ADVERTISEMENT

ಚಿಂತಾಮಣಿ: ಉತ್ತಮ ಮಳೆ; ಬಂಪರ್ ಬೆಳೆ ನಿರೀಕ್ಷೆ

17,477 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ l ಉತ್ತಮ ಫಸಲು ನಿರೀಕ್ಷೆ

ಎಂ.ರಾಮಕೃಷ್ಣಪ್ಪ
Published 25 ಅಕ್ಟೋಬರ್ 2025, 8:44 IST
Last Updated 25 ಅಕ್ಟೋಬರ್ 2025, 8:44 IST
ಚಿಂತಾಮಣಿ ತಾಲ್ಲೂಕಿನ ಅಕ್ಕಿಮಂಗಲ ಗ್ರಾಮದಲ್ಲಿ ನಳ ನಳಿಸುತ್ತಿರುವ ರಾಗಿ ಪೈರು 
ಚಿಂತಾಮಣಿ ತಾಲ್ಲೂಕಿನ ಅಕ್ಕಿಮಂಗಲ ಗ್ರಾಮದಲ್ಲಿ ನಳ ನಳಿಸುತ್ತಿರುವ ರಾಗಿ ಪೈರು    

ಚಿಂತಾಮಣಿ: ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಕಾರಣ ತಾಲ್ಲೂಕಿನ ಜನರು ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. 

ಬಿತ್ತನೆ ಹಂಗಾಮಿನಲ್ಲಿ ಮಳೆ ತಡವಾಗಿದ್ದರಿಂದಾಗಿ ನೆಲಗಡಲೆ ಮತ್ತು ತೊಗರಿ ಬಿತ್ತನೆಯು ಗುರಿ ಸಾಧಿಸಲಾಗಲಿಲ್ಲ. ರಾಗಿ ಸಕಾಲದಲ್ಲಿ ಬಿತ್ತನೆಯಾಗಿದ್ದು, ಮಳೆಯಾಧಾರಿತ ಎಲ್ಲ ಬೆಳೆಗಳು ನಳನಳಿಸುತ್ತಿವೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರ ಮೊಗದಲ್ಲಿ ಮಂದಹಾಸ ಮನೆ ಮಾಡಿದೆ. 

ಜನವರಿಯಿಂದ ಅಕ್ಟೋಬರ್ 18ರವರೆಗೆ ತಾಲ್ಲೂಕಿನಲ್ಲಿ 625.75 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಈ ಬಾರಿ 709.9 ಮಿ.ಮೀ ಮಳೆಯಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಉತ್ತಮ ಮಳೆಯಾಗಿದ್ದು, ಅಕ್ಟೋಬರ್ 1ರಿಂದ 18ರವರೆಗೆ 126.8 ಮಿ.ಮೀ ಮಳೆಯಾಗಿದ್ದು, ಇದು ಈ ಅವಧಿಯಲ್ಲಿ ಆಗಬೇಕಿದ್ದ  100.07 ಮಿ. ಮೀ ಹೆಚ್ಚು ಮಳೆಯಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆಯ ಕೊರತೆಯಿಂದ ಬೆಳೆಗಳು ಒಣಗಿ, ರೈತರು ಕಂಗಾಲಾಗಿದ್ದರು. ಅಕ್ಟೋಬರ್‌ನಲ್ಲಿ ಹದವಾದ ಮಳೆಯಾಗಿದ್ದರಿಂದಾಗಿ ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. 

ADVERTISEMENT

ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 27,626 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಹೊಂದಲಾಗಿತ್ತು. 25,487 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಈವರೆಗೆ ಶೇ 92.25ರಷ್ಟು ಸಾಧನೆಯಾಗಿದೆ.

ಮುಂಗಾರು ಬಿತ್ತನೆ ಅವಧಿಯಲ್ಲಿ ಮಳೆ ಕೊರತೆಯಾಗಿ ನೆಲಗಡಲೆ ಮತ್ತು ತೊಗರಿ ಸರಿಯಾಗಿ ಬಿತ್ತನೆ ಆಗಲಿಲ್ಲ. 860 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದ ತೊಗರಿ ಕೇವಲ 309 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿತ್ತು. ಆದರೆ, ರಾಗಿಯು 17,477 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, 15,090 ಹೆಕ್ಟೇರ್ ಪ್ರದೇಶದ ಗುರಿಯನ್ನು ಮೀರಿದೆ. 

