೆಳಗಿನ ಮನಿಗೆ ಚಿಕ್ಕಬಳ್ಳಾಪುರದ ಮೌಲಾನ ಆಜಾದ್ ಮಾದರಿ ಶಾಲೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವೆಂಕಟೇಶರೆಡ್ಡಿಗೆ ನಲ್ಲಗುಟ್ಟಹಳ್ಳಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಪದ್ಮಜಾ ಅವರಿಗೆ ಶಿಡ್ಲಘಟ್ಟದ ಉರ್ದು ಪ್ರೌಢಶಾಲೆ, ಅಂಗವಿಕಲ ಕಲ್ಯಾಣಾಧಿಕಾರಿ ಜ್ಯೋತಿ ಲಕ್ಷ್ಮಿಗೆ ದೊಡ್ಡಬೊಮ್ಮನಹಳ್ಳಿ, ಪಿಎಂಜಿಎಸ್‌ವೈ ಕಾರ್ಯಪಾಲಕ ಎಂಜಿನಿಯರ್ ಶರತ್‌ಗೆ ಕೋರ್ಲಪರ್ತಿ, ಗೃಹಮಂಡಳಿಯ ಸೌಮ್ಯಗೆ ಮಿಣಕನಗುರ್ಕಿ, ಹಿರಿಯ ಭೂವಿಜ್ಞಾನಿ ಬೋರಪ್ಪ ಅವರಿಗೆ ಚೇಳೂರು ಕೆಪಿಎಸ್ ಶಾಲೆ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸರೆಡ್ಡಿಗೆ ಪಾಳ್ಯಕೆರೆ, ಲೋಕೋ‍‍ಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಗಿರೀಶ್‌ಗೆ ಕುರೂಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮುನಿರತ್ನಮ್ಮ ಅವರಿಗೆ ಸಂತೇಕಲ್ಲಹಳ್ಳಿ, ದೇವರಾಜ ಅರಸು ನಿಗಮದ ವ್ಯವಸ್ಥಾಪಕ ಶಿವಾನಂದರೆಡ್ಡಿಗೆ ಚೆಂಡೂರು ಪ್ರೌಢಶಾಲೆಯನ್ನು ದತ್ತು ನೀಡಲಾಗಿದೆ.

‘ತಿಂಗಳಿಗೆ ಎರಡು ಬಾರಿ ಭೇಟಿ’
ಸದರಿ ಅಧಿಕಾರಿಗಳು ದತ್ತು ನೀಡಿರುವ ಶಾಲೆಗಳಿಗೆ ತಿಂಗಳಿಗೆ ಕನಿಷ್ಠ ಎರಡ ಬಾರಿ ಭೇಟಿ ನೀಡಬೇಕು. ಶಾಲೆಯ ಶೈಕ್ಷಣಿಕ ಪ್ರಗತಿ ಪರಿಶೀಲಿಸಬೇಕು. ಫಲಿತಾಂಶದ ಪ್ರಗತಿಗಾಗಿ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳನ್ನು ಪರಿಶೀಲಿಸಬೇಕು. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ. ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ದತ್ತುಪಡೆದಿರುವ ಅಧಿಕಾರಿಗಳ ಸಲಹೆಗಳನ್ನು ಸ್ವೀಕರಿಸಿ ಅನುಪಾಲನೆ ಮಾಡಬೇಕು. ಈ ಮೂಲಕ ಫಲಿತಾಂಶ ವೃದ್ಧಿಗೆ ಕ್ರಮವಹಿಸಬೇಕು ಎಂದಿದ್ದಾರೆ.
76 ಶಾಲೆಗಳಿಗೆ ನೋಟಿಸ್
ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ 2024–25ನೇ ಸಾಲಿನಲ್ಲಿ ಶೇ 50ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಜಿಲ್ಲೆಯ 76 ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಿಗೆ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯು ನೋಟಿಸ್ ಸಹ ಜಾರಿಗೊಳಿಸಿತ್ತು. 

Cut-off box -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.