ADVERTISEMENT

ಚೇಳೂರು ಚಿಮುಲ್ ಗದ್ದುಗೆ: ಕಾಂಗ್ರೆಸ್–ಎನ್‌ಡಿಎ ಜಟಾಪಟಿ

ಚೇಳೂರು ಕಣದಲ್ಲಿ ಕೃಷ್ಣರೆಡ್ಡಿ, ಶೇಖರ್ ನಡುವೆ ಹಣಾಹಣಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 3:16 IST
Last Updated 27 ಜನವರಿ 2026, 3:16 IST
ಕೆ.ಎನ್.ಕೃಷ್ಣರೆಡ್ಡಿ
ಕೆ.ಎನ್.ಕೃಷ್ಣರೆಡ್ಡಿ   

ಚೇಳೂರು: ಚೇಳೂರು ಕ್ಷೇತ್ರದಲ್ಲಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಚುನಾವಣೆ ಸಮರ ಚುರುಕು ಕಂಡಿದೆ. ಇದೇ ಮೊದಲ ಬಾರಿಗೆ ಚೇಳೂರು ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ. ಹೊಸ ತಾಲ್ಲೂಕಿಗೆ ಮೊದಲ ನಿರ್ದೇಶಕರು ಯಾರು ಆಯ್ಕೆಯಾಗುವರು ಎನ್ನುವ ಚರ್ಚೆ ಸಹಕಾರ ಮತ್ತು ರಾಜಕೀಯ ವಲಯದಲ್ಲಿದೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಶೇಖರ್ ಬಿ ಸ್ಪರ್ಧಿಸಿದ್ದಾರೆ. ಅವರು  ಚಿಲಕಲನೇರ್ಪು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿದ್ದಾರೆ. ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿ ಕೆ.ಎನ್.ಕೃಷ್ಣರೆಡ್ಡಿ ಕಣದಲ್ಲಿ ಇದ್ದಾರೆ.

ಚೇಳೂರು ಕ್ಷೇತ್ರದ ವ್ಯಾಪ್ತಿಗೆ ರಾಶ್ಚೇರವು, ಪುಲಗಲ್ಲು, ಚಾಕಲವೇಲು, ಚೇಳೂರು, ಎಂ.ನಲ್ಲಗುಟ್ಟಪಲ್ಲಿ, ಪಾಳ್ಯಕೆರೆ, ಚಿಲಕಲನೇರ್ಪು, ಏನಿಗದೆಲೆ, ಬುರುಡಗುಂಟೆ, ಕೋರ್ಲಪರ್ತಿ ಪಂಚಾಯಿತಿ, ಚಿಂತಾಮಣಿ ತಾಲ್ಲೂಕಿನ ಮಿಟ್ಟಹಳ್ಳಿ, ಕೆಂಚಾರ್ಲಹಳ್ಳಿ, ಮಿಂಡಗಲ್, ಎಸ್.ರಾಗುಟ್ಟಹಳ್ಳಿ, ಬಟ್ಲಹಳ್ಳಿ, ಕಡದನಮರಿ, ಇರಗಂಪಲ್ಲಿ, ಎಂ.ಗೊಲ್ಲಹಳ್ಳಿ, ಕೋಟಗಲ್ಲು ಪಂಚಾಯಿತಿಗಳು ಒಳಪಡುತ್ತವೆ. ಕ್ಷೇತ್ರದಲ್ಲಿ ಒಟ್ಟು 72 ಅರ್ಹ ಮತದಾರರು (ಡೆಲಿಗೇಟ್) ಇದ್ದಾರೆ.

ADVERTISEMENT

 ಚೇಳೂರು ಕ್ಷೇತ್ರದಿಂದ ಶೇಖರ್ ಬಿ., ಎನ್.ವಿ.ಶ್ರೀರಾಮರೆಡ್ಡಿ, ಕೆ.ಎನ್.ಕೃಷ್ಣರೆಡ್ಡಿ, ವೆಂಕಟರವಣಪ್ಪ ಎಚ್.ವಿ ಉಮೇದುವಾರಿಕೆ ಸಲ್ಲಿಸಿದ್ದರು. ಎನ್.ವಿ.ಶ್ರೀರಾಮರೆಡ್ಡಿ ನಾಮಪತ್ರ ಪರಿಶೀಲನೆಯಲ್ಲಿ ತಿರಸ್ಕೃತವಾಯಿತು. ವೆಂಕಟರವಣಪ್ಪ ಎಚ್.ವಿ ನಾಮಪತ್ರ ವಾಪಸ್ ಪಡೆದರು. ಕಾಂಗ್ರೆಸ್ ಬೆಂಬಲದಲ್ಲಿ ಶೇಖರ್ ಬಿ. ಮತ್ತು ಬಿಜೆಪಿ, ಜೆಡಿಎಸ್ ಮೈತ್ರಿಕೂಟ ಬೆಂಬಲಿತರಾಗಿ ಕೆ.ಎನ್.ಕೃಷ್ಣರೆಡ್ಡಿ ಹಣಾಹಣಿ ನಡೆಸಿದ್ದಾರೆ.

ಶೇಖರ್ ಅವರ ತಂದೆ ಕೂಡ ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಹಲವು ವರ್ಷಗಳ ಕಾಲ ಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೂ ಅಧ್ಯಕ್ಷರಾಗಿದ್ದರು. ಅವರ ತಾಯಿ ಮತ್ತು ಪತ್ನಿ ಚಿಲಕಲನೇರ್ಪು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಮೊದಲ ಬಾರಿಗೆ ಚಿಮುಲ್ ಚುನಾವಣೆ ಸ್ಪರ್ಧಿಸುತ್ತಿರುವ ಅವರು, ಕಾಂಗ್ರೆಸ್ ಮುಖಂಡರ ಬೆಂಬಲದಿಂದ ಜಯ ಸಾಧಿಸುವ ವಿಶ್ವಾಸದಲ್ಲಿ ಇದ್ದಾರೆ.

ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎನ್.ಕೃಷ್ಣರೆಡ್ಡಿ ಕೂಡಾ ರಾಜಕೀಯದಲ್ಲಿ ಗುರುತಿಸಿಕೊಂಡವರು. ಕೆಂಚಾರ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದಾರೆ. ಎರಡು ಬಾರಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿದ್ದರು. ಇವರೂ ಇದೇ ಮೊದಲ ಬಾರಿಗೆ ಚಿಮುಲ್ ಚುನಾವಣೆಗೆ ಧುಮುಕಿದ್ದಾರೆ.

ಇಬ್ಬರೂ ಅಭ್ಯರ್ಥಿಗಳು ಸಹಕಾರ ಕ್ಷೇತ್ರದಲ್ಲಿ ಅನುಭವಿಗಳು. ಈ ಕಾರಣದಿಂದ ಚೇಳೂರು ಚಿಮುಲ್ ಕ್ಷೇತ್ರದಲ್ಲಿ ಪೈಪೋಟಿ ತೀವ್ರವಾಗಿದೆ.

ಶೇಖರ್ 

Highlights - ಚೇಳೂರು ಕ್ಷೇತ್ರದಲ್ಲಿ 72 ಮತದಾರರು ಇದೇ ಮೊದಲ ಬಾರಿಗೆ ಅಸ್ತಿತ್ವ ಪಡೆದಿರುವ ಕ್ಷೇತ್ರ ಡೆಲಿಗೇಟ್‌ಗಳ ಮನಗೆಲ್ಲಲು ಇನ್ನಿಲ್ಲದ ಪ್ರಯತ್ನ

Cut-off box - ಎಲ್ಲರ ಬೆಂಬಲ ಈಗಾಗಲೇ ಗೆಲುವಿಗೆ ಸಂಬಂಧಿಸಿದಂತೆ ಕಾರ್ಯತಂತ್ರ ರೂಪಿಸಲಾಗಿದೆ. ಸಭೆಗಳನ್ನೂ ನಡೆಸಲಾಗಿದೆ. ಎರಡು ಬಾರಿ ಅಧ್ಯಕ್ಷನಾಗಿ ಸಹಕಾರ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಅನುಭವವಿದೆ. ಮತದಾರರ (ಡೆಲಿಗೇಟ್) ಪ್ರೀತಿ ವಿಶ್ವಾಸ ಬೆಂಬಲದಿಂದ ಗೆಲುವು ಸಾಧಿಸುವ ನಿರೀಕ್ಷೆ ಇದೆ. –ಕೆ.ಎನ್.ಕೃಷ್ಣರೆಡ್ಡಿ  *** ಡೆಲಿಗೇಟ್‌ಗಳು ಕೈ ಹಿಡಿಯುವ ನಂಬಿಕೆ ಸಚಿವರು ಹಾಗೂ ಶಾಸಕರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಪಕ್ಷದ ಮುಖಂಡರ ಬೆಂಬಲವೂ ಇದೆ. ನಮ್ಮ ಇಡೀ ಕುಟುಂಬ ಜನಸೇವೆಯಲ್ಲಿ ತೊಡಗಿಸಿಕೊಂಡಿದೆ. ಡೆಲಿಗೇಟ್‌ಗಳು ಕೈ ಹಿಡಿಯುವ ನಂಬಿಕೆ ಇದೆ. - ಶೇಖರ್ ಬಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.