ADVERTISEMENT

‌ಚಿಂತಾಮಣಿ ಆಸ್ಪತ್ರೆ; 150 ಹಾಸಿಗೆ ಹೆಚ್ಚಳಕ್ಕೆ ಸಾಮರ್ಥ್ಯವಿಲ್ಲ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಧಿಯಿಂದ ₹9.98 ಕೋಟಿ; 2ನೇ ಮಹಡಿ ಕಾಮಗಾರಿಗೆ ಅನುಮೋದನೆ

ಡಿ.ಎಂ.ಕುರ್ಕೆ ಪ್ರಶಾಂತ
Published 10 ಸೆಪ್ಟೆಂಬರ್ 2025, 4:28 IST
Last Updated 10 ಸೆಪ್ಟೆಂಬರ್ 2025, 4:28 IST
ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆ
ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆ   

ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸ್ವಕ್ಷೇತ್ರ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಯಾವ ಯಾವ ಮೂಲಗಳಿಂದ ಸಂಪನ್ಮೂಲಗಳು ದೊರೆಯುತ್ತವೆಯೊ ಆ ಸಂಪನ್ಮೂಲಗಳನ್ನು ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. 

ಚಿಂತಾಮಣಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆ ಸಾಮರ್ಥ್ಯದಿಂದ 150 ಹಾಸಿಗೆಗಳ ಸಾಮರ್ಥ್ಯಕ್ಕೆ ಹೆಚ್ಚಿಸಬೇಕು ಎನ್ನುವ ಅವರ ಆಸೆಗೆ ಈಗ ನಿಯಮಗಳು ಮತ್ತು ವಿಸ್ತೀರ್ಣದ ಕಾರಣ ತಡೆಯಾಗಿದೆ. 

ಚಿಂತಾಮಣಿ ಆಸ್ಪತ್ರೆಯು ಪ್ರಸ್ತುತ 100 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಈಗ 150 ಹಾಸಿಗೆಗಳಿಗೆ ಹೆಚ್ಚಿಸಲು ಆಸ್ಪತ್ರೆಯು ಐಪಿಎಚ್‌ಎಸ್ ಮಾನದಂಡಗಳ ಪ್ರಕಾರ ಅಗತ್ಯವಿರುವ 6,500 ಚದರ ಮೀಟರ್‌ಗಳ ವಿಸ್ತೀರ್ಣ ಹೊಂದಿಲ್ಲ. ಬದಲಿಗೆ 4,000 ಚದರ ಮೀಟರ್‌ಗಳ ವಿಸ್ತೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿದೆ.

ADVERTISEMENT

ಈ ಕಾರಣದಿಂದ ಆಸ್ಪತ್ರೆಯನ್ನು 150 ಹಾಸಿಗೆ ಸಾಮರ್ಥ್ಯ ಹೆಚ್ಚಳ ಯೋಜನೆಯು ನನೆಗುದಿಗೆ ಬಿದ್ದಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತನ್ನ ಆದೇಶದಲ್ಲಿ ತಿಳಿಸಿದೆ.

ಜಾಗದ ಕೊರತೆ ಕಾರಣದಿಂದ 150 ಹಾಸಿಗೆಗಳ ಸಾಮರ್ಥ್ಯಕ್ಕೆ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಹಾಸಿಗೆ ಸಾಮರ್ಥ್ಯ ಹೆಚ್ಚಿಸಿದರೆ ಹೆಚ್ಚುವರಿ ಮಾನವ ಸಂಪನ್ಮೂಲಕ್ಕೆ ಆರ್ಥಿಕ ಇಲಾಖೆಯ ಸಹಮತಿ ಪಡೆಯಬೇಕಾಗಿದೆ. 

ಸರ್ಕಾರದ 2014ರ ಮಾನದಂಡಗಳ ಪ್ರಕಾರ 100 ಹಾಸಿಗೆಗಳ ಚಿಂತಾಮಣಿ ಆಸ್ಪತ್ರೆಯನ್ನು 150 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಹೆಚ್ಚುವರಿಯಾಗಿ 11 ಹುದ್ದೆಗಳನ್ನು ಸೃಜಿಸಬೇಕಾಗುತ್ತದೆ. ವಾರ್ಷಿಕ ₹ 1.02 ಕೋಟಿ ಆವರ್ತಕ ವೆಚ್ಚ ಹಾಗೂ ಉಪಕರಣಗಳಿಗಾಗಿ ₹30.29 ಲಕ್ಷ ಅನಾವರ್ತಕ ವೆಚ್ಚ ಒಳಗೊಂಡಂತೆ ಒಟ್ಟು ₹1.32 ಕೋಟಿ ಅವಶ್ಯವಿದೆ ಎಂದು ವೈದ್ಯಕೀಯ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಎರಡನೇ ಮಹಡಿ ಕಾಮಗಾರಿ: 150 ಹಾಸಿಗೆ ಸಾಮರ್ಥ್ಯ ಹೆಚ್ಚಳ ಸಾಧ್ಯವಾಗುವುದಿಲ್ಲ ಎನ್ನುವುದು ಒಂದೆಡೆಯಾದರೆ ಮತ್ತೊಂದೆಡೆ ಆಸ್ಪತ್ರೆಯ ಎರಡನೇ ಮಹಡಿ ಕಾಮಗಾರಿಗೆ ಈಗ ₹9.98 ಕೋಟಿ ಅನುಮೋದನೆಯಾಗಿದೆ. ಈ ಮೂಲಕ ಆಸ್ಪತ್ರೆಯು ಮತ್ತಷ್ಟು ಸೌಲಭ್ಯಗಳನ್ನು ಹೊಂದಲು ಅವಕಾಶವಾಗುತ್ತದೆ.

