ADVERTISEMENT

ಗೌರಿಬಿದನೂರು | ಶಾಲೆ ರಸ್ತೆಯಲ್ಲಿ ಗೋಡೆ; ಮಕ್ಕಳ ಪರದಾಟ

ಗೌರಿಬಿದನೂರು ಆದರ್ಶ ಶಾಲೆ ರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಿಸಿದ ಜಮೀನು ಮಾಲೀಕ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 2:47 IST
Last Updated 15 ಜುಲೈ 2025, 2:47 IST
ಗೌರಿಬಿದನೂರು ಆದರ್ಶ ಶಾಲೆ ರಸ್ತೆಗೆ ಅಡ್ಡಲಾಗಿ ತಲೆ ಎತ್ತಿದ ಆವರಣ ಗೋಡೆ
ಗೌರಿಬಿದನೂರು ಆದರ್ಶ ಶಾಲೆ ರಸ್ತೆಗೆ ಅಡ್ಡಲಾಗಿ ತಲೆ ಎತ್ತಿದ ಆವರಣ ಗೋಡೆ   

ಗೌರಿಬಿದನೂರು (ಚಿಕ್ಕಬಳ್ಳಾಪುರ): ಇಲ್ಲಿಯ ಕರೇಕಲ್ಲಹಳ್ಳಿ ಬಳಿಯ ಆದರ್ಶ ಶಾಲೆ ರಸ್ತೆಗೆ ಅಡ್ಡಲಾಗಿ ಸೋಮವಾರ ಜಮೀನಿನ ಮಾಲೀಕರೊಬ್ಬರು ಏಕಾಏಕಿ ಕಾಂಪೌಂಡ್ ಕಟ್ಟಿಸಿದ ಕಾರಣ ಶಾಲೆಯಲ್ಲಿದ್ದ ಮಕ್ಕಳು ಮತ್ತು ಶಿಕ್ಷಕರು ಹೊರ ಬರಲು ಪರದಾಡಬೇಕಾಯಿತು.  

ಎಂದಿನಂತೆ ಸೋಮವಾರ ಬೆಳಗ್ಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಶಾಲೆಗೆ ಬಂದಿದ್ದಾರೆ. ಸಂಜೆ ಶಾಲೆ ಬಿಟ್ಟ ನಂತರ ಮನೆಗೆ ತೆರಳಲು ಹೊರ ಬಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಆಶ್ಚರ್ಯ ಕಾದಿತ್ತು.  

ಶಾಲೆ ಪಕ್ಕದ ಜಮೀನಿನ ಮಾಲೀಕ ವಿದ್ಯಾರ್ಥಿಗಳು ನಿತ್ಯ ಓಡಾಡುತ್ತಿದ್ದ ರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಿಸಿದ್ದರು. ಶಾಲೆಯಿಂದ ಹೊರ ಹೋಗಲು ರಸ್ತೆ ಇಲ್ಲದ ಕಾರಣ ತಂತಿಬೇಲಿ ದಾಟಿ ಪಕ್ಕದ ಮತ್ತೊಂದು ಜಮೀನು ಮೂಲಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮನೆ ತಲುಪಿದರು.

ADVERTISEMENT

ಮಳೆ ಕಾರಣ ಕಾಲುದಾರಿ ಕೆಸರುಮಯವಾಗಿತ್ತು. ವಿದ್ಯಾರ್ಥಿಗಳು ಈ ಕೆಸರು ದಾಟಿ ಮುಖ್ಯರಸ್ತೆಗೆ ತಲುಪಲು ಪರದಾಡಿದರು. ಇದನ್ನು ಕಂಡ ಪೋಷಕರು ಶಿಕ್ಷಕರ ಜೊತೆ ‌ವಾಗ್ವಾದಕ್ಕಿಳಿದರು.

15 ವರ್ಷಗಳ ಆರಂಭವಾಗಿರುವ ಆದರ್ಶ ಶಾಲೆಯಲ್ಲಿ 6ನೇ ತರಗತಿಯಿಂದ ಪ್ರಥಮ ಪಿಯುವರೆಗೆ ಒಟ್ಟು 525 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆ ಆರಂಭವಾದ ದಿನದಿಂದಲೂ ವಿದ್ಯಾರ್ಥಿಗಳು ಈ ರಸ್ತೆಯಲ್ಲಿಯೇ ಓಡಾಡುತ್ತಿದ್ದರು.

‘ಇದು ನಮಗೆ ಸೇರಿದ ಜಮೀನು. ಇದಕ್ಕೆ ಸಂಬಂಧಪಟ್ಟ ದಾಖಲೆಗಳು ನಮ್ಮ ಬಳಿ ಇವೆ. ಪರ್ಯಾಯ ರಸ್ತೆ ನಿರ್ಮಿಸಿಕೊಳ್ಳಿ ಎಂದು ಶಾಲೆಯ ಆಡಳಿತ ಮಂಡಳಿ ಸದಸ್ಯರಿಗೆ ಹಲವು ಬಾರಿ ತಿಳಿಸಲಾಗಿತ್ತು. ಆದರೆ, ಅವರು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿಲ್ಲ. ನಮ್ಮ ಜಾಗದಲ್ಲಿ ತಡೆಗೋಡೆ ನಿರ್ಮಿಸಿಕೊಂಡಿದ್ದೇವೆ’ ಎಂದು ಜಮೀನಿನ ಮಾಲೀಕ ಶಂಕರ್ ರೆಡ್ಡಿ ಗೋಡೆ ನಿರ್ಮಾಣವನ್ನು ಸಮರ್ಥಿಸಿಕೊಂಡಿದ್ದಾರೆ.

‘ತಡೆಗೋಡೆ ನಿರ್ಮಿಸುತ್ತೇವೆ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ’ ಜಮೀನು ಮಾಲೀಕರು ಹಲವು ತಿಂಗಳಿನಿಂದ ತಿಳಿಸಿದ್ದರೂ ಶಾಲಾ ಆಡಳಿತ ಮಂಡಳಿಯವರು ಗಂಭಿರವಾಗಿ ಪರಿಗಣಿಸಿಲ್ಲ. ನಗರಸಭೆಗೆ ಪತ್ರ ಬರೆದಿದ್ದೇವೆ, ತಹಶೀಲ್ದಾರರಿಗೆ ಮನವಿ ಮಾಡಿದ್ದೇವೆ ಎಂದು ಉತ್ತರ ನೀಡುತ್ತಿದ್ದಾರೆ’ ಎಂದು ಪೋಷಕರು ಶಾಲಾ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಬಂದ್ ಆದ ಕಾರಣ ಪಕ್ಕದ ಜಮೀನಿನಿಂದ ಮನೆಗೆ ತೆರಳಿದ ಆದರ್ಶ ಶಾಲೆ ವಿದ್ಯಾರ್ಥಿಗಳು 
ರಸ್ತೆ ಬಂದ್ ಆದ ಕಾರಣ ಪಕ್ಕದ ಜಮೀನಿನಿಂದ ಮನೆಗೆ ತೆರಳಿದ ಆದರ್ಶ ಶಾಲೆ ವಿದ್ಯಾರ್ಥಿಗಳು 
ರಸ್ತೆ ಬಂದ್ ಆದ ಕಾರಣ ಪಕ್ಕದ ಜಮೀನಿನಿಂದ ಮನೆಗೆ ತೆರಳಿದ ಆದರ್ಶ ಶಾಲೆ ವಿದ್ಯಾರ್ಥಿಗಳು 

ತಹಶೀಲ್ದಾರ್ ನಗರಸಭೆಗೆ ಮನವಿ  ರಸ್ತೆ ನಿರ್ಮಿಸಿಕೊಡಲು ನಗರಸಭೆಗೆ ಮತ್ತು ತಹಶೀಲ್ದಾರರಿಗೆ ಮನವಿ ಮಾಡಲಾಗಿದೆ. ಆದರೆ ಕಂದಾಯ ಇಲಾಖೆಯವರು ಸರ್ವೆ ಮಾಡಿದ ನಂತರ ರಸ್ತೆ ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದ್ದರು. ಏಕಾಏಕಿ ರಸ್ತೆ ಮುಚ್ಚಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

-ಗಂಗಾಂಬಿಕಾ ಪ್ರಾಂಶುಪಾಲೆ

ಅವಘಡಕ್ಕೆ ಆಡಳಿತ ಮಂಡಳಿಯೇ ಹೊಣೆ ರಸ್ತೆಗೆ ಅಡ್ಡಲಾಗಿ ಗೋಡೆ ಕಟ್ಟಿದ ಕಾರಣ ನನ್ನ ಮಗಳು ಕೆಸರಿನಲ್ಲಿ ಗಿಡಗಂಟಿಗಳ ನಡುವೆ ನಡೆದು ಬಂದಿದ್ದಾಳೆ. ಶಾಲೆ ಆಡಳಿತ ಮಂಡಳಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಶಾಲೆ ನಿರ್ಮಿಸುವ ಮೊದಲು ಶಾಲೆಗೆ ರಸ್ತೆ ಇದೆಯೇ ಅಥವಾ ಇಲ್ಲವೇ ಎನ್ನುವ ಬಗ್ಗೆ ಗಮನ ಹರಿಸಿ ಪರಿಹಾರ ಕಂಡುಕೊಳ್ಳಬೇಕಿತ್ತು. ಏನಾದರು ಅವಘಡ ಸಂಭವಿಸಿದರೆ ಆಡಳಿತ ಮಂಡಳಿಯೇ ಹೊಣೆ.

-ಜನಾರ್ದನ್ ರೆಡ್ಡಿ ಪೋಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.