ಚಿಂತಾಮಣಿ: ನರೇಗಾ ಅಡಿಯಲ್ಲಿ ಬರಬೇಕಾದ ಕೂಲಿ ಹಣ ಬಿಡುಗಡೆ ವಿಳಂಬವಾಗಿದ್ದು ಸಾವಿರಾರು ಕೂಲಿಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಬುಧವಾರ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಘುನಾಥ್ ರೆಡ್ಡಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ರೈತರಿಗೆ ಹಣ ಬಾರದೆ ಪರದಾಡುತ್ತಿದ್ದಾರೆ. ದುಡಿಮೆಯ ಪ್ರತಿಫಲಕ್ಕಾಗಿ ಕಾಯುತ್ತಿರುವ ಕಾರ್ಮಿಕರು, ಜೀವನ ನಿರ್ವಹಣೆಗೆ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲಸ ಮಾಡಿದ ಹಣ ಬಾರದೇ ಇರುವುದು ರೈತರ ಆರ್ಥಿಕ ಪರಿಸ್ಥಿತಿ ಮೇಲೂ ಪರಿಣಾಮ ಬೀರುತ್ತಿದೆ ಎಂದರು.
ಕಾರ್ಮಿಕರ ಮೇಲ್ವಿಚಾರಣೆ ಮತ್ತು ಜಿಪಿಎಸ್ ಭಾವಚಿತ್ರ ಕಳುಹಿಸಲು ಪಂಚಾಯಿತಿಗೆ ಒಬ್ಬ ಮೇಲ್ವಿಚಾರಕ ಇದ್ದು, ಪ್ರತಿದಿನ ಕೆಲಸದ ಆರಂಭದಲ್ಲಿ ಭಾವಚಿತ್ರ ತೆಗೆದುಕಳುಹಿಸುತ್ತಿದ್ದರು. ಈಗ ದಿನಕ್ಕೆ ಮೂರು ಬಾರಿ ಕಳುಹಿಸಬೇಕು ಎಂದು ಆದೇಶವಾಗಿರುವುದು ಸಮಸ್ಯೆಗೆ ಕಾರಣ. ಒಬ್ಬ ಮೇಲ್ವಿಚಾರಕ ಎಲ್ಲ ಕಡೆ ಮೂರು ಬಾರಿ ಹೋಗಲು ಸಾಧ್ಯವಿಲ್ಲ. ಭಾವಚಿತ್ರ ಇಲ್ಲದೆ ಕೂಲಿ ಹಣ ಬಿಡುಗಡೆ ಆಗದಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದರು.
ಹೆಚ್ಚಿನ ಮೇಲ್ವಿಚಾರಕರನ್ನು ನೇಮಕ ಮಾಡಬೇಕು. ಇಲ್ಲದಿದ್ದರೆ ಮೊದಲಿನಂತೆ ಪ್ರತಿನಿತ್ಯ ಬೆಳಿಗ್ಗೆ ತೆಗೆದು ಕಳುಹಿಸುವ ವ್ಯವಸ್ಥೆ ಮಾಡಬೇಕು. ಕೆಲಸ ಮಾಡಿದ ನಂತರ ಕಾರ್ಮಿಕರಿಗೆ ಮತ್ತು ರೈತರಿಗೆ ವಿಳಂಬವಿಲ್ಲದೆ ಹಣ ನೀಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕದಿರೇ ಗೌಡ, ಸಂಘದ ಮುಖಂಡ ಎಸ್.ವಿ ಗಂಗುಲಪ್ಪ ನಾಗರಾಜ್, ತಿಮ್ಮೇಗೌಡ, ಆನಂದರೆಡ್ಡಿ, ಜಿ.ಎಂ ಕೊನಪ್ಪ, ನರಸಿಂಹ, ಮುನಿಯಪ್ಪ, ವೆಂಕಟರವಣಪ್ಪ, ವಿ.ನಾಗರಾಜ್, ಕೆ.ವಿ ರಾಮಪ್ಪ, ಕೆ.ಎಂ ಶ್ರೀನಿವಾಸಪ್ಪ, ನಾರಾಯಣಸ್ವಾಮಿ, ಪಿ. ನಾಗರಾಜ್, ಅಂಜಪ್ಪ, ಸೀತಾರಾಮ್ ರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.