
ಚಿಂತಾಮಣಿ: ಭವಿಷ್ಯದಲ್ಲಿ ಎತ್ತಿನಹೊಳೆ ನೀರು ಸಂಗ್ರಹಿಸಿಕೊಳ್ಳುವ ನಿಟ್ಟಿನಲ್ಲಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಭಕ್ತರಹಳ್ಳಿ ಅರಸನ ಕೆರೆಯನ್ನು ₹35 ಕೋಟಿ ವೆಚ್ಚದಲ್ಲಿ ವಿಸ್ತರಣೆ ಮಾಡಲಾಗುವುದು. ಇದಕ್ಕೆ ಸಚಿವ ಸಂಪುಟದ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.
ಭಕ್ತರಹಳ್ಳಿ ಅರಸನಕೆರೆ ಕೋಡಿ ಹರಿದಿರುವುದರಿಂದ ನಗರಸಭೆ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಸಂಯುಕ್ತವಾಗಿ ಶನಿವಾರ ಬಾಗಿನ ಅರ್ಪಿಸಲಾಯಿತು.
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪೂರ್ವಿಕರು ಸಾವಿರಾರು ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಇದರ ಫಲವಾಗಿ ಕೃಷಿ ಮತ್ತು ಕುಡಿಯುವ ನೀರನ್ನು ಬಳಸುತ್ತಿದ್ದೇವೆ. ಭಕ್ತರಹಳ್ಳಿ ಕೆರೆ ಈ ಭಾಗದ ರೈತರ ಜೀವನಾಡಿ. ಕೋರ್ಲಪರ್ತಿ ವೆಂಕಟೇಶ ಸಾಗರ ಮತ್ತು ಭಕ್ತರಹಳ್ಳಿ ಕೆರೆಗಳು ದೊಡ್ಡ ಕೆರೆಗಳು. ಮುಂದಿನ ಪೀಳಿಗೆಗೆ ಭೂಮಿಯ ಫಲವತ್ತತೆ, ಉತ್ತಮ ಗಾಳಿ, ಶುದ್ಧ ಕುಡಿಯುವ ನೀರು ಕೊಡುವ ಹಿನ್ನಲೆಯಲ್ಲಿ ಕೆಲವು ಕಠಿಣಕ್ರಮಗಳನ್ನು ಕೈಗೊಳ್ಳಬೇಕಿದೆ. ಇದಕ್ಕೆ ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಎಚ್.ಎನ್.ವ್ಯಾಲಿ ಯೋಜನೆಯಿಂದ ₹237 ಕೋಟಿ ವೆಚ್ಚದಲ್ಲಿ ಚಿಂತಾಮಣಿಯ 119 ಕೆರೆಗಳು ಹಾಗೂ ಶಿಡ್ಲಘಟ್ಟದ 45 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೂ ಸಂಪುಟ ಅನುಮೋದನೆ ನೀಡಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಕೆ.ಸಿ. ವ್ಯಾಲಿಯಲ್ಲಿ ಮೊದಲ ಹಂತದಲ್ಲಿ 6 ಹಾಗೂ ಎರಡನೇ ಹಂತದಲ್ಲಿ 40 ಕೆರೆಗಳನ್ನು ತುಂಬಿಸಲಾಗುತ್ತದೆ ಎಂದರು.
ನಗರಸಭೆ ಅಧ್ಯಕ್ಷ ಆರ್.ಜಗನ್ನಾಥ್, ಪೌರಾಯುಕ್ತ ಜಿ.ಎನ್.ಚಲಪತಿ ಮಾತನಾಡಿದರು.
ತಹಶೀಲ್ದಾರ್ ಸುದರ್ಶನ ಯಾದವ್, ಎಸ್. ಆನಂದ್, ಕೆ.ರಾಣಿಯಮ್ಮ, ನಾಗರಾಜ್, ಲತಾ, ಜನಪ್ರತಿನಿಧಿಗಳು, ನಗರಸಭೆ ಸದಸ್ಯರು, ಸ್ಥಳೀಯ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.