ADVERTISEMENT

ಚಿಂತಾಮಣಿ: ಇನ್ನೂ ಪೂರ್ಣಗೊಳ್ಳದ ಜಾನುವಾರು ಗಣತಿ

ಚಿಂತಾಮಣಿ ತಾಲ್ಲೂಕಿನಲ್ಲಿ ಶೇ 86ರಷ್ಟು ಗಣತಿ ಪೂರ್ಣ

ಎಂ.ರಾಮಕೃಷ್ಣಪ್ಪ
Published 14 ಮಾರ್ಚ್ 2025, 7:49 IST
Last Updated 14 ಮಾರ್ಚ್ 2025, 7:49 IST
ಚಿಂತಾಮಣಿ ತಾಲ್ಲೂಕಿನಲ್ಲಿ ಗ್ರಾಮವೊಂದಲ್ಲಿ ಜಾನುವಾರು ಗಣತಿ ನಡೆಸುತ್ತಿರುವ ಗಣತಿದಾರ
ಚಿಂತಾಮಣಿ ತಾಲ್ಲೂಕಿನಲ್ಲಿ ಗ್ರಾಮವೊಂದಲ್ಲಿ ಜಾನುವಾರು ಗಣತಿ ನಡೆಸುತ್ತಿರುವ ಗಣತಿದಾರ   

ಚಿಂತಾಮಣಿ: ದೇಶದಾದ್ಯಂತ ನಡೆಯುತ್ತಿರುವ ಜಾನುವಾರು ಗಣತಿ ಪೈಕಿ ತಾಲ್ಲೂಕು ವ್ಯಾಪ್ತಿಯಲ್ಲಿ ಶೇ 86ರಷ್ಟು ಮುಕ್ತಾಯವಾಗಿದೆ. 

2024ರ ಅಕ್ಟೋಬರ್‌ನಿಂದ ಆರಂಭವಾದ ಗಣತಿಯು ಫೆಬ್ರುವರಿಗೆ ಮುಕ್ತಾಯವಾಗಬೇಕಿತ್ತು. ವಿವಿಧ ಕಾರಣಗಳಿಂದ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ.
ಈ ಗಣತಿಯು ಹಿಂದಿನ ಎಲ್ಲ ಗಣತಿಗಳಿಗಿಂತ ವಿಶೇಷವಾಗಿದ್ದು, ಮೊಬೈಲ್ ಆ್ಯಪ್ ಮೂಲಕ ನಿಖರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಹಿಂದಿನ ಗಣತಿಯಲ್ಲಿ ಗಣತಿದಾರರು ಮನೆ ಮನೆಗೂ ತೆರಳಿ ರೈತರಿಂದ ಪಡೆದ ಮಾಹಿತಿಯನ್ನು ನಮೂದಿಸಲಾಗುತ್ತಿತ್ತು. ನಂತರ ಅದನ್ನು ಕ್ರೋಢೀಕರಿಸಿ ಸಮಗ್ರ ವರದಿ ಸಿದ್ಧಪಡಿಸಲು ತಿಂಗಳುಗಟ್ಟಲೆ ಸಮಯ ಹಿಡಿಯುತ್ತಿತ್ತು.

ಇದೇ ಮೊದಲ ಬಾರಿಗೆ ಪಶು ಸಂಗೋಪನಾ ಇಲಾಖೆಯು ‘21ನೇ ಜೈವ್ ಸ್ಟಾಕ್ ಆ್ಯಪ್’ ಅಭಿವೃದ್ಧಿಪಡಿಸಿದೆ. ಗಣತಿದಾರರು ಆ್ಯಪ್ ಬಳಸುತ್ತಿದ್ದು, ಸ್ಥಳದಲ್ಲೇ ಎಲ್ಲ ಮಾಹಿತಿಗಳನ್ನು ಕ್ಷಣ ಮಾತ್ರದಲ್ಲಿ ದಾಖಲಿಸಲಾಗುತ್ತಿದೆ. ಗಣತಿ ಪೂರ್ಣಗೊಂಡ ಮರುದಿನವೇ ಸಮಗ್ರ ಮಾಹಿತಿ ದೊರೆಯಲಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ರಂಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪ್ರತಿ 5 ವರ್ಷಕ್ಕೊಮ್ಮೆ ಜಾನುವಾರು ಗಣತಿ ನಡೆಯುತ್ತದೆ. ದೇಶದಲ್ಲಿ ಇದುವರೆಗೆ 20 ಗಣತಿಗಳು ನಡೆದಿದ್ದು, 21ನೇ ಗಣತಿ ಈಗ ನಡೆಯುತ್ತಿದೆ. ಚಿಂತಾಮಣಿ ತಾಲ್ಲೂಕಿನಲ್ಲಿ 26 ಜನ ಗಣತಿದಾರರು ಹಾಗೂ ಏಳು ಮೇಲ್ವಿಚಾರಕರು ಜಾನುವಾರು ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ. ಒಟ್ಟು 394 ಗ್ರಾಮಗಳಿದ್ದು, 377 ಗ್ರಾಮಗಳಲ್ಲಿ ಗಣತಿ ಪೂರ್ಣಗೊಂಡಿದೆ. ಗ್ರಾಮೀಣ ಭಾಗದಲ್ಲಿ 49,642 ಕುಟುಂಬಗಳಿದ್ದು, 43,154 ಕುಟುಂಬಗಳ ಗಣತಿ ಮುಗಿದಿದೆ.

ನಗರ ಭಾಗದ 31 ವಾರ್ಡ್‌ಗಳಲ್ಲಿ 19,230 ಕುಟುಂಬಗಳಿದ್ದು, 16 ವಾರ್ಡ್‌ಗಳ 9,819 ಕುಟುಂಬಗಳ ಗಣತಿ ಪೂರ್ಣಗೊಂಡಿದೆ ಎಂದು ಡಾ.ಶೀಲಾ ಮಾಹಿತಿ ನೀಡಿದರು.

ಪ್ರತಿ ಮನೆಯ ಸಮೀಪ ಆನ್‌ಲೈನ್‌ನಲ್ಲಿ ಗಣತಿ ಅಂಕಿ-ಅಂಶಗಳನ್ನು ಸೇರಿಸುವುದರಿಂದ ನಿಖರವಾದ ಮಾಹಿತಿ ಸಿಗುತ್ತದೆ. 2019ರಲ್ಲಿ ಕಡೆಯ ಬಾರಿಗೆ ಜಾನುವಾರು ಗಣತಿ ನಡೆದಿತ್ತು. 5 ವರ್ಷಗಳ ಬಳಿಕ ಮತ್ತೆ ಗಣತಿ ಕಾರ್ಯ ನಡೆಯುತ್ತಿದೆ. ಗಣತಿ ಆಧಾರದ ಮೇಲೆ ಸರ್ಕಾರದ ವಿವಿಧ ಯೋಜನೆಗಳು, ಅನುದಾನ, ಲಸಿಕೆ ಮೊದಲಾದ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ.

2019ರ ಜಾನುವಾರು ಗಣತಿ ಪ್ರಕಾರ ತಾಲ್ಲೂಕಿನಲ್ಲಿ 44,966 ಹಸುಗಳು, 8,880 ಎಮ್ಮೆಗಳು ಸೇರಿ ಒಟ್ಟು 53,846 ಜಾನುವಾರುಗಳಿವೆ. 1,58,866 ಕುರಿಗಳು ಹಾಗೂ 46,369 ಮೇಕೆಗಳು ಸೇರಿ ಒಟ್ಟು 2,05,633 ಕುರಿ ಮೇಕೆಗಳಿವೆ. ಈಗಿನ ಗಣತಿ ಮುಕ್ತಾಯವಾದ ನಂತರ ಕಳೆದ ಗಣತಿ ಮತ್ತು ಈಗಿನ ಗಣತಿಯ ವ್ಯತ್ಯಾಸ ಗೊತ್ತಾಗಲಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವೈದ್ಯರು ಮತ್ತು ಸಿಬ್ಬಂದಿಗೆ ಜಾನುವಾರು ಗಣತಿ ಕಾರ್ಯ ವಹಿಸಲಾಗಿದೆ.

ತಾಲ್ಲೂಕಿನಲ್ಲಿರುವ ಗ್ರಾಮಗಳ ಸಂಖ್ಯೆ 394 377 ಗ್ರಾಮಗಳಲ್ಲಿ ಜಾನುವಾರು ಗಣತಿ ಪೂರ್ಣ ತಾಲ್ಲೂಕಿನಲ್ಲಿರುವ ಕುಟುಂಬಗಳ ಸಂಖ್ಯೆ 49,642
ತಾಲ್ಲೂಕಿನಲ್ಲಿ ಜಾನುವಾರು ಗಣತಿ ಶೇ 86ರಷ್ಟು ಮುಗಿದಿದೆ. ಕಾರಣಾಂತರದಿಂದ ಗಣತಿ ಅವಧಿಯನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. 
ಡಾ.ರಂಗಪ್ಪ ಉಪನಿರ್ದೇಶಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ಯಾವ ಮಾಹಿತಿ ಸಂಗ್ರಹ
ಕುಟುಂಬದಲ್ಲಿನ ಜನಸಂಖ್ಯೆ ಯಾವ ವರ್ಗದ ರೈತರು ಹೈನುಗಾರರು ಪಶುಪಾಲನೆಯಲ್ಲಿ ತೊಡಗಿದ ಮಹಿಳೆಯರು ದನ ಎತ್ತು ಎಮ್ಮೆ ಕೋಣ ಕೋಳಿ ಕತ್ತೆ ಕುದುರೆ ಒಂಟೆ ನಾಯಿಗಳ ಮಾಹಿತಿ ಪಡೆಯಲಾಗುತ್ತದೆ. ಮೊದಲ ಬಾರಿಗೆ ಪಶುಪಾಲಕರ ಗಣತಿ ನಡೆಯುತ್ತಿದ್ದು ಪಶುಸಂಗೋಪನೆಯಲ್ಲಿ ತೊಡಗಿರುವ ಪಶುಪಾಲಕರ ಸಂಖ್ಯೆ ಎಷ್ಟು ಎಂಬ ಸ್ಪಷ್ಟ ಮಾಹಿತಿ ದೊರೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.