‘ಉತ್ಪಾದನೆ ಇಳುವರಿಯನ್ನು ಶೇ 10ರಷ್ಟು ಹೆಚ್ಚಿಸಲು ಹಲವಾರು ಕ್ರಮ ಕೈಗೊಳ್ಳಲಾಗಿದೆ. ಸಕಾಲದಲ್ಲಿ ಬಿತ್ತನೆ, ಸಾಲು ಬಿತ್ತನೆ, ವೈಜ್ಞಾನಿಕ ತಂತ್ರಜ್ಞಾನಗಳ ಅಳವಡಿಕೆ, ಸಮಗ್ರ ಪೀಡೆ ನಿರ್ವಹಣೆ, ಪೋಷಕಾಶಗಳ ಬಗ್ಗೆ ಅರಿವು ಮೂಡಿಸಲಾಗಿದೆ. ಅಲ್ಪಾವಧಿ ತಳಿಗಳ ಬದಲಾವಣೆ, ಕೂರಿಗೆ ನಿತ್ತನೆ, ನಾಟಿ ಪದ್ಧತಿಗಳ ಪ್ರಾತ್ಯಕ್ಷಿಕೆ ಮೂಲಕ ಪ್ರಚಾರ ಮಾಡಲಾಗಿದೆ. ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದು ಕೃಷಿ ಅಧಿಕಾರಿ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿತ್ತನೆ ಆಗಿರುವ ಎಲ್ಲ ಬೆಳೆಗಳು ಹುಲುಸಾಗಿ ಬೆಳೆದಿವೆ. ಮುಂಗಾನಹಳ್ಳಿ, ಮುರುಗಮಲ್ಲ ಹೋಬಳಿಗಳಲ್ಲಿ ಹೆಚ್ಚಾಗಿ ಬಿತ್ತನೆಯಾಗಿರುವ ನೆಲಗಡಲೆ ಕಾಯಿ ಕಟ್ಟುತ್ತಿದೆ. ಕೆಲವು ಕಡೆ ಕಾಯಿ ಕೀಳಲು ಬಂದಿದೆ. ತೊಗರಿ ಸಸಿಗಳು ಹೂ ಬಿಡುತ್ತಿದೆ. ಕೈವಾರ, ಕಸಬಾ, ಅಂಬಾಜಿದುರ್ಗ ಹೋಬಳಿಗಳಲ್ಲಿ ಹೆಚ್ಚಾಗಿ ಬೆಳೆಯಲಾಗಿರುವ ರಾಗಿ, ಅವರೆ ಬೆಳೆ ಸಮೃದ್ಧವಾಗಿದೆ. ರಾಗಿ ತೆನೆ ಕಾಳು ಹಿಡಿಯುತ್ತಿದೆ. ತಡವಾಗಿ ಬಿತ್ತನೆ ಮಾಡಿರುವುದು ಈಗ ತೆನೆ ಬರುತ್ತಿದೆ.

ತಾಲ್ಲೂಕಿನ ಎಲ್ಲ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಬೆಳೆಗಳು ಸಮೃದ್ಧವಾಗಿ ಬೆಳೆಯುತ್ತಿವೆ. ರಾಗಿ ಬೆಳೆಯಿಂದ ಬಂಪರ್ ಬೆಳೆ ನಿರೀಕ್ಷಿಸಲಾಗುತ್ತಿದೆ. ಕಳೆದ ಒಂದು ವಾರದಿಂದ ಸತತವಾಗಿ ಮಳೆ ಆಗುತ್ತಿರುವುದರಿಂದ ಬೆಳೆದು ನಿಂತಿರುವ ರಾಗಿ ಬೆಳೆ ನೆಲಕ್ಕೆ ಬಾಗುತ್ತಿದೆ. ತೆನೆ ಕೊಯ್ಲಿಗೆ ಮಳೆ ಅಡ್ಡಿಯಾದರೆ ತೆನೆ ನೆನೆದು ಮೊಳಕೆ ಬರುವುದು, ನೆಲಕ್ಕೆ ಉದುರುತ್ತಿದೆ. ಇದರಿಂದ ನಷ್ಟವಾಗುವ ಭೀತಿ ಇದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ತಾಲ್ಲೂಕಿನಲ್ಲಿ ತಡವಾಗಿಯಾದರೂ ಉತ್ತಮ ಮಳೆಯಾಗಿದೆ. ಇದರಿಂದಾಗಿ ಆಶಾದಾಯಕ ಪರಿಸ್ಥಿತಿ ಮೂಡಿದೆ. ಈಗಿರುವ ತೇವಾಂಶ ಇನ್ನೂ 15 ದಿನ ಇರುತ್ತದೆ. ರಾಗಿಯಿಂದ ಉತ್ತಮ ಫಸಲು ಮತ್ತು ಇಳುವಳಿ ನಿರೀಕ್ಷಿಸಲಾಗಿದೆ
ಮುನಿರಾಮಪ್ಪ ರೈತ
ತೊಗರಿ ನೆಲಗಡಲೆ ಕಡಿಮೆ ಬಿತ್ತನೆ ಆಗಿದ್ದರೂ ಬೆಳೆ ಹುಲುಸಾಗಿ ಬೆಳೆದಿದೆ. ರಾಗಿ ಬಹುತೇಕ ಬೆಳೆ ಉತ್ತಮ ಬೆಳೆ ಹಾಗೂ ಹೆಚ್ಚಿನ ಇಳುವರಿಯನ್ನು ನಿರೀಕ್ಷಿಸಲಾಗಿದೆ
ಅಮರನಾರಾಯಣರೆಡ್ಡಿ ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.