ADVERTISEMENT

ಬಾಗೇಪಲ್ಲಿ: 1,533ರ ಶಿಲಾ ಶಾಸನ ಫಲಕ ಅನಾವರಣ

ಬಾಗೇಪಲ್ಲಿಯಲ್ಲಿ ‘ಐತಿಹಾಸಿಕ ಪರಂಪರೆ ಉಳಿಸಿ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2025, 13:13 IST
Last Updated 12 ಫೆಬ್ರುವರಿ 2025, 13:13 IST
ಬಾಗೇಪಲ್ಲಿಯಲ್ಲಿ ತಾಲ್ಲೂಕಿನ ಪೆದ್ದತುಂಕೇಪಲ್ಲಿಯಲ್ಲಿನ 1533ರ ಶಿಲಾಶಾಸನದ ಫಲಕವನ್ನು ಗಣ್ಯರು ಅನಾವರಣಗೊಳಿಸಿದರು
ಬಾಗೇಪಲ್ಲಿಯಲ್ಲಿ ತಾಲ್ಲೂಕಿನ ಪೆದ್ದತುಂಕೇಪಲ್ಲಿಯಲ್ಲಿನ 1533ರ ಶಿಲಾಶಾಸನದ ಫಲಕವನ್ನು ಗಣ್ಯರು ಅನಾವರಣಗೊಳಿಸಿದರು   

ಬಾಗೇಪಲ್ಲಿ: ಪಟ್ಟಣದ ಜ್ಞಾನದೀಪ್ತಿ ಶಾಲೆಯಲ್ಲಿ ರಾಜ್ಯ ಇತಿಹಾಸ ಅಕಾಡೆಮಿಯ ತಾಲ್ಲೂಕು ಘಟಕದಿಂದ ಬುಧವಾರ ‘ಐತಿಹಾಸಿಕ ಪರಂಪರೆ ಉಳಿಸಿ’ ಕಾರ್ಯಕ್ರಮ ನಡೆಯಿತು. ಪೆದ್ದತುಂಕೇಪಲ್ಲಿಯಲ್ಲಿನ 1533ರ ಶಿಲಾಶಾಸನದ ಫಲಕವನ್ನು ಅನಾವರಣ ಮಾಡಲಾಯಿತು.

ರಾಜ್ಯ ಇತಿಹಾಸ ಅಕಾಡೆಮಿ ಶಾಸನ ತಜ್ಞ ಪ್ರೊ.ಕೆ.ಆರ್.ನರಸಿಂಹನ್ ಮಾತನಾಡಿ, ‘ರಾಜಮಹಾರಾಜರು, ಅರಸರು, ಪಾಳೇಗಾರರು ತಮ್ಮ ಸಾಮ್ರಾಜ್ಯಗಳಲ್ಲಿ ದೇವಾಲಯ ಹಾಗೂ ಜಲ ಸಂರಕ್ಷಣೆಗಾಗಿ ಕೆರೆ, ಕುಂಟೆ, ಕಾಲುವೆ ಅಭಿವೃದ್ಧಿಪಡಿಸಿದ್ದಾರೆ. ವಿನಾಶದತ್ತ ಸಾಗಿರುವ ದೇವಾಲಯ, ಕರೆ, ಕುಂಟೆ, ಕಾಲುವೆ ಸಂರಕ್ಷಿಸಬೇಕಾಗಿದೆ’ ಎಂದರು.

ತಾಲ್ಲೂಕಿನ ದೇವಿಕುಂಟೆ, ಪೆದ್ದತುಂಕೇಪಲ್ಲಿ, ಗುಮ್ಮನಾಯಕಪಾಳ್ಯ, ಶಿವಪುರ ಸೇರಿದಂತೆ 90ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶಾಸನ ಲಭ್ಯವಾಗಿದೆ. ಆಂಧ್ರಪ್ರದೇಶದ ಪೆನುಕೊಂಡ, ಲೇಪಾಕ್ಷಿಯಲ್ಲಿ ಶಾಸನ ಲಭ್ಯವಾಗಿದೆ. ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮದಲ್ಲಿ 1292 ರಲ್ಲಿ ತಿರುವೆಂಗಡನಾಥ ಎಂಬ ರಾಜರ ಕಾಲದಲ್ಲಿ ಕೆತ್ತಿರುವ ಶಾಸನವನ್ನು ಅಧ್ಯಯನ ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

