ಚಿಂತಾಮಣಿ: ಸರ್ಕಾರಿ ಶಾಲೆಗಳ ಮಕ್ಕಳು ಕೀಳರಿಮೆ ಬಿಟ್ಟು ಶ್ರಮವಹಿಸಿ ಓದುವ ಮೂಲಕ ಉನ್ನತ ಸ್ಥಾನಮಾನ ಪಡೆಯಬೇಕೆಂದು ನಗರದ ಬ್ರಹ್ಮಚೈತನ್ಯ ಶ್ರೀರಾಮಮಂದಿರದ ಅಧ್ಯಕ್ಷ ಜಿ.ಎಚ್.ವೆಂಕಟೇಶಮೂರ್ತಿ ಕಿವಿಮಾತು ಹೇಳಿದರು.
ನಗರದ ಬ್ರಹ್ಮ ಚೈತನ್ಯ ಶ್ರೀರಾಮಮಂದಿರದಲ್ಲಿ ಭಾನುವಾರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳೆಂದು ಮೂಗು ಮುರಿಯುವ ಕಾಲ ಈಗಿಲ್ಲ. ಸರ್ಕಾರಿ ಶಾಲೆಗಳಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಖಾಸಗಿ ಶಾಲೆಗಳಿಗಿಂತಲೂ ಪ್ರತಿಭಾವಂತ ಶಿಕ್ಷಕರಿದ್ದಾರೆ. ವಿವಿಧ ಸರ್ಕಾರಿ ಸೌಲಭ್ಯ ದೊರೆಯುತ್ತಿವೆ. ಆಧುನಿಕ ತಾಂತ್ರಿಕ ಯುಗದಲ್ಲಿ ಪ್ರತಿಭಾನ್ವೇಷಣೆ ಮುಖ್ಯ ಅರ್ಹತೆಯಾಗಿದೆ ಎಂದರು.
ವಿದ್ಯಾರ್ಥಿಗಳು ಮಾತೃಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು. ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು.
ಆಧುನಿಕ ಯುಗದಲ್ಲಿ ಇಡೀ ವಿಶ್ವವೇ ಒಂದಾಗಿದೆ. ವಿದ್ಯಾಭ್ಯಾಸ, ವ್ಯಾಪಾರ, ಉದ್ಯೋಗ ಅರಸಿ ಬೇರೆ ಬೇರೆ ದೇಶಗಳಿಗೆ ಹೋಗುವುದು, ಪರಸ್ಪರ ಸಂಪರ್ಕ ಹೆಚ್ಚಾಗುತ್ತಿದೆ. ಹೀಗಾಗಿ ಕನ್ನಡದ ಜತೆಗೆ ಸಾಧ್ಯವಾದಷ್ಟು ಹೆಚ್ಚಿನ ಭಾಷೆಗಳನನೂ ಕಲಿಯಬೇಕು. ಮಾತೃಭಾಷೆ ಕನ್ನಡ, ಒಂದು ರಾಷ್ಟ್ರಭಾಷೆ, ಒಂದು ಅಂತರಾಷ್ಟ್ರೀಯ ಭಾಷೆ ಸೇರಿ ಕನಿಷ್ಠ ಮೂರು ಭಾಷೆಗಳನ್ನದರೂ ಕಲಿಯುವುದು ಭವಿಷ್ಯದ ದೃಷ್ಟಿಯಿಂದ ಒಳಿತು ಎಂದು ಹೇಳಿದರು.
ಬ್ರಹ್ಮ ಚೈತನ್ಯ ಶ್ರೀರಾಮ ಮಂದಿರದಿಂದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪ್ರೋತ್ಸಾಹ ನೀಡುವ ಹಿನ್ನಲೆಯಲ್ಲಿ ಪ್ರತಿವರ್ಷ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದೇವೆ ಎಂದರು.
ಮಂದಿರದ ಉಪಾಧ್ಯಕ್ಷ ಜಿ.ಎಚ್.ರಘುನಾಥ್, ಪೋಷಕರು ಕಡ್ಡಾಯವಾಗಿ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಬೇಕು. ಹೆಣ್ಣು-ಗಂಡು ಎಂಬ ಬೇಧಭಾವ ತೋರದೆ ಶಿಕ್ಷಣ ಕೊಡಿಸಬೇಕು. ಸ್ವತಂತ್ರ ಆಲೋಚನೆ-ಚಿಂತನೆ ಹಾಗೂ ಸ್ವಾವಲಂಬಿಯ ನಂತರವೇ ವಿವಾಹವಾದರೆ ಉತ್ತಮ. ಪ್ರತಿಭಾ ಪುರಸ್ಕಾರ ಪಡೆದ ಮಕ್ಕಳು ಉನ್ನತ ವ್ಯಾಸಂಗ ಮಾಡಬೇಕು. ಉನ್ನತ ಸ್ಥಾನಮಾನಗಳನ್ನು ಪಡೆದು ಮತ್ತೊಬ್ಬರಿಗೆ ಸಹಾಯ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸೂಚಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ವಿ.ಶ್ರೀನಿವಾಸನ್, ಪ್ರಭಾರಿ ಮುಖ್ಯ ಶಿಕ್ಷಕ ಕೆ.ಎಂ.ಗೋವಿಂದರಾಯ ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ನಗದು ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಶಿಕ್ಷಕರಾದ ಮುನಿರಾಜು, ಭಾಸ್ಕರರೆಡ್ಡಿ, ಸೌಭಾಗ್ಯಮ್ಮ, ಶ್ರೀರಾಮಮಂದಿರದ ರಾಜಾರಾಂ, ಕೌಶಿಕ್, ವಿನಯ್, ವಿದ್ಯಾರ್ಥಿನಿಯರು ಹಾಗೂ ಪೋಷಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.