ADVERTISEMENT

ಬಿಜೆಪಿ: ಮನೆಯೊಂದು ಮೂರು ಬಾಗಿಲು

ಬಾಗೇಪಲ್ಲಿ ಕ್ಷೇತ್ರ: ಮುನಿರಾಜು, ರಾಮಲಿಂಗಪ್ಪ, ಕೋನಪ್ಪರೆಡ್ಡಿಯಿಂದ ಟಿಕೆಟ್‌ಗೆ ಪೈಪೋಟಿ

ಡಿ.ಎಂ.ಕುರ್ಕೆ ಪ್ರಶಾಂತ
Published 24 ಜನವರಿ 2023, 5:03 IST
Last Updated 24 ಜನವರಿ 2023, 5:03 IST
   

ಚಿಕ್ಕಬಳ್ಳಾಪುರ: ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ. ಆದರೆ ಟಿಕೆಟ್‌ಗಾಗಿ ನಾಯಕರ ನಡುವೆ ಶೀತಲ ಸಮರ ಏರ್ಪಟ್ಟಿದೆ. ಇದು ಬಾಗೇಪಲ್ಲಿ ಬಿಜೆಪಿಯ ಸ್ಥಿತಿ. ಗಡಿ ತಾಲ್ಲೂಕಿನ ಈ ವಿಧಾನಸಭಾ ಕ್ಷೇತ್ರದಲ್ಲಿ ಮನೆಯೊಂದು ಮೂರು ಬಾಗಿಲು ಎನ್ನುವ ಸ್ಥಿತಿ ಬಿಜೆಪಿಯಲ್ಲಿದೆ.

ಬಾಗೇಪಲ್ಲಿ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ದೊರೆಯುತ್ತದೆ ಎನ್ನುವ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ರಾಮಲಿಂಗಪ್ಪ, ನಗರ ಹೊರವರ್ತುಲ ಪ್ರಾಧಿಕಾರದ ಅಧ್ಯಕ್ಷ ಸಿ. ಮುನಿರಾಜು, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪ ರೆಡ್ಡಿ ಸದ್ಯ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.

ಬಾಗೇಪಲ್ಲಿ, ಗುಡಿಬಂಡೆ ಮತ್ತು ಚೇಳೂರು ತಾಲ್ಲೂಕುಗಳನ್ನು ಒಳಗೊಂಡಂತೆ ಈ ವಿಧಾನಸಭಾ ಕ್ಷೇತ್ರವಿದೆ. ಟಿಕೆಟ್ ವಿಚಾರದಲ್ಲಿ ಸಚಿವ ಡಾ.ಕೆ.ಸುಧಾಕರ್ ಪ್ರಭಾವವೇ ಪ್ರಮುಖವಾಗುತ್ತದೆಯೊ? ಆರ್‌ಎಸ್‌ಎಸ್ ಮತ್ತು ವರಿಷ್ಠರ ಕೃಪೆ ಪ್ರಮುಖವಾಗುತ್ತದೆಯೊ ಎನ್ನುವ ವಿಚಾರ ಚರ್ಚೆಯಲ್ಲಿದೆ.

ADVERTISEMENT

ಸ್ಪರ್ಧೆಯ ಆಸೆ ಹೊತ್ತು ಸಿ.ಮುನಿರಾಜು ಈಗಾಗಲೇ ಹಳ್ಳಿಹಳ್ಳಿಗಳನ್ನು ಸುತ್ತಿದ್ದಾರೆ. ‘ಹೂಡಿಕೆ’ಯನ್ನೂ ಭರ್ಜರಿಯಾಗಿಯೇ ಮಾಡಿದ್ದಾರೆ. ಮುನಿರಾಜು ಮತ್ತು ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ ಅವರ ನಡುವೆಯೇ ಟಿಕೆಟ್ ವಿಚಾರ ಗಿರಕಿ ಹೊಡೆಯುತ್ತಿತ್ತು. ಆದರೆ ಈಗ ಸಚಿವ ಸುಧಾಕರ್ ನೆರಳಿನಲ್ಲಿ ಕೋನಪ್ಪರೆಡ್ಡಿ ಬಿಜೆಪಿ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರೂ ಆಗಿರುವ ಮುನಿರಾಜು 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ಗೆ ಪ್ರಯತ್ನಿಸಿ ವಿಫಲರಾಗಿದ್ದರು. ಈಗ ಬಾಗೇಪಲ್ಲಿ ಕ್ಷೇತ್ರದ ಸಕ್ರಿಯ ನಾಯಕ. ಬಿ.ಎಸ್‌.ಯಡಿಯೂರಪ್ಪ, ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ.