ಚಿಂತಾಮಣಿ ತಾಲ್ಲೂಕು ಆಸ್ಪತ್ರೆಯ ಕಟ್ಟಡದಲ್ಲಿ ಎರಡನೇ ಮಹಡಿಯ ನಿರ್ಮಾಣ ಕಾಮಗಾರಿಗೆ ಸರ್ಕಾರವು ಅನುಮೋದನೆ ನೀಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ₹9.98 ಕೋಟಿ ನಿಧಿಯನ್ನು ಬಳಸಿಕೊಂಡು ಕಾಮಗಾರಿ ಕೈಗೊಳ್ಳಲು ಆದೇಶಿಸಿದೆ. ಆಸ್ಪತ್ರೆಯ ಅಭಿವೃದ್ಧಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ₹10 ಕೋಟಿ ಅನುದಾನ ನೀಡಲು ತನ್ನ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಿತ್ತು.

ಆಸ್ಪತ್ರೆಯಲ್ಲಿ ಅವಶ್ಯವಿರುವ ಅಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ಅಂದಾಜುಪಟ್ಟಿ ಸಿದ್ದಪಡಿಸಿ ಸಕ್ಷಮ ಪ್ರಾಧಿಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದು ಸಲ್ಲಿಸಲು ಜಿಲ್ಲಾಧಿಕಾರಿ ಅವರಿಗೆ ತಿಳಿಸಲಾಗಿತ್ತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್, ಚಿಂತಾಮಣಿಯ ಆಸ್ಪತ್ರೆಯಲ್ಲಿ ಅವಶ್ಯವಿರುವ ಕಾಮಗಾರಿಗಳ ಬಗ್ಗೆ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಜೊತೆ ಚರ್ಚಿಸಿದ್ದರು. ಆಸ್ಪತ್ರೆಯ ಕಟ್ಟಡದ ಸುಸ್ಥಿತಿಯ ಬಗ್ಗೆ ಖಾಸಗಿ ಸಂಸ್ಥೆಯಿಂದ ಮಾಹಿತಿ ಸಹ ಪಡೆಯಲಾಗಿತ್ತು. ಆ ಸಂಸ್ಥೆಯು ಈಗ ಇರುವ ಕಟ್ಟಡದ ಮೇಲೆ ಹೆಚ್ಚುವರಿಯಾಗಿ ಎರಡು ಮಹಡಿಗಳನ್ನು ನಿರ್ಮಿಸಬಹುದು ಎಂದು ವರದಿ ಸಹ ನೀಡಿದೆ. ಅಂದಾಜು ಪಟ್ಟಿಯ ವಿವರಗಳನ್ನೂ ಸಲ್ಲಿಸಿದೆ.

ಮೂಲಸೌಕರ್ಯ ಕೊರತೆ: ವರದಿಯಲ್ಲಿ ಚಿಂತಾಮಣಿ ಆಸ್ಪತ್ರೆಯ ಕೊರತೆಗಳು ಮತ್ತು ಭವಿಷ್ಯದಲ್ಲಿನ ಘಟಕಗಳ ಬಗ್ಗೆ, ಎರಡನೇ ಮಹಡಿ ನಿರ್ಮಾಣದಿಂದ ಈ ಕೊರತೆಗಳನ್ನು ಪರಿಹಸಬಹುದು ಎನ್ನುವ ಬಗ್ಗೆ ಉಲ್ಲೇಖಿಸಲಾಗಿದೆ. 

ಆಸ್ಪತ್ರೆಯ ಅಭಿವೃದ್ಧಿಗೆ ಅವಕಾಶ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಧಿಯನ್ನು ಬಳಸಿಕೊಂಡು ಎರಡನೇ ಮಹಡಿ ನಿರ್ಮಾಣಕ್ಕೆ ಸರ್ಕಾರ ಆದೇಶಿಸಿದೆ. ಈ ಬೆಳವಣಿಗೆಯು ಚಿಂತಾಮಣಿ ಆಸ್ಪತ್ರೆಯ ಅಭಿವೃದ್ಧಿಯ ವಿಚಾರದಲ್ಲಿ ಮಹತ್ವದ ಆದೇಶವಾಗಿದೆ. ಎರಡನೇ ಮಹಡಿ ನಿರ್ಮಾಣದಿಂದ ಇಲ್ಲಿ ಮೂರು ತುರ್ತು ಚಿಕಿತ್ಸಾ ಹಾಸಿಗೆಗಳ ತೀವ್ರ ನಿಗಾ ಘಟಕ 14 ಎಸ್‌ಎನ್‌ಸಿಯು ಮತ್ತು ಎನ್‌ಐಸಿಯು ಹಾಸಿಗೆಗಳ ಯೋಜನೆಗೆ ಅವಕಾಶವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.