ಶಿಡ್ಲಘಟ್ಟ: ಬಯಲು ಸೀಮೆ ಭಾಗಕ್ಕೆ ಕೃಷ್ಣಾ ನದಿ ನೀರು ಹರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಕೃಷಿಗಾಗಿ ಈ ಭಾಗಕ್ಕೆ ಕೃಷ್ಣಾ ನದಿ ನೀರನ್ನು ಹರಿಸಬೇಕು ಎಂದು ಶಿಡ್ಲಘಟ್ಟ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.
ನವದೆಹಲಿ ಅವರ ಕಚೇರಿಯಲ್ಲಿ ಭೇಟಿ ಮಾಡಿ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಬಯಲು ಸೀಮೆ ಪ್ರದೇಶಕ್ಕೆ ಕೃಷ್ಣಾ ನದಿ ನೀರು ಹರಿಸಲು ಕ್ರಮವಹಿಸುವಂತೆ ಮನವಿ ಮಾಡಿದರು.
ಈ ಭಾಗದಲ್ಲಿ ಅಂತರ್ಜಲ ಮಟ್ಟ 1500 ಅಡಿಯಷ್ಟು ಆಳಕ್ಕೆ ಕುಸಿದಿದೆ. ಅಷ್ಟು ಆಳಕ್ಕೆ ಕೊಳವೆಬಾವಿ ಕೊರೆಸಿದರೂ ಅದರಲ್ಲಿ ನೀರು ಸಿಗುವ ಪ್ರಮಾಣ ಕೇವಲ ಶೇ30ರಷ್ಟು ಇದೆ. ಸಿಗುವ ನೀರಿನಲ್ಲೂ ಫೋರೈಡ್ ಸೇರಿದಂತೆ ಅನೇಕ ರೀತಿಯ ಹಾನಿಕಾರಕ ಅಂಶ ಇವೆ.
ಈ ನೀರು ಕೃಷಿಗೂ ಹಾಗೂ ಕುಡಿಯಲು ಹಾನಿಕಾರಕವಾಗಿದೆ. ಪ್ರಯೋಗಾಲಯಗಳಲ್ಲಿ ಈ ಅಂಶ ಈಗಾಗಲೇ ಬಯಲಾಗಿದ್ದು ವಿಧಿಯಿಲ್ಲದೆ ವಿಷಪೂರಿತ ನೀರು ಬಳಸುವ ಅನಿವಾರ್ಯತೆ ಈ ಭಾಗದ ಜನರದ್ದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇತ್ತೀಚಿನ ವರ್ಷಗಳಲ್ಲಿ ಈ ಐದೂ ಜಿಲ್ಲೆಗಳಲ್ಲಿ ಹೂವು,ಹಣ್ಣು ಮುಂತಾದ ತೋಟಗಾರಿಕೆ ಬೆಳೆಗಳು ಹೆಚ್ಚೆಚ್ಚು ಬೆಳೆದು ರಾಷ್ಟ್ರ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತಿತ್ತು. ಆದರೆ, ಕೆಲ ವರ್ಷಗಳಿಂದಲೂ ಅಂತರ್ಜಲ ಮಟ್ಟ ಕುಸಿದ ಕಾರಣ ನೀರು ಸಾಲದಾಗಿದೆ.
ಇದರಿಂದ ಬೆಳೆಗಳನ್ನು ಬೆಳೆಯಲಾಗುತ್ತಿಲ್ಲ. ಬೆಳೆ ಬೆಳೆದು ಬದುಕು ಕಟ್ಟಿಕೊಂಡಿದ್ದ ಲಕ್ಷಾಂತರ ಕುಟುಂಬಗಳು ಇದರಿಂದ ಕಂಗಾಲಾಗಿದ್ದಾರೆ. ತಮ್ಮ ಸಂಪಾದನೆ ಸಾಕಷ್ಟು ಪ್ರಮಾಣದ ಹಣ ಕೊಳವೆ ಬಾವಿ ಕೊರೆಸಲು ವೆಚ್ಚ ಮಾಡುವಂತಾಗಿದ್ದು ಸಾಲಕ್ಕೆ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದರು.
ಸಂಸದ ಮಲ್ಲೇಶ್‌ಬಾಬು, ಬಯಲು ಸೀಮೆ ಭಾಗದಲ್ಲಿ ಕೃಷಿಕರು ನೀರಿಗಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವ ವಿ.ಸೋಮಣ್ಣ ಅವರಿಗೆ ಮನವರಿಕೆ ಮಾಡಿಕೊಟ್ಟು ಕೃಷ್ಣಾ ನದಿ ನೀರು ಹರಿಸಲು ಒತ್ತಾಯಿಸಿದರು.
ಮನವಿಯನ್ನು ಸ್ವೀಕರಿಸಿದ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ, ‘ನಾನು ಸಹ ಆ ಭಾಗದಿಂದಲೇ ಬಂದವನು. ಅಲ್ಲಿ ಕೃಷಿ ಕ್ಷೇತ್ರ ಮತ್ತು ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳ ಸಂಪೂರ್ಣ ಅರಿವು ನನಗಿದೆ’ ಎಂದರು.
ಸಮಸ್ಯೆ ಬಗ್ಗೆ ಕೇಂದ್ರದ ಸಚಿವರು ಸೇರಿದಂತೆ ಸಂಬಂಧಿಸಿದ ಎಲ್ಲರ ಜತೆ ಮಾತುಕತೆ ನಡೆಸಿ ಕೃಷ್ಣಾ ನದಿ ನೀರು ಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.
ಕೋಲಾರ ಕ್ಷೇತ್ರದ ಸಂಸದ ಮಲ್ಲೇಶ್‌ಬಾಬು, ಶಿಡ್ಲಘಟ್ಟ ಶಾಸಕ ಮೇಲೂರು ರವಿಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಪ್ಪೇಗೌಡನಹಳ್ಳಿ ಕೆ.ಲಕ್ಷ್ಮಿನಾರಾಯಣರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಕ್ ಮುನಿಯಪ್ಪ, ತಾದೂರು ರಘು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.