ADVERTISEMENT

ಚಿಕ್ಕಬಳ್ಳಾಪುರ: ಜಿಲ್ಲಾಸ್ಪತ್ರೆಗೆ ದಾಖಲಾದ ಕೆಲ ಹೊತ್ತಿನಲ್ಲೇ ಮಗು ಸಾವು

ನಿರ್ಲಕ್ಷ್ಯದ ಆರೋಪ * ಆರೋಪ ಅಲ್ಲಗಳೆದ ವೈದ್ಯರು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 15:53 IST
Last Updated 14 ಏಪ್ರಿಲ್ 2020, 15:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ: ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದ ಎರಡೂವರೆ ತಿಂಗಳ ಗಂಡು ಮಗುವೊಂದು ಮಂಗಳವಾರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಕೆಲ ಹೊತ್ತಿನಲ್ಲಿಯೇ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಶಿಡ್ಲಘಟ್ಟ ತಾಲ್ಲೂಕಿನ ರಾಮಲಿಂಗಾಪುರ ನಿವಾಸಿ ಮಹದೇವ–ರತ್ನಮ್ಮ ದಂಪತಿ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಮಗನಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ವಿವಿಧೆಡೆ ಚಿಕಿತ್ಸೆ ಕೊಡಿಸಿದ್ದರು. ಸೋಮವಾರ ಕೂಡ ದಂಪತಿ ಮಗುವಿನೊಂದಿಗೆ ಜಿಲ್ಲಾ ಆಸ್ಪತ್ರೆಗೆ ಬಂದಾಗ ವೈದ್ಯರು ಮಗುವನ್ನು ದಾಖಲಿಸಿಕೊಳ್ಳದೆ ಮಾತ್ರೆ, ಔಷಧಿ ನೀಡಿ ಕಳುಹಿಸಿದ್ದರು ಎನ್ನಲಾಗಿದೆ.

ಮಗುವಿನ ಆರೋಗ್ಯದಲ್ಲಿ ಏರುಪೇರಾದ ಕಾರಣ ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಮಗುವನ್ನು ಪುನಃ ಜಿಲ್ಲಾ ಆಸ್ಪತ್ರೆಗೆ ಕರೆದು ತಂದಾಗ ವೈದ್ಯರು ದಾಖಲಿಸಿಕೊಂಡು ಚಿಕಿತ್ಸೆ ಆರಂಭಿಸಿದ್ದಾರೆ. ಮಧ್ಯಾಹ್ನ 12.30ರ ಸುಮಾರಿಗೆ ಮಗು ಏಕಾಏಕಿ ಮೃತಪಟ್ಟಿದೆ.

ADVERTISEMENT

ಮಗು ಮೃತಪಡುತ್ತಿದ್ದಂತೆ ಪೋಷಕರು ವೈದ್ಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಪೊಲೀಸರ ಬಳಿ ಆರೋಪ ಮಾಡಿದ್ದಾರೆ. ಇದನ್ನು ಜಿಲ್ಲಾ ಆಸ್ಪತ್ರೆಯ ವೈದ್ಯರು ಅಲ್ಲಗಳೆದಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಮಗುವಿನ ಮೃತದೇಹದ ಮರಣೋತ್ತರ ಪರೀಕ್ಷೆ ಕೂಡ ನಡೆಸದೆ, ಮೃತದೇಹವನ್ನು ಕೊಂಡೊಯ್ದು ಪೋಷಕರು ಅಂತ್ಯಕ್ರಿಯೆ ನಡೆಸಿದ್ದಾರೆ.

ಈ ಕುರಿತು ಜಿಲ್ಲಾ ಆಸ್ಪತ್ರೆ ನಿವಾಸಿ ವೈಧ್ಯಾಧಿಕಾರಿ ರಮೇಶ್‌ ಅವರನ್ನು ವಿಚಾರಿಸಿದರೆ, ‘ನಮ್ಮಲ್ಲಿ ಬರುವುದಕ್ಕೂ ಮೊದಲೇ ಮಗುವಿನ ಪೋಷಕರು ಕೆಲ ಖಾಸಗಿ ಆಸ್ಪತ್ರೆಗಳಿಗೆ ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ನೀಡಿದ್ದ ಮಾತ್ರೆ, ಔಷಧಿಯನ್ನು ಕೂಡ ಪೋಷಕರು ಮಗುವಿಗೆ ನೀಡಿಲ್ಲ’ ಎಂದು ಹೇಳಿದರು.

‘ಮಂಗಳವಾರ ಬೆಳಿಗ್ಗೆ ಪುನಃ ಪೋಷಕರು ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಮಗುವನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಕೂಡ ಸರಿಯಾದ ರೀತಿಯಲ್ಲಿಯೇ ಆರಂಭಿಸಿದ್ದೆವು. ಏಕಾಏಕಿ ಮಧ್ಯಾಹ್ನ 12.30ರ ಸುಮಾರಿಗೆ ಮಗು ಮೃತಪಟ್ಟಿದೆ’ ಎಂದು ತಿಳಿಸಿದರು.

‘ಮಧ್ಯಾಹ್ನದ ವೇಳೆ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿ ಕೊಡಲು ನಿರ್ಧರಿಸಲಾಗಿತ್ತು. ಬೆಂಗಳೂರಿನಲ್ಲಿ ಕೂಡ ಎಲ್ಲಿಯೂ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿಲ್ಲ. ಆದ್ದರಿಂದ ಜಿಲ್ಲಾ ಆಸ್ಪತ್ರೆಯಲ್ಲಿಯೇ ಮಗುವಿಗೆ ಚಿಕ್ಸಿತ್ಸೆ ನೀಡಲು ಆರಂಭಿಸಿದ್ದೆವು’ ಎಂದರು.

‘ಮಗು ತಾಯಿಯ ಹಾಲು ಕುಡಿಯುವ ಸಂದರ್ಭದಲ್ಲಿ ಮೃತಪಟ್ಟಿದೆ ಎಂದು ಪೋಷಕರೇ ಹೇಳಿದ್ದಾರೆ. ಈ ಪ್ರಕರಣದಲ್ಲಿ ನಮ್ಮ ವೈದ್ಯರ ನಿರ್ಲಕ್ಷ್ಯ ಕಂಡುಬಂದಿಲ್ಲ. ಮಗುವಿಗೆ ನ್ಯೂಮೊನಿಯಾ ಆಗಿರುವ ಶಂಕೆ ಇದೆ. ಕೆಲವು ಬಾರಿ ಸಾವಿಗೆ ನಿಖರ ಕಾರಣ ಹೇಳುವುದು ಕಷ್ಟವಾಗುತ್ತದೆ’ ಎಂದು ಹೇಳಿದರು.

ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರನ್ನು ಪ್ರಶ್ನಿಸಿದರೆ, ‘ಮಗುವಿನ ಪೋಷಕರು ವೈದ್ಯರ ನಿರ್ಲಕ್ಷ್ಯದಿಂದಾಗಿ ಮಗು ಮೃತಪಟ್ಟಿರುವುದಾಗಿ ಆರೋಪ ಮಾಡಿದರು. ಆದರೆ, ಈ ಬಗ್ಗೆ ದೂರು ದಾಖಲಿಸಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.