ಚಿಂತಾಮಣಿ: ಒಳಮೀಸಲಾತಿ ಪರಿಶಿಷ್ಟ ಜಾತಿಗಳು ನೂರೊಂದು ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಕೊಡುತ್ತದೆ. ಅಹಿಂದ ವರ್ಗಗಳ ಹೆಸರಿನಲ್ಲಿ ಅಧಿಕಾರ ಹಿಡಿದ ಸಿದ್ದರಾಮಯ್ಯ ದಲಿತರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಮಾದಿಗ ಜಾಗೃತಿ ಸಮಿತಿ ಆರೋಪಿಸಿದೆ.