ಇತಿಹಾಸ ಅಕಾಡೆಮಿಯ ಶಾಸನ ಸಂಶೋಧಕ ಕೆ.ಧನ್‍ಪಾಲ್ ಮಾತನಾಡಿ, ‘ರಾಜ್ಯ ಐತಿಹಾಸಿಕ ಅಕಾಡೆಮಿ ಮೂಲಕ ಒಂದೊಂದು ಗ್ರಾಮದಲ್ಲಿನ ಶಾಸನ ಅಧ್ಯಯನ ಮಾಡಿ, ಸಂರಕ್ಷಿಸುವ ಕೆಲಸ ಮಾಡಲಾಗಿದೆ. 80ಕ್ಕೂ ಹೆಚ್ಚು ಶಾಸನ ಪತ್ತೆ ಮಾಡಿದ್ದೇವೆ. ದೇವಿಕುಂಟೆ, ಶಿವಪುರ, ಪೆದ್ದತುಂಕೇಪಲ್ಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ಲಭ್ಯ ಇರುವ ಶಾಸನಗಳನ್ನು ಇತಿಹಾಸಕಾರ ಬಿ.ಆರ್.ಕೃಷ್ಣ ಅಧ್ಯಯನ ಮಾಡಿದ್ದಾರೆ’ ಎಂದು ತಿಳಿಸಿದರು.

ತಾಲ್ಲೂಕು ಘಟಕ ಅಧ್ಯಕ್ಷ ಬಿ.ಆರ್.ಕೃಷ್ಣ ಮಾತನಾಡಿ, ‘ತಾಲ್ಲೂಕಿನ ಗುಜ್ಜೇಪಲ್ಲಿ ಬಳಿಯ ಅಕ್ಕಮ್ಮಗಾರಿ ಬೆಟ್ಟದಲ್ಲಿ ಆದಿಮಾನವರು ಉಪಯೋಗಿಸುವ ಕಲ್ಲು ಗೋರಿಗಳನ್ನು ಸಂಶೋಧನೆ ಮಾಡಲಾಗಿದೆ. ಆದಿಮಾನವರು ಪ್ರಾಣ ರಕ್ಷಣೆಗಾಗಿ ಬಳಕೆ ಮಾಡುತ್ತಿದ್ದ ಈ ಕಲ್ಲುಗೋರಿಗಳು ತಾಲ್ಲೂಕಿನಲ್ಲಿ ಸಿಕ್ಕಿದೆ. ಮುಂದಿನ ಪೀಳಿಗೆ ಐತಿಹಾಸಿಕ ತಾಣ, ರಾಜ ಮಹಾರಾಜರ ನಡೆ, ಶಾಸನಗಳ ಬಗ್ಗೆ ಅಧ್ಯಯನ ಮಾಡಬೇಕು’ ಎಂದರು.

ತಾಲ್ಲೂಕಿನ ದೇವರಗುಡಿಪಲ್ಲಿ ಪಂಚಾಯಿತಿಯ ಪೆದ್ದತುಂಕೇಪಲ್ಲಿ ಗ್ರಾಮದ ಊರಬಾಗಿಲಿನಲ್ಲಿ ನೆಟ್ಟಿರುವ ಕಲ್ಲಿನ ಚಿತ್ರದಲ್ಲಿನ ಶಿಲಾಶಾಸನದ ಸಾರಾಂಶ ಫಲಕದ ಅನಾವರಣ ಮಾಡಲಾಯಿತು. ಶಿಲಾಶಾಸನದ ಹಾಗೂ ಕಲ್ಲು ಗೋರಿ, ಶಾಸನಗಳ ಫಲಕ, ಭಾವಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು.

ಅಕಾಡೆಮಿಯ ತಾಲ್ಲೂಕು ಘಟಕದ ಉಪಾಧ್ಯಕ್ಷ ಪ್ರೊ.ವೈ.ನಾರಾಯಣ, ಪ್ರಧಾನ ಕಾರ್ಯದರ್ಶಿ ಡಾ.ರಾಮಯ್ಯ, ಕೋಶಾಧ್ಯಕ್ಷ ವೆಂಕಟೇಶಬಾಬು, ಜ್ಞಾನದೀಪ್ತಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಎ.ಕೆ.ನಿಂಗಪ್ಪ, ಪ್ರೊ.ಕೆ.ಟಿ.ವೀರಾಂಜನೇಯ, ಎ.ನಂಜುಂಡಪ್ಪ, ಎ.ಶ್ರೀನಾಥ್, ಲಕ್ಷ್ಮಿದೇವಿಮುನಿಸ್ವಾಮಿ, ವೆಂಕಟಲಕ್ಷ್ಮಮ್ಮ ಭೈರಶೆಟ್ಟಿ, ಪಿ.ಎನ್.ಶಿವಣ್ಣ, ಚಂದ್ರಾನಾಯಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.