ADVERTISEMENT

ಇಂದು ವಿಶ್ವ ಏಡ್ಸ್ ದಿನಾಚರಣೆ: ಏಡ್ಸ್ ಸೊಂಕಿತರು ಚಿಂತಾಮಣಿಯಲ್ಲಿ ಅಧಿಕ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 6:36 IST
Last Updated 1 ಡಿಸೆಂಬರ್ 2021, 6:36 IST

ಚಿಂತಾಮಣಿ: ಪ್ರತಿವರ್ಷ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಏಡ್ಸ್ ಸೋಂಕಿನ ಕುರಿತು ಜಾಗೃತಿ ಮೂಡಿಸಲು ಜಾಥಾ, ಕರಪತ್ರಗಳ ವಿತರಣೆ, ವೇದಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಜಿಲ್ಲೆಯಲ್ಲಿ ಈ ವರ್ಷ ‘ಅಸಮಾನತೆ ಕೊನೆಗೊಳಿಸಿ, ಏಡ್ಸ್ ಕೊನೆಗೊಳಿಸಿ, ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ’ ಎಂಬ ಘೋಷಣೆಯೊಂದಿಗೆ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಎಚ್‌ಐವಿ ಸೋಂಕಿತರು ಹಾಗೂ ಏಡ್ಸ್ ರೋಗಿಗಳ ಪ್ರಮಾಣದಲ್ಲಿ ಚಿಂತಾಮಣಿ ತಾಲ್ಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ಜತೆಗೆ ಸೋಂಕಿತ ಗರ್ಭಿಣಿಯರ ಪಟ್ಟಿಯಲ್ಲೂ ಮುಂಚೂಣಿಯಲ್ಲಿದೆ ಎಂದು ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ-ಅಂಶಗಳು ತಿಳಿಸುತ್ತವೆ.

ADVERTISEMENT

ತಾಲ್ಲೂಕಿನಲ್ಲಿ 522 ಪುರುಷರು, 434 ಮಹಿಳೆಯರು, 13 ಬಾಲಕರು, 15 ಬಾಲಕಿಯರು, ಇತರೆ 5 ಮಂದಿ ಸೇರಿ ಒಟ್ಟು 989 ಮಂದಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ. ಇದುವರೆಗೆ ಒಟ್ಟು 989 ಮಂದಿ ಎಚ್ಐವಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಂಕಿತರಲ್ಲಿ ಶೇ 90 ಮಂದಿ ಎಆರ್‌ಟಿ ಚಿಕಿತ್ಸೆ ಪಡೆದಿರಬೇಕು. ಎಆರ್‌ಟಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಶೇ 90 ಮಂದಿಯಾದರೂ ತಮ್ಮ ವೈರಲ್ ಲೋಡ್ ಪ್ರಮಾಣವನ್ನು ತಹಬದಿಯಲ್ಲಿ ಇಟ್ಟುಕೊಳ್ಳುವಂತೆ ಮಾಡಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಸ್ವಾತಿ ತಿಳಿಸಿದರು.

ತಾಲ್ಲೂಕಿನಲ್ಲಿ ಇದುವರೆಗೆ ಒಟ್ಟು 989 ಮಂದಿ ತಮಗೆ ಹತ್ತಿರವಾಗಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ತಿಂಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 6 ತಿಂಗಳಿಗೊಮ್ಮೆ ವೈರಲ್ ಲೋಡ್ ಪ್ರಮಾಣದ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಎಚ್ಐವಿ ಸೋಂಕಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.