ಟಿ. ರಾಮಲಿಂಗಪ್ಪ, ಈ ಹಿಂದೆ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಘಟಕದ ಕಾರ್ಯದರ್ಶಿ ಆಗಿದ್ದವರು. ಬಾಗೇಪಲ್ಲಿಯವರೇ ಆದ ರಾಮಲಿಂಗಪ್ಪ ಆರ್‌ಎಸ್‌ಎಸ್‌, ಸಂಸದ ಪಿ.ಸಿ. ಮೋಹನ್‌ ಜತೆ ಉತ್ತಮ ಒಡನಾಟ ಹೊಂದಿದ್ದಾರೆ. 2018ರ ಚುನಾವಣೆಯಲ್ಲಿಯೂ ರಾಮಲಿಂಗಪ್ಪ ಟಿಕೆಟ್‌ಗೆ ಪ್ರಯತ್ನಿಸಿದ್ದರು.

ಬಾಗೇಪಲ್ಲಿ ಕ್ಷೇತ್ರದಲ್ಲಿ ಕೋನಪ್ಪ ರೆಡ್ಡಿ ಜೆಡಿಎಸ್ ಟಿಕೆಟ್‌ಗೆ ಪ್ರಯತ್ನಿಸಿದ್ದರು. ಅಲ್ಲಿ ಡಿ.ಜೆ.ನಾಗರಾಜ ರೆಡ್ಡಿಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಅಲ್ಲಿಂದ ಸಚಿವ ಸುಧಾಕರ್ ಪಾಳಯದಲ್ಲಿ ಕಾಣಿಸಿಕೊಂಡಿದ್ದಾರೆ. ಕಮಲದ ವರಿಷ್ಠರು ಅಥವಾ ಆರ್‌ಎಸ್‌ಎಸ್‌ಗಿಂತ ಸುಧಾಕರ್ ಅವರನ್ನು ಟಿಕೆಟ್‌ಗಾಗಿ ಆಶ್ರಯಿಸಿದ್ದಾರೆ ಎನ್ನಲಾಗುತ್ತಿದೆ.

‘ವರಿಷ್ಠರು ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇವೆ. ಪಕ್ಷದ ಹೈಕಮಾಂಡ್ ಈ ಬಗ್ಗೆ ತೀರ್ಮಾನಕೈಗೊಳ್ಳುತ್ತದೆ’ ಎಂದು ನಾಯಕರು ಬಹಿರಂಗವಾಗಿ ಹೇಳುತ್ತಿದ್ದಾರೆ. ಆದರೆ ಪಕ್ಷದ ಆಂತರಿಕ ವಲಯದಲ್ಲಿ ಟಿಕೆಟ್ ವಿಚಾರ ಪೈಪೋಟಿಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸುತ್ತವೆ.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ 2013ರ ವಿಧಾನಸಭಾ ಚುನಾವಣೆಯಲ್ಲಿ ಕಮಲಕ್ಕೆ ಹಿನ್ನಡೆಯಾಗಿದ್ದರೂ 2008ರ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಿತ್ತು. ಬಹುಭಾಷಾ ನಟ ಸಾಯಿ­ಕುಮಾರ್‌ 2008ರ ವಿಧಾನಸಭೆ ಚುನಾ­ವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು. 6,000 ಮತಗಳ ಅಂತರ­ದಿಂದ ಗೆಲುವಿನಿಂದ ದೂರವಾಗಿದ್ದರು. 2018ರ ಚುನಾವಣೆಯಲ್ಲಿ ಮತ್ತೆ ಅವರೇ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಆಗ 4,140 ಮತಗಳನ್ನಷ್ಟೇ ಪಡೆದಿದ್ದರು.

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್‌ಗೆ ಪೈಪೋಟಿ ಕಂಡು ಬರುತ್ತಿರುವುದು ಸಹ ಬಾಗೇಪಲ್ಲಿ ಕ್ಷೇತ್ರದಲ್ಲಿ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.