ಚಿಂತಾಮಣಿ: ತಾಲ್ಲೂಕಿನ ಶಿಕ್ಷಕರ ಚಟುವಟಿಕೆಗಳಿಗಾಗಿ ನಗರದ ಹೃದಯಭಾಗದಲ್ಲಿ ಲಕ್ಷಾಂತರ ರೂ ವೆಚ್ಚದಲ್ಲಿ ನಿರ್ಮಿಸಿರುವ ಗುರುಭವನ ಶಿಕ್ಷಕರ ಚಟುವಟಿಕೆಗಳಿಗೆ ಬಳಕೆಯಾಗದೆ ದೂಳು ತಿನ್ನುತ್ತಿದ್ದು, ಸದಾ ಬೀಗ ಹಾಕಿದ ಸ್ಥಿತಿಯಲ್ಲಿದೆ.
ಭವನದ ಸುತ್ತಮುತ್ತ ಸ್ವಚ್ಛತೆ ಇಲ್ಲದೆ ಗಿಡಗಳು ಬೆಳೆದಿವೆ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಆವರಣದಲ್ಲಿರುವ ಗುರುಭವನವದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ, ಶಿಕ್ಷಕರ ಸಂಘಗಳ ಪದಾಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಶಿಕ್ಷಕರು ದೂರುತ್ತಾರೆ.
ಜಿಲ್ಲೆಯಲ್ಲಿ ಪ್ರಥಮ ಗುರುಭವನ: ನಗರದ ಹೃದಯಭಾಗವಾದ ಬೆಂಗಳೂರು ವೃತ್ತದಲ್ಲಿ ಗುರುಭವನವಿದೆ. ಚಿಕ್ಕಬಳ್ಳಾಪುರದ ಜಿಲ್ಲಾ ವಿಭಜನೆಗೂ ಮುಂಚೆ ಅವಿಭಜಿತ ಕೋಲಾರದ ಜಿಲ್ಲಾ ಕೇಂದ್ರ ಹಾಗೂ ಜಿಲ್ಲೆಯ ಯಾವುದೇ ತಾಲ್ಲೂಕು ಕೇಂದ್ರದಲ್ಲಿ ಗುರುಭವನಗಳಿಲ್ಲ. ಚಿಂತಾಮಣಿಯಲ್ಲಿ ಸುಮಾರು 20 ವರ್ಷಗಳ ಹಿಂದೆ ಆಗ ಶಾಸಕರಾಗಿದ್ದ ಡಾ.ಎಂ.ಸಿ ಸುಧಾಕರ್ ಕಾಳಜಿಯಿಂದ ಗುರುಭವನ ನಿರ್ಮಾಣವಾಗಿತ್ತು. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಬಿ.ಹನುಮಂತಪ್ಪ, ನಾರಾಯಣರೆಡ್ಡಿ, ಅಂದಿನ ಶಾಲಾ ತನಿಖಾಧಿಕಾರಿ ಸುಬ್ಬರಾಯಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಯ್ಯಾರೆಡ್ಡಿ ಶ್ರಮದಿಂದ ಜಿಲ್ಲೆಯಲ್ಲಿ ಪ್ರಥಮವಾಗಿ ಗುರುಭವನ ನಿರ್ಮಾಣವಾಗಿತ್ತು.
ಕಡಿಮೆ ವೇತನ ಪಡೆಯುವ ಕಾಲದಲ್ಲಿ ಶಿಕ್ಷಕರು ₹2, ₹3, ₹5 ಸಾವಿರದಂತೆ, ಕೆಲವರು ಒಂದೊಂದು ತಿಂಗಳ ವೇತನವನ್ನು ವಂತಿಗೆಯಾಗಿ ನೀಡಿದ್ದರು. ಶಿಕ್ಷಕರ ಕ್ಷೇಮಾಭಿವೃದ್ಧಿ ನಿಧಿಯಿಂದ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ವಂತಿಗೆ ಮತ್ತಿತರ ಹಣವನ್ನು ಕ್ರೋಡೀಕರಿಸಿ ಗುರುಭವನ ನಿರ್ಮಾಣವಾಗಿತ್ತು. ಗುರುಭವನವನ್ನು ನಿರ್ಮಿಸಲೇಬೇಕು ಎಂಬ ಅಂದಿನ ಶಿಕ್ಷಕರ ಛಲ ಮತ್ತು ಸಹಾಯದಿಂದ ಸಾಕಷ್ಟು ಅಡೆತಡೆಗಳ ನಡುವೆಯೂ ಗುರುಭವನ ನಿರ್ಮಿಸಲಾಗಿತ್ತು.
