ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ವರ್ಷ ಬಾಲ್ಯ ವಿವಾಹ, ಪೋಕ್ಸೊ ಪ್ರಕರಣಗಳು ಮತ್ತು ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಇವುಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸಂಬಂಧಪಟ್ಟ ಕಾವಲು ಪಡೆ ಸಮಿತಿಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ನಗರದಲ್ಲಿ ಗುರುವಾರ ನಡೆದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಅರಿವಿನ ಕೊರತೆಯಿಂದ ಬಾಲ್ಯ ವಿವಾಹ ಮತ್ತು ಪೋಕ್ಸೊ ಪ್ರಕರಣಗಳ ಹೆಚ್ಚುತ್ತಿದೆ. ಈ ಬಗ್ಗೆ ಕಾನೂನಿನ ಅರಿವು ಕಾರ್ಯವನ್ನು ನಿರಂತರವಾಗಿ ಹಮ್ಮಿಕೊಂಡು ಜಾಗೃತಿ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರಚನೆ ಆಗಿರುವ ಕಾವಲು ಸಮಿತಿಗಳು ಮತ್ತಷ್ಟು ಕ್ರಿಯಾಶೀಲವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಏಕ ಪೋಷಕ ಮಕ್ಕಳ ವಿಷಯದಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವ ಕಾರಣ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು ಅಂತಹ ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಪೋಷಕರ ನಿರಂತರ ಸಂಪರ್ಕದಲ್ಲಿದ್ದು, ಮಕ್ಕಳ ಮೇಲಾಗುವ ದೌರ್ಜನ್ಯಗಳನ್ನು ತಡೆಗಟ್ಟಬೇಕು. ಅವರ ಹಕ್ಕುಗಳನ್ನು ರಕ್ಷಿಸಬೇಕು ಎಂದರು.
ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ ಮಾತನಾಡಿ, ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಹಲವು ಕಾನೂನುಗಳಿವೆ. ಆದರೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇವೆ. ಹಕ್ಕುಗಳಿಗೆ ತೊಂದರೆಯಾಗುತ್ತಲೇ ಇದೆ. ಇದಕ್ಕೆ ಪ್ರಮುಖ ಕಾರಣ ಜನಸಾಮಾನ್ಯರಲ್ಲಿ ಕಾನೂನು ಅರಿವಿನ ಕೊರತೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇದಕ್ಕೆ ಶಿಕ್ಷಣದ ಕೊರತೆಯೂ ಕಾರಣ. ಸರ್ಕಾರ ನಿಗದಿಪಡಿಸಿರುವ ಮದುವೆಯ ವಯಸ್ಸನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು. ಹಳ್ಳಿಗಳಲ್ಲಿ ಬೀದಿ ನಾಟಕಗಳ ಮೂಲಕ ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆ ಕುರಿತು ಸರಳವಾಗಿ ಸಂದೇಶ ರವಾನಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ವೈ.ನವೀನ್ ಭಟ್ ಮಾತನಾಡಿ, ಮಕ್ಕಳ ರಕ್ಷಣೆಯಲ್ಲಿ ಸರ್ಕಾರದ ಪಾತ್ರ ಮಾತ್ರವಲ್ಲದೆ ಸ್ವಯಂ ಸೇವಾ ಸಂಸ್ಥೆಗಳು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರ ಪಾತ್ರವೂ ಅತಿ ಮುಖ್ಯ ಎಂದರು.
‘ಯಾವುದೇ ಮಕ್ಕಳ ರಕ್ಷಣೆಯ ವಿಚಾರದಲ್ಲಿ ನಮಗೆ ಸಂಬಂಧವಿಲ್ಲ. ಅದು ಸರ್ಕಾರದ ಕೆಲಸ ಎಂಬ ನಕಾರಾತ್ಮಕ ಮನೋಭಾವವನ್ನು ಮೊದಲು ತೊಡೆದು ಹಾಕಬೇಕು. ಬಾಲ್ಯ ವಿವಾಹವೇ ಕಾನೂನು ಬಾಹಿರ. ಇತ್ತೀಚಿನ ದಿನಗಳಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಏರಿಕೆ ಆಗುತ್ತಿರುವುದು ಆತಂಕದ ವಿಷಯ’ ಎಂದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೊ ಕಾಯ್ದೆ ಇರುವುದರ ನಡುವೆಯೂ ಬಾಲ ಗರ್ಭಿಣಿಯರು ಹೆಚ್ಚಾಗುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರ. ಹೆರಿಗೆ ಸಂದರ್ಭದಲ್ಲಿ ತಾಯಿ ಮರಣ ಪ್ರಮಾಣ ಅವಲೋಕಿಸಿದಾಗ ಬಾಲ ಗರ್ಭಿಣಿಯರ ಸಂಖ್ಯೆಯೇ ಅಧಿಕವಾಗಿರುವುದು ಕಳವಳ ತರುತ್ತದೆ. ಈ ರೀತಿ ಜನಿಸುವ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯೂ ಕುಂಠಿತವಾಗುವುದು ಗಮನಾರ್ಹ ಸಂಗತಿಯಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ. ಅಭಿಲಾಷ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ್ ರೈ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್.ವೆಂಕಟೇಶರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ಮಕ್ಕಳ ರಕ್ಷಣಾಧಿಕಾರಿ ಬಿ. ನೌತಾಜ್ ಮತ್ತಿತರರು ಪಾಲ್ಗೊಂಡಿದ್ದರು.
ಅನಾಥ ಮಕ್ಕಳಿಗೆ ಆಧಾರ್ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಶಿಲ್ಪಾ ಅವರು ಬಾಲ್ಯ ವಿವಾಹ ನಿಯಂತ್ರಣ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ನಿರ್ಗತಿಕರಿಗೆ ಮತ್ತು ಅನಾಥ ಮಕ್ಕಳಿಗೆ ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣ ಪತ್ರ ವಿತರಿಸಲಾಯಿತು. ಬಾಲ್ಯ ವಿವಾಹ ನಿಯಂತ್ರಣದ ಕುರಿತು ಜಾಗೃತಿ ಗೀತೆಗಳನ್ನು ರಚಿಸಿ ವ್ಯಾಪಕವಾಗಿ ಗಾಯನದ ಮೂಲಕ ಅರಿವು ಮೂಡಿಸುತ್ತಿರುವ ರಾಜ್ಯ ಪ್ರಶಸ್ತಿ ಪುರಸ್ಕೃತ ಗಾ.ನ ಅಶ್ವತ್ಥ್ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಬಾಲ್ಯ ವಿವಾಹ ನಿಯಂತ್ರಣದ ಜಾಗೃತಿ ಕುರಿತ ಕರಪತ್ರಗಳು ಭಿತ್ತಿ ಪತ್ರಗಳು ಹಾಗೂ ಗಾ.ನ ಅಶ್ವತ್ಥ್ ಗಾಯನದ ಧ್ವನಿ ಸುರಳಿ ಬಿಡುಗಡೆ ಮಾಡಲಾಯಿತು.
- 1908ಕ್ಕೆ ಕರೆ ಮಾಡಿ ಬಾಲ್ಯ ವಿವಾಹ ನಡೆಯುವ ಬಗ್ಗೆ ಮಾಹಿತಿ ಗಮನಕ್ಕೆ ಬಂದ ಕೂಡಲೇ ಉಚಿತ ಸಹಾಯವಾಣಿ 1908ಕ್ಕೆ ಕರೆ ಮಾಡಿ ಮಾಹಿತಿ ತಲುಪಿಸಬೇಕು. ಉಳಿದ ವಿಚಾರವನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿ ಸಿಬ್ಬಂದಿಯವರು ಕಾರ್ಯಪ್ರವೃತ್ತರಾಗಿ ಕ್ರಮ ವಹಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.