ADVERTISEMENT

ಶಿಡ್ಲಘಟ್ಟ: ‘ನನ್ನ ನಗರ ನನ್ನ ಜವಾಬ್ದಾರಿ’ ತರಬೇತಿ

​ಪ್ರಜಾವಾಣಿ ವಾರ್ತೆ
Published 6 ಮೇ 2025, 12:55 IST
Last Updated 6 ಮೇ 2025, 12:55 IST
ಶಿಡ್ಲಘಟ್ಟದಲ್ಲಿ ನಗರಸಭೆ ವತಿಯಿಂದ ನಗರಸಭಾ ಸದಸ್ಯರ ಜವಾಬ್ದಾರಿ ಹಾಗೂ ಕರ್ತವ್ಯಗಳ ಕುರಿತು ಜಾಗೃತಿ ಮೂಡಿಸುವ ‘ನನ್ನ ನಗರ ನನ್ನ ಜವಾಬ್ದಾರಿ’ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರಸಭಾ ಸದಸ್ಯರು 
ಶಿಡ್ಲಘಟ್ಟದಲ್ಲಿ ನಗರಸಭೆ ವತಿಯಿಂದ ನಗರಸಭಾ ಸದಸ್ಯರ ಜವಾಬ್ದಾರಿ ಹಾಗೂ ಕರ್ತವ್ಯಗಳ ಕುರಿತು ಜಾಗೃತಿ ಮೂಡಿಸುವ ‘ನನ್ನ ನಗರ ನನ್ನ ಜವಾಬ್ದಾರಿ’ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರಸಭಾ ಸದಸ್ಯರು    

ಶಿಡ್ಲಘಟ್ಟ: ನಗರಸಭೆ ವತಿಯಿಂದ ಮಂಗಳವಾರ ನಗರಸಭೆಯಲ್ಲಿ ‘ನನ್ನ ನಗರ ನನ್ನ ಜವಾಬ್ದಾರಿ’ ಎಂಬ ತರಬೇತಿ ಕಾರ್ಯಕ್ರಮ ನಡೆಯಿತು.

ಈ ವೇಳೆ ಸರ್ಕಾರದ ಜನಾಗ್ರಹ ಕಾರ್ಯಕ್ರಮ ನಿರ್ವಾಹಕ ಎಲ್.ಮಂಜುನಾಥ ಹಂಪಾಪುರ ಮಾತನಾಡಿ, ಈ ಕಾರ್ಯಕ್ರಮವು ನಗರಸಭಾ ಸದಸ್ಯರಿಗೆ ನಾಯಕತ್ವ ಗುಣ ಹೆಚ್ಚಿಸುವ ಮತ್ತು ನಗರದ ಅಭಿವೃದ್ಧಿಗೆ ನಗರಸಭಾ ಸದಸ್ಯರ ಜವಾಬ್ದಾರಿ ಹಾಗೂ ಕರ್ತವ್ಯ ಕುರಿತು ಜಾಗೃತಿ ಮೂಡಿಸುವ ಕಾರ್ಯಾಗಾರವಾಗಿದೆ ಎಂದರು.

ಜನರು ತಮ್ಮ ನಗರಸಭೆ ಮತ್ತು ಪೌರಸಂಸ್ಥೆಗಳೊಂದಿದೆ ಕೈಜೋಡಿಸಿ ತಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಾರ್ಡ್ ಸಮಿತಿ ಮತ್ತು ಏರಿಯಾ ಸಭಾಗಳು ಅತ್ಯಂತ ಪರಿಣಾಮಕಾರಿ ವೇದಿಕೆಗಳಾಗಿವೆ. ಇಂತಹ ವೇದಿಕೆಗಳು ತಮ್ಮ ನೆರೆಹೊರೆಯಲ್ಲಿನ ಸ್ವಚ್ಛತೆ ಕಾಪಾಡಿಕೊಳ್ಳಲು. ಕೆರೆ ಬಾವಿಗಳನ್ನು ಪುನರುಜ್ಜೀವನಗೊಳಿಸಲು. ಸಾಂಸ್ಕೃತಿಕ ಮತ್ತು ಆಟದ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಮತ್ತು ಹತ್ತು ಹಲವು ಅಭಿವೃದ್ಧಿ ಕೆಲಸಗಳನ್ನು ಹಮ್ಮಿಕೊಳ್ಳಲು ಪೂರಕವಾಗಿವೆ ಎಂದು ಹೇಳಿದರು.

ADVERTISEMENT

ಈ ತರಬೇತಿ ನಿಮ್ಮ ನಗರ ಹಾಗೂ ವಾರ್ಡುಗಳಲ್ಲಿ ಹೇಗೆ ಆಡಳಿತ ಮಾಡಲಾಗುತ್ತದೆ ಎಂಬುದನ್ನು ತಿಳಿಯಪಡಿಸುವುದು. ವಾರ್ಡ್ ಮಟ್ಟದಲ್ಲಿ ಧನಾತ್ಮಕ ಬದಲಾವಣೆಗೆ ಅನುಕೂಲ ಕಲ್ಪಿಸುವುದು. ವಾರ್ಡ್ ಸಮಿತಿಗಳೇನು ಮತ್ತು ಅವು ನಾಗರಿಕರ ಭಾಗವಹಿಸುವಿಕೆಯ ಸಾಂಸ್ಥಿಕ ವೇದಿಕೆಗಳಾಗಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅರ್ಥ ಮಾಡಿಸುವುದು. ನಾಗರಿಕ ಸಮೂಹಗಳು ಮತ್ತು ನಗರಾಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಮೂಲಕ ಸಮಾನ ಮನಸ್ಕ ನಾಗರಿಕರನ್ನು ಸಜ್ಜುಗೊಳಿಸುವುದು. ನಿಮ್ಮ ನಗರ ಮಟ್ಟದ ಸರ್ಕಾರ ಮತ್ತು ವಾರ್ಡ್ ಅಧಿಕಾರಿಗಳೊಂದಿಗೆ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ನಗರಸಭಾ ಅಧ್ಯಕ್ಷ ವೆಂಕಟಸ್ವಾಮಿ, ಸದಸ್ಯರಾದ ಎಲ್.ಅನಿಲ್ ಕುಮಾರ್, ಚಿತ್ರಾ ಮನೋಹರ್, ಎಸ್.ಎಂ.ಮಂಜುನಾಥ್, ಜಬಿವುಲ್ಲಾ, ಕೃಷ್ಣಮೂರ್ತಿ, ಟಿ.ಮಂಜುನಾಥ್, ರಿಯಾಜ್ ಖಾನ್, ನಾರಾಯಣಸ್ವಾಮಿ, ನಗರಸಭೆ ವ್ಯವಸ್ಥಾಪಕಿ ರಾಜೇಶ್ವರಿ, ಸಮುದಾಯ ಅಧಿಕಾರಿ ಸುಧಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.