ನ್ಯಾಯಾಲಯದ ಮೆಟ್ಟಿಲು: ಬೆಂಗಳೂರು ವೃತ್ತದಲ್ಲಿ ರಸ್ತೆಗೆ ಹೊಂದಿಕೊಂಡಿರುವುದರಿಂದ ಪೂರ್ವ ಮತ್ತು ಉತ್ತರ ಭಾಗದ ಕಡೆ ಎಷ್ಟೋ ವರ್ಷಗಳಿಂದ ಒತ್ತುವರಿ ಮಾಡಿಕೊಂಡು ತೆರೆದಿದ್ದ ಅಂಗಡಿಗಳ ಮಾಲೀಕರು ತಗಾದೆ ತೆಗೆದರು. ಹೇಗೆ ತೆರವುಗೊಳಿಸುತ್ತೀರಿ? ಎಂದು ಶಿಕ್ಷಕ ಮುಖಂಡರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ಧಮಕಿ ಹಾಕಿದ್ದರು. ನಗರದ ನ್ಯಾಯಾಲಯ, ಕೋಲಾರದ ಜಿಲ್ಲಾ ನ್ಯಾಯಾಲಯ ಹಾಗೂ ಅಂತಿಮವಾಗಿ ಹೈಕೋರ್ಟ್ ಗೂ ಅಫೀಲು ಹಾಕಿದ್ದರು. ಎಲ್ಲ ನ್ಯಾಯಾಲಯಗಳಲ್ಲೂ ಶಿಕ್ಷಕರ ಪರವಾಗಿಯೇ ತೀರ್ಪು ಬಂದಿತ್ತು. ಆದರೂ ತೆರವುಗೊಳಿಸಲು ಬಿಟ್ಟಿರಲಿಲ್ಲ. ಶಾಸಕ ಡಾ.ಎಂ.ಸಿ.ಸುಧಾಕರ್ ನಿರ್ಧಾರದಿಂದ ತೆರವುಗೊಳಿಸಲಾಗಿತ್ತು ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣರೆಡ್ಡಿ ಸ್ಮರಿಸುತ್ತಾರೆ.
ಶಿಕ್ಷಕರ ದಿನಾಚರಣೆ, ಪ್ರತಿಭಾ ಕಾರಂಜಿ ಮತ್ತಿತರ ಶಿಕ್ಷಕರ ಚಟುವಟಿಕೆಗಳು, ನಿರ್ವಹಣೆ ವೆಚ್ಚವನ್ನು ಮಾತ್ರ ಪಡೆದುಕೊಂಡು ಶಿಕ್ಷಕರ ಮಕ್ಕಳ ಮದುವೆ, ನಾಮಕರಣ, ನಿಶ್ಚಿತಾರ್ಥ ಕಾರ್ಯಕ್ರಮಗಳು ನಡೆಸುವುದು. ಖಾಲಿ ಇದ್ದ ಸಂದರ್ಭದಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಬಾಡಿಗೆಗೆ ನೀಡಿ ಸ್ವಂತ ಸಂಪನ್ಮೂಲ ಸಂಗ್ರಹಿಸುವುದು ಗುರುಭವನದ ಉದ್ದೇಶವಾಗಿತ್ತು.
