
ಚಿಂತಾಮಣಿ: ತಾಲ್ಲೂಕಿನಾದ್ಯಂತ ದಟ್ಟ ಮಂಜು ಆವರಿಸಿದೆ. ನಗರ ಹಾಗೂ ಸುತ್ತಮುತ್ತಲ ಬೆಟ್ಟಗಳಲ್ಲಿ ಮುಂಜಾನೆ ಮಂಜು ಕವಿದ ವಾತಾವರಣವು ಬೆಳಗಿನ ವಾಕಿಂಗ್ (ವಾಯು ವಿಹಾರಿಗಳು) ಪ್ರಿಯರಿಗೆ ಕಚಗುಳಿ ಇಡುವಂತೆ ಭಾಸವಾಗುತ್ತಿದೆ. ಬಯಲು ಸೀಮೆಯಲ್ಲಿ ಮಲೆನಾಡಿನ ವಾತಾವರಣ ಮೂಡಿದೆ.
ನಗರದ ವರದಾದ್ರಿ ಬೆಟ್ಟ ಹಾಗೂ ಸುಮುತ್ತಲಿನ ಅಂಬಾಜಿದುರ್ಗ ಬೆಟ್ಟ, ಕಾಡುಮಲ್ಲೇಶ್ವರ ಬೆಟ್ಟ, ಕೈವಾರ ಬೆಟ್ಟ, ಮುರುಗಮಲ್ಲ ಬೆಟ್ಟಗಳು ಮಂಜಿನಿಂದ ಆಕಾಶಕ್ಕೆ ಮುತ್ತಿಡುವಂತೆ ನೋಡುಗರ ಕಣ್ಣಿಗೆ ನಯನ ಮನೋಹರವಾಗಿದೆ. ನಗರದ ರಸ್ತೆಗಳು, ಮನೆಗಳ ಮೇಲೂ ಮಂಜು ಆವರಿಸಿಕೊಂಡು ಚುಮು ಚುಮು ಚಳಿಗೆ ಜನರು ತರಗುಟ್ಟುತ್ತಿರುವುದು ಸಾಮಾನ್ಯವಾಗಿದೆ.
ಕಳೆದ ಕೆಲವು ದಿನಗಳಿಂದ ಪ್ರತಿ ದಿನವೂ ದಟ್ಟ ಮಂಜು ಆವರಿಸುತ್ತಿದೆ. ದಟ್ಟ ಮಂಜಿನಿಂದಾಗಿ ಅಕ್ಕಪಕ್ಕ ಮತ್ತು ಎದುರಿಗೆ ಇರುವವರು ಕಾಣಿಸುತ್ತಿಲ್ಲ. ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 9 ಗಂಟೆವರೆಗೂ ಮಂಜು ಮುಸುಕಿದ ವಾತಾವರಣ ಇರುತ್ತದೆ. ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಚಳಿ ಮತ್ತು ಮಂಜು ಆವರಿಸುವುದು ಸಾಮಾನ್ಯವೇ. ಆದರೆ, ಈ ವರ್ಷ ಚಳಿ ಮತ್ತು ಮಂಜು ಹೆಚ್ಚಾಗಿದೆ. ಬೆಳಗಿನ ಜಾವದಲ್ಲಿ ನೃತ್ಯದಂತೆ ಕಾಣುವ ಮಂಜಿನ ವೈಭವವನ್ನು ನೋಡುವುದು ಒಂದು ವಿಶಿಷ್ಟ ಹಾಗೂ ಅಹ್ಲಾದಕರ.
ದಟ್ಟ ಮಂಜಿನಿಂದಾಗಿ ವಾತಾವರಣದಲ್ಲಿ ಬದಲಾವಣೆಯಾಗಿದೆ. ಹೆಚ್ಚಾಗಿ ಚಳಿ ಮತ್ತು ಶೀತ ಗಾಳಿ ಬೀಸುತ್ತಿದೆ. ದಟ್ಟ ಮಂಜುನಿಂದಾಗಿ ಗೋಚರತೆ ಕ್ಷೀಣಿಸಿದೆ. ಹೀಗಾಗಿ ನಸುಕಿನ ಮತ್ತು ಬೆಳಗಿನ ಜಾವದಲ್ಲಿ ವಾಹನ ಸಂಚಾರ ಕಡಿಮೆಯಾಗಿದೆ. ಜೊತೆಗೆ ಎದುರಿಗೆ ಇರುವ ವಸ್ತು ಮತ್ತು ವ್ಯಕ್ತಿ ಕಾಣುತ್ತಿಲ್ಲವಾದ್ದರಿಂದ ಚಿಂತಾಮಣಿ–ಬೆಂಗಳೂರು ರಸ್ತೆಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚಿವೆ. ಗೋಚರತೆ ಕಡಿಮೆ ಇರುವ ಕಾರಣ ವಾಹನಗಳು ದೀಪಗಳನ್ನು ಹಾಕಿಕೊಂಡು ಚಲಿಸುತ್ತಿದ್ದವು. ತಾವು ಚಿಂತಾಮಣಿಯಲ್ಲಿದ್ದೇವೋ ಅಥವಾ ನಂದಿಬೆಟ್ಟ, ಊಟಿಯಲ್ಲಿದ್ದೇವೋ ಎಂಬಂತಾಗಿದೆ ಎಂದು ಕೆಲವು ನಾಯಕರು ಹೇಳಿದರು.
