ADVERTISEMENT

ಶಿಡ್ಲಘಟ್ಟ‌ | ಬಿಸಿಲು, ಮಳೆಯಲ್ಲೇ ಬಸ್‌ ಕಾಯಬೇಕು

​ಪ್ರಜಾವಾಣಿ ವಾರ್ತೆ
Published 10 ಮೇ 2025, 6:39 IST
Last Updated 10 ಮೇ 2025, 6:39 IST
   

ಶಿಡ್ಲಘಟ್ಟ‌: ತಾಲ್ಲೂಕಿನ ಜಂಗಮಕೋಟೆ ಕ್ರಾಸ್‌ನಲ್ಲಿ ಜನರಿಗೆ ಅಗತ್ಯ ಮೂಲ ಸೌಕರ್ಯ ಇಲ್ಲದೆ ಜನ ಪರದಾಡುವಂತಾಗಿದೆ.

ಕೋಲಾರ, ವಿಜಯಪುರ, ಶಿಡ್ಲಘಟ್ಟ, ಹೊಸಕೋಟೆ ಮುಂತಾದ ಕಡೆಗಳಿಗೆ ಸಂಪರ್ಕ ಕಲ್ಪಿಸುವಂತಹ ಮುಖ್ಯ ವೃತ್ತವಾಗಿರುವ ಜಂಗಮಕೋಟೆ ಕ್ರಾಸ್‌ಗೆ ಈ ನಾಲ್ಕು ಕಡೆಗಳಿಂದ ಬರುವ ಬಸ್‌ಗಳಲ್ಲಿ ಬಂದಿಳಿಯುವ ಪ್ರಯಾಣಿಕರಿಗೆ ತಂಗುದಾಣ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಸುಡುವ ಬಿಸಿಲು, ಮಳೆಯ ನಡುವೆ ರಸ್ತೆಯ ಪಕ್ಕದಲ್ಲೆ ನಿಂತು ಬಸ್‌ಗಾಗಿ ಕಾಯಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಮಹಿಳೆಯರು, ಮಕ್ಕಳು, ವೃದ್ಧರು, ಶಾಲಾ ಕಾಲೇಜುಗಳಿಗೆ ಹೋಗುವಂತಹ ವಿದ್ಯಾರ್ಥಿಗಳೆಲ್ಲರೂ ಬಸ್‌ಗಾಗಿ ಕಾಯಲು ರಸ್ತೆಯ ಬದಿಯಲ್ಲೇ ನಿಲ್ಲಬೇಕು. ಸುಡುವ ಬಿಸಿಲಿನಲ್ಲಿ ಮಕ್ಕಳನ್ನು ಎತ್ತಿಕೊಂಡು ಹೈರಾಣಾಗುತ್ತಿದ್ದಾರೆ. ಬಸ್‌ಗಳು ಬಂದರೂ ರಸ್ತೆಯಲ್ಲೆ ನಿಲ್ಲುತ್ತವೆ. ಇದರಿಂದ ರಸ್ತೆಯಲ್ಲಿ ಸಾಗುವಂತಹ ಇತರೆ ವಾಹನಗಳಿಗೂ ತೊಂದರೆಯಾಗುತ್ತಿದೆ. ಪ್ರಯಾಣಿಕರಿಗೆ ಅಪಘಾತ ಭೀತಿ ಕಾಡುತ್ತಿದೆ.

ADVERTISEMENT

ಇದು ಪ್ರಮುಖ ವೃತ್ತವಾಗಿದ್ದರೂ ಇಲ್ಲಿ ಪೊಲೀಸರನ್ನು ನಿಯೋಜಿಸಿಲ್ಲ. ಇದರಿಂದ ಮಹಿಳೆ ಮತ್ತು ಮಕ್ಕಳ ಸುರಕ್ಷಿತೆ ಇಲ್ಲದಂತಾಗಿದೆ. ಸಂಚಾರ ಪೊಲೀಸರು ಇಲ್ಲದೆ ಸಂಚಾರ ವ್ಯವಸ್ಥೆ ಹದಗೆಟ್ಟಿದೆ.

ವೃತ್ತದಲ್ಲಿ ಅಳವಡಿಸಿರುವ ಹೈಮಾಸ್ಟ್ ವಿದ್ಯುತ್ ದೀಪದ ಸುತ್ತಲೂ ಕಟ್ಟಿರುವ ತಡೆಗೋಡೆಯ ಕಲ್ಲುಗಳು ಕಿತ್ತುಹೋಗಿದ್ದು, ತಾತ್ಕಾಲಿಕವಾಗಿ ತಡೆಗೋಡೆಗೆ ಜೋಡಿಸಲಾಗಿದೆ. ಜೋರಾಗಿ ಗಾಳಿ ಬಂದರೆ ತಡೆಗೋಡೆಯ ಸಮೇತ ಹೈಮಾಸ್ಟ್ ದೀಪ ಅಲುಗಾಡುತ್ತದೆ. ವೃತ್ತದಲ್ಲಿ ಹೈಮಾಸ್ಟ್ ದೀಪದಲ್ಲಿ ಸಿಸಿಟಿವಿ ಕ್ಯಾಮಾರಾ ಅಳವಡಿಸಿದ್ದರೂ, ಅವು ಕೆಟ್ಟು ಹೋಗಿವೆ. ಇದರಿಂದ ಈ ವೃತ್ತದ ಮೂಲಕ ಹಾದುಹೋಗುವಂತಹ ಅಪರಿಚಿತರನ್ನು ಗುರುತಿಸುವುದು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ನಿವಾಸಿ ಮುನಿರಾಜು ಹೇಳಿದರು.

ಜಂಗಮಕೋಟೆ ಕ್ರಾಸ್ ಒಂದು ಪ್ರಮುಖ ವಾಣಿಜ್ಯ ಕೇಂದ್ರ. ರಸ್ತೆಯುದ್ಧಕ್ಕೂ ಹೆಚ್ಚು ಬೆಳಕು ಹೊರಸೂಸುವ ಬೀದಿದೀಪಗಳನ್ನು ಅಳವಡಿಸಬೇಕಿದೆ. ರಾತ್ರಿಯ ವೇಳೆ ಕಡಿಮೆ ಬೆಳಕಿರುವ ಕಾರಣ, ಕಳ್ಳತನ ಆಗುವ ಸಾಧ್ಯತೆಗಳು ಹೆಚ್ಚೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಕೆಲವು ಕಂಬಗಳಲ್ಲಿ ಅಳವಡಿಸಿರುವ ಬೀದಿದೀಪಗಳು ಉರಿಯುತ್ತಿಲ್ಲ. ಅವುಗಳನ್ನು ರಿಪೇರಿ ಮಾಡಿಸುವ ಮೂಲಕ ಅನುಕೂಲ ಮಾಡಬೇಕಿದೆ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಸೌಕರ್ಯ ಏನು ಬೇಕು?

ಶಿಡ್ಲಘಟ್ಟ, ವಿಜಯಪುರ, ಕೋಲಾರ, ಹೊಸಕೋಟೆ ಕಡೆಗಳಿಗೆ ಹೋಗುವ ಪ್ರಯಾಣಿಕರು ನಿಲ್ಲಲು ನಾಲ್ಕೂ ಕಡೆಗಳಲ್ಲಿ ತಂಗುದಾಣಗಳ ನಿರ್ಮಾಣ, ತಂಗುದಾಣಗಳ ಸಮೀಪದಲ್ಲಿ ಶೌಚಾಲಯಗಳು, ಮಹಿಳೆಯರಿಗಾಗಿ ವಿಶ್ರಾಂತಿ ಗೃಹಗಳು, ಕುಡಿಯುವ ನೀರಿನ ವ್ಯವಸ್ಥೆ. ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ತಡೆಗಟ್ಟಲು ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.