ಆರಂಭದಲ್ಲಿ 4-5 ವರ್ಷ ಶಿಕ್ಷಕರ ಚಟುವಟಿಕೆಗಳು ನಡೆದಿದ್ದು ಬಿಟ್ಟರೆ ಕಳೆದ 10 ವರ್ಷಗಳಿಂದ ಚಟುವಟಿಕೆ ನಡೆಯುತ್ತಿಲ್ಲ. ಸದಾಕಾಲ ಬಾಗಿಲು ಹಾಕಿಯೇ ಇರುತ್ತದೆ. ಲಕ್ಷಾಂತರ ವೆಚ್ಚ ಮಾಡಿದ್ದರೂ ಪ್ರಯೋಜನಕ್ಕೆ ಬಂದಿಲ್ಲ. ಶಿಕ್ಷಕ ಬಗ್ಗೆ ವೇದಿಕೆಗಳಲ್ಲಿ ಮಾತನಾಡುವ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರ ಸಂಘಗಳ ಪದಾಧಿಕಾರಿಗಳು ಮಾತ್ರ ಅತ್ತ ಕಡೆ ಗಮನಹರಿಸುತ್ತಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ಆವರಣದಲ್ಲೇ ಗುರುಭವನ ಇರುವುದರಿಂದ ಎಲ್ಲ ಅಧಿಕಾರಿಗಳು, ಶಿಕ್ಷಕರ ಸಂಘಟನೆಗಳ ಮುಖಂಡರು ಅಲ್ಲೆ ಓಡಾಡುತ್ತಾರೆ, ಸಭೆ ನಡೆಸುತ್ತಾರೆ. ಸದಾ ಬಾಗಿಲು ಹಾಕಿರುವ ಗುರುಭವನದ ಬಗ್ಗೆ ಮಾತ್ರ ಚಕಾರ ಎತ್ತುತ್ತಿಲ್ಲ ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಆಡಳಿತ ಮಂಡಳಿ: ಗುರುಭವನದ ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ಆಡಳಿತ ಮಂಡಳಿ ಇದೆ. ಕ್ಷೇತ್ರ ಶಿಕ್ಷಣಾಧಿಕಾರಿ ಅಧ್ಯಕ್ಷರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಇಲ್ಲಿಯೂ ಕಾರ್ಯದರ್ಶಿ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಒಬ್ಬ ಇಸಿಒ, ಖಜಾಂಚಿ, ಮಹಿಳಾ ಪ್ರತಿನಿಧಿ ಹಾಗೂ ಕೆಲವು ಶಿಕ್ಷಕರ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ.
ಗುರುಭವನದಲ್ಲಿ ದೊಡ್ಡ ಸಭಾಂಗಣ, ಎರಡು ಕೊಠಡಿ, ಮಹಡಿಯಲ್ಲಿ 6 ಕೊಠಡಿಗಳಿವೆ. ಕಾರ್ಯಕ್ರಮಗಳು ನಡೆಸಲು ಶಬ್ದದ ಎಕೋ ಬರುತ್ತದೆ ಎಂದು ಬಾಗಿಲು ಹಾಕಿರುವುದಕ್ಕೆ ಸಬೂಬು ನೀಡುತ್ತಾರೆ. ತಜ್ಞರನ್ನು ಕರೆಸಿ ಅದನ್ನು ಸರಿಪಡಿಸುವ ಗೋಜಿಗೆ ಯಾರು ಹೋಗಿಲ್ಲ. ಇಲಾಖೆಯಿಂದ ಬರುವ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳ ಗೋಡೌನ್ ಆಗಿದೆ. ಶಿಕ್ಷಕರ ದಿನಾಚರಣೆ ಮತ್ತಿತರ ಕಾರ್ಯಕ್ರಮಗಳಿಗೆ ಖಾಸಗಿ ಕಲ್ಯಾಣ ಮಂಟಪಗಳಿಗೆ ಕೇಳಿಕೊಂಡು ಹೋಗುವುದು ಪದ್ಧತಿಯಾಗಿದೆ ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಿಗೆ ಹಲವಾರು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.