ADVERTISEMENT

ಚಿಂತಾಮಣಿ: ಸ್ತಬ್ಧ ಚಿತ್ರಗಳ ಅದ್ದೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 14:07 IST
Last Updated 14 ಏಪ್ರಿಲ್ 2025, 14:07 IST
ಚಿಂತಾಮಣಿಯಲ್ಲಿ ಸೋಮವಾರ ಅಂಬೇಡ್ಕರ್‌ ಜಯಂತಿ ಅಂಗವಾಗಿ ಆಕರ್ಷಕ ಡೊಳ್ಳು ಕುಣಿತ ಮೆರವಣಿಗೆ ನಡೆಯಿತು
ಚಿಂತಾಮಣಿಯಲ್ಲಿ ಸೋಮವಾರ ಅಂಬೇಡ್ಕರ್‌ ಜಯಂತಿ ಅಂಗವಾಗಿ ಆಕರ್ಷಕ ಡೊಳ್ಳು ಕುಣಿತ ಮೆರವಣಿಗೆ ನಡೆಯಿತು   

ಚಿಂತಾಮಣಿ: ನಗರದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ಹಾಗೂ ದಲಿತ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಸಂವಿಧಾನಶಿಲ್ಪಿ ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಸ್ತಬ್ಧಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಅಂಬೇಡ್ಕರ್ ಭಾವಚಿತ್ರವನ್ನು ಹೊತ್ತ ಅಲಂಕೃತ ಬೆಳ್ಳಿ ಕುದುರೆ ಸಾರೋಟು ಮೆರವಣಿಗೆ ನಡೆಯಿತು. ಮಂಗಳವಾದ್ಯ, ಕಳಶ ಹೊತ್ತ ಮಹಿಳೆಯರು, ಗಾರುಡಿಗೊಂಬೆ, ಡೊಳ್ಳುಕುಣಿತ, ತಮಟೆವಾದ್ಯಗಳ ತಂಡಗಳು ಗಮನ ಸೆಳೆದವು. 

ನಗರದ ಪ್ರವಾಸಿ ಮಂದಿದರ ಬಳಿ ತಹಶೀಲ್ದಾರ್ ಸುದರ್ಶನ ಯಾದವ್, ತಾಲ್ಲೂಕು ಪಂಚಾಯಿತಿ ಇಒ ಎಸ್.ಆನಂದ್, ಪೌರಾಯುಕ್ತ ಜಿ.ಎನ್.ಚಲಪತಿ ಮತ್ತು ಸಮುದಾಯದ ಮುಖಂಡರು ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿದರು.

ADVERTISEMENT

ಪ್ರವಾಸಿ ಮಂದಿರದಿಂದ ಹೊರಟ ಮೆರವಣಿಗೆ ಜೋಡಿ ರಸ್ತೆ, ಕೆನರಾ ಬ್ಯಾಂಕ್ ರಸ್ತೆ, ಗಜಾನನ ವೃತ್ತ, ಬಾಗೇಪಲ್ಲಿ ವೃತ್ತ, ಎಂ.ಜಿ.ರಸ್ತೆ, ಪಿಸಿಆರ್ ಕಾಂಪ್ಲೆಕ್ಸ್, ಚೇಳೂರು ವೃತ್ತ, ಸರ್ಕಾರಿ ಬಸ್‌ ನಿಲ್ದಾಣ, ಯೋಗಿ ನಾರೇಯಣ ವೃತ್ತದ ಮೂಲಕ ಗ್ರಂಥಾಲಯದ ಮುಂಭಾಗದಲ್ಲಿ ಆಯೋಜಿಸಿದ್ದ ವೇದಿಕೆ ಸ್ಥಳಕ್ಕೆ ತಲುಪಿತು.

ಕಾರ್ಯಕರ್ತರು ತಮಟೆ ವಾದ್ಯಕ್ಕೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಜೈಭೀಮ್ ಘೋಷಣೆ ಜತೆಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾರ್ ಪರವಾಗಿಯೂ ಜೈಕಾರ ಮೊಳಗಿದವು. ‌

ನಗರಸಭೆ‌ ಹಾಲಿ ಮತ್ತು ಮಾಜಿ ಸದಸ್ಯರು, ದಲಿತ ಸಂಘಟನೆಗಳ ಮುಖಂಡರು, ವಿವಿಧ ಸಂಗಸಂಸ್ಥೆಗಳ ಪದಾಧಿಕಾರಿಗಳು, ತಾ.ಪಂ ಮತ್ತು ಜಿ.ಪಂ ಮಾಜಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.