ADVERTISEMENT

ಬಾಗೇಪಲ್ಲಿ | ನಗೆಗಡಲಲ್ಲಿ ತೇಲಿಸಿದ ಗ್ರಾಮೀಣ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2024, 14:04 IST
Last Updated 3 ಸೆಪ್ಟೆಂಬರ್ 2024, 14:04 IST
ಬಾಗೇಪಲ್ಲಿ ತಾಲ್ಲೂಕಿನ ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡಾಕೂಟದಲ್ಲಿ ಯುವಕರು ಗೋಣಿಚೀಲ ಓಟದಲ್ಲಿ ಭಾಗವಹಿಸಿದರು
ಬಾಗೇಪಲ್ಲಿ ತಾಲ್ಲೂಕಿನ ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡಾಕೂಟದಲ್ಲಿ ಯುವಕರು ಗೋಣಿಚೀಲ ಓಟದಲ್ಲಿ ಭಾಗವಹಿಸಿದರು   

ಬಾಗೇಪಲ್ಲಿ: ಕಿರಿಯ ಹಾಗೂ ಹಿರಿಯರಿಗೆ ಪ್ರತ್ಯೇಕವಾಗಿ ಹಗ್ಗ ಜಗ್ಗಾಟ, ನಾ ಮುಂದು, ತಾ ಮುಂದು ಎನ್ನುವಂತೆ ಕಿತ್ತಾಟ, ಗೋಣಿಚೀಲದ ಕುಣಿತದಲ್ಲಿ ಬೀಳುವುದು, ಏಳುವುದು, ಕುರ್ಚಿ ಹಿಡಿಯಲು ಕಣ್ಣಿನ ದೃಷ್ಟಿ, ಬಣ್ಣ ಬಣ್ಣದ ಚಿತ್ತಾರ ಮೂಡಿಸಿದ ರಂಗೋಲಿ, ಮಡಿಕೆ ಒಡೆಯುವುದು ಸೇರಿದಂತೆ ವಿವಿಧ ಬಗೆಯ ಗ್ರಾಮೀಣ ಭಾಗದ ಆಟೋಟಗಳಲ್ಲಿ ಜನರು ಭಾಗವಹಿಸಿ, ನಗೆಗಡಲಲ್ಲಿ ಸಂಭ್ರಮಿಸಿದರು.

ತಾಲ್ಲೂಕಿನ ಪರಗೋಡು ಗ್ರಾಮ ಪಂಚಾಯಿತಿಯ ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ಈಚೆಗೆ ಯುವ ಸಬಲೀಕರಣ ಇಲಾಖೆ, ಮಲ್ಲಸಂದ್ರ ವಾಲ್ಮೀಕಿ ಕ್ರೀಡಾ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಘ, ದೇವರೆಡ್ಡಿಪಲ್ಲಿ ಜನತಾ ಕ್ರೀಡಾ ಯುವಕ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡಾಕೂಟ ನಡೆಯಿತು.

ಆಟೋಟಗಳಲ್ಲಿ ವಯಸ್ಸಿನ ಬೇಧ ಇಲ್ಲದೇ ಜನರು ಭಾಗವಹಿಸಿದರು. ವಿಜೇತರಿಗೆ ಗಣ್ಯರು ಪ್ರಮಾಣ ಪತ್ರ ವಿತರಿಸಿದರು.

ADVERTISEMENT

ವಿಶೇಷವಾಗಿ ಯುವತಿಯರು ಹಗ್ಗ ಜಗ್ಗಾಟದಲ್ಲಿ, ಗೋಣಿಚೀಲದಲ್ಲಿ ಕಾಲಿಟ್ಟು ಜಿಗಿತದಲ್ಲಿ ನೆಲಕ್ಕೆ ಬೀಳುವುದು, ಏಳುತ್ತಿದ್ದವರನ್ನು ಕಂಡು, ನೆರೆದ ಜನರಿಗೆ ಖುಷಿ ತಂದಿತ್ತು. ಕಣ್ಣಿಗೆ ಬಟ್ಟೆಕಟ್ಟಿ ಕೋಲಿನಿಂದ ಮಡಿಕೆ ಒಡೆಯುವ ಆಟ ಸಂಭ್ರಮ ಮೂಡಿಸಿತ್ತು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ ಮಾತನಾಡಿ, ‘ಹಿಂದಿನ ಕಾಲದಲ್ಲಿ ಜನರು ಒಂದೆಡೆ ಸೇರಿ ಗ್ರಾಮೀಣ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸಂಭ್ರಮಪಡುತ್ತಿದ್ದರು. ಇದರಿಂದ ಗ್ರಾಮಗಳಲ್ಲಿ ಸೌಹಾರ್ದ ಮೂಡಿತ್ತು. ಆಧುನಿಕ ಭರಾಟೆಯಲ್ಲಿ ಸಾಮಾಜಿಕ ಜಾಲತಾಣ, ಮೊಬೈಲ್, ಸಿನಿಮಾ, ಧಾರಾವಾಹಿಗಳಿಗೆ ಯುವಜನತೆ ಮಾರು ಹೋಗಿದ್ದಾರೆ. ಗ್ರಾಮೀಣ ಶೈಲಿಯ ಕ್ರೀಡೆ ಉಳಿಸಿ ಬೆಳೆಸಲು ಗ್ರಾಮೀಣ ಕ್ರೀಡಾಕೂಟ ಹಮ್ಮಿಕೊಂಡಿರುವುದು ಸಂತಸ ತಂದಿದೆ’ ಎಂದರು.

ಮಲ್ಲಸಂದ್ರ ಕ್ರೀಡಾ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಸಿ.ಅಶ್ವತ್ಥಪ್ಪ ಮಾತನಾಡಿ, ‘ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ಅನೇಕ ಗ್ರಾಮೀಣ ಆಟಗಳು, ಎನ್‍ಎಸ್ ಎಸ್ ಶಿಬಿರ ನಡೆದಿವೆ’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮಣಿಶಿವಪ್ಪ, ಸದಸ್ಯ ಡಿ.ಎನ್.ಸುಧಾಕರರೆಡ್ಡಿ, ಪ್ರಗತಿ ಗ್ರಾಮೀಣ ಬ್ಯಾಂಕ್‌ನ ಶ್ರೀನಿವಾಸ್, ಡಿ.ಎನ್.ಮದ್ದಿಲೇಟಿರೆಡ್ಡಿ, ಡಿ.ಎನ್.ನಾಗರಾಜ, ಲಕ್ಷ್ಮಿಪತಿ, ನಂದೀಶ, ಶಂಕರಪ್ಪ, ರಘು, ಕೃಷ್ಣಾರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.