ನಾಗರಿಕರು ಅಬ್ಬಬ್ಬಾ ಚಳಿ ಎಂದು ಕೆಲವರು ಮನೆಯೊಳಗೆ ಹೊದ್ದು ಮಲಗಿದರೆ ಮತ್ತೆ ಕೆಲವರು ಮನೆಗಳ ಮೇಲೆ ಹತ್ತಿ ಮಂಜಿನ ರಮಣೀಯ ದೃಶ್ಯದ ಸೌಂದರ್ಯವನ್ನು ಸವಿಯುತ್ತಾರೆ. ಯಾವ ಕಡೆ ನೋಡಿದರೂ ಮಂಜು, ಮಂಜು, ಮಂಜು. ರಸ್ತೆ, ಮನೆ ಏನೂ ಕಾಣುವುದಿಲ್ಲ. ತುಂಬಾ ತಂಪಾದ ವಾತಾವರಣವಿರುತ್ತದೆ. ಬಯಲುಸೀಮೆಯ ಜನರಿಗೆ ಅದನ್ನು ಅನುಭವಿಸುವುದೇ ಮಜಾ ಎನ್ನುತ್ತಾರೆ ಛಾಯಾಚಿತ್ರ ಪತ್ರಕರ್ತ ರಮೇಶ್.
ಕೆಲವರು ಮಂಜಿನ ಚಿತ್ರಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸ್ನೇಹಿತರು ಮತ್ತು ಸಂಬಂಧಿಕರಿಗೆ ಕಳುಹಿಸಿ, ಸಂತಸಪಡುತ್ತಾರೆ.
ಮಳೆಯ ಕೊರತೆ ಭೂಮಿಯಲ್ಲಿ ತೇವಾಂಶದ ಕೊರತೆಯಿಂದ ಮಂಜು ಹಾಗೂ ಇಬ್ಬನಿ ಅನೇಕ ವರ್ಷಗಳಿಂದ ಕಡಿಮೆಯಾಗಿತ್ತು. ಈ ವರ್ಷ ಚಳಿ, ಇಬ್ಬನಿ ಹಾಗೂ ಮಂಜು ಅಧಿಕವಾಗಿದೆ. ಈ ವರ್ಷ ಅಧಿಕ ಮಂಜು ಕಾಣಿಸಿಕೊಂಡರೆ ಮುಂದಿನ ವರ್ಷ ಉತ್ತಮ ಮಳೆಯಾಗುತ್ತದೆ ಎಂಬುದು ಪೂರ್ವಿಕರ ನಂಬಿಕೆಯಾಗಿತ್ತು ಎನ್ನುತ್ತಾರೆ ಹಿರಿಯಜ್ಜ ಮುನಿಯಪ್ಪ.
ಚಳಿಗೆ ಬೆಚ್ಚಿದ ವಿಹಾರಿಗಳು
ವಿಶೇಷವಾಗಿ ಬೆಳಗಿನ ಜಾವದ ವಾಯುವಿಹಾರಿಗಳು ಪತ್ರಿಕಾ ವಿತರಕರು ಹಾಲು ತರಕಾರಿ ವ್ಯಾಪಾರಿಗಳು ಚಳಿ ಮಳೆ ಗಾಳಿ ಎನ್ನದೆ ಬೆಳಗ್ಗೆ ಹೋಗಲೇಬೇಕು. ಹೀಗಾಗಿ ಇವರು ಬೆಳಗಿನ ನಯನ ಮನೋಹರವಾದ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಆದರೆ ಬೆಳಗ್ಗೆ ಚುಮುಚುಮು ಚಳಿಯಲ್ಲಿ ಬೆಚ್ಚನೆಯ ಹಾಸಿಗೆಯಿಂದ ಎದ್ದೇಳುವುದೇ ಕಷ್ಟ ಎಂದು ಪತ್ರಿಕೆ ಹಂಚುವವರು ಹೇಳುತ್ತಾರೆ. ಅಂಬಾಜಿದುರ್ಗದ ಬೆಟ್ಟದ ಮಡಿಲಿನಲ್ಲಿರುವ ಕೈಲಾಸಗಿರಿಯಲ್ಲಿ ಕಾಡುಮಲ್ಲೇಶ್ವರ ಬೆಟ್ಟಕ್ಕೆ ಹೋಗುವ ಭಕ್ತರು ಇಬ್ಬನಿ ಮಂಜಿನ ಸವಿ ಸವಿಯುತ್ತಾ ಉಲ್ಲಾಸದಲ್ಲಿ ತೇಲುತ್ತಾರೆ. ಬೆಳ್ಳಂಬೆಳಗ್ಗೆ ಮನೆಯಿಂದ ಹೊರಗೆ ಬಂದವರಿಗೆ ಹಸಿರಿನ ಗಿಡ ಮರಗಳಿಗೆ ಹಾಲಿನಂತೆ ಹೊದ್ದ ಮಂಜಿನ ಹೊದಿಕೆಯ ದೃಶ್ಯವು ವಿಶಿಷ್ಟ ಅನುಭವ ಸಂತಸ ನೀಡುತ್ತದೆ. ದಟ್ಟ ಮಂಜಿನಿಂದಾಗಿ ಭೂಮಿ ಆಕಾಶ ಒಂದಾದಂತೆ ಭಾಸವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.