ಚಿಂತಾಮಣಿ: ಬಿ.ಆರ್.ಅಂಬೇಡ್ಕರ್ ಯಾವುದೇ ಒಂದು ಜಾತಿ, ಸಮುದಾಯಕ್ಕೆ ಸೀಮಿತವಾಗಿಲ್ಲ. ಇಡೀ ವಿಶ್ವಕ್ಕೆ ಮಾದರಿಯಾಗಿರುವ ಅಂಬೇಡ್ಕರ್ ತತ್ವ, ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕೆ.ಎನ್.ರಮಣಾರೆಡ್ಡಿ ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನಗರದ ವಿವೇಕ ಜಾಗೃತ ಬಳಗದ ಭಜನಾ ಮಂದಿರದಲ್ಲಿ ಆಯೋಜಿಸಿದ್ದ ಸಾಧಕರ ಸ್ಮರಣೆ ಕಾರ್ಯಕ್ರಮದಲ್ಲಿ ಬಿ.ಆರ್.ಅಂಬೇಡ್ಕರ್ ಕುರಿತು ಮಾತನಾಡಿದರು.
ಅಂಬೇಡ್ಕರ್ ಅವರಿಗಿದ್ದ ಜ್ಞಾನದ ಹಸಿವು, ಹೋರಾಟದ ಹಸಿವು ಎಲ್ಲರಿಗೂ ಇರಬೇಕು. ಸಂವಿಧಾನದಿಂದ ದೇಶದಲ್ಲಿ ಎಲ್ಲ ವರ್ಗದ ಜನರು ಶಾಂತಿ, ಸಮಾನತೆ, ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಮೀಸಲಾತಿಯಿಂದ ಸಾಮಾಜಿಕ ನ್ಯಾಯ ಸಾಧನೆ ಆಗುತ್ತಿದೆ ಎಂದರು.
ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಎನ್.ಬೇಟರಾಯಪ್ಪ ಮಾತನಾಡಿ, ಅಂಬೇಡ್ಕರ್ ಬಾಲ್ಯದ ಜೀವನ, ವಿದ್ಯಾಭ್ಯಾಸ, ಸಾಧನೆ, ಸಂವಿಧಾನದ ಅರಿವು ಮೂಡಿಸಿದರು. ಅಂಬೇಡ್ಕರ್ ಅವರೇ ಜ್ಞಾನದ ಗ್ರಂಥಾಲಯ, ವಿಶ್ವಕೋಶ. ಸಂವಿಧಾನದಿಂದ ವಿವಿಧ ತಳವರ್ಗದ ಸಮುದಾಯಗಳು ಇಂದು ಉದ್ಯೋಗ ಪಡೆದುಕೊಂಡು ಸಮಾನತೆಯ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದರು.
ದೊಡ್ಡಗಂಜೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಕೆ.ಓಬಯ್ಯ ಮಾತನಾಡಿ, ಅಂಬೇಡ್ಕರ್ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಕಾನೂನು ಮತ್ತು ತತ್ವಶಾಸ್ತ್ರಗಳ ಪ್ರವೀಣರಾಗಿದ್ದರು. ಅವರು ಭಾರತಕ್ಕೆ ಮಾತ್ರ ಸೀಮಿತರಾಗದೆ ವಿಶ್ವನಾಯಕ ಎನಿಸಿಕೊಂಡಿದ್ದರು. ಹಾಗಾಗಿ ವಿಶ್ವದ 150 ಕ್ಕೂ ಹೆಚ್ಚು ದೇಶಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಕಸಾಪ ಅಧ್ಯಕ್ಷ ಎನ್.ವಿ.ಶ್ರೀನಿವಾಸನ್, ಶಿಕ್ಷಕ ಮಂಜುನಾಥ್, ಸಾಹಿತಿ ನಂಜುಂಡಗೌಡ ಮಾತನಾಡಿದರು. ಎಸ್.ಎಫ್.ಎಸ್ ಸುರೇಶ್ ಭಾವಗೀತೆ ಹಾಡಿದರು.
ಎಸ್.ಎನ್.ರಂಗನಾಥ್, ವಿ.ರಮೇಶ್, ಡಿ.ವಿ.ಶಂಕರರೆಡ್ಡಿ, ಶಿಕ್ಷಕ ಶ್ರೀನಿವಾಸ್, ಮಂಜುನಾಥ್, ಕರವೇ ನಾಗರಾಜು, ಕೆ.ಎಂ.ವೆಂಕಟೇಶ್, ವೆಂಕಟೇಶ್ವರರಾವ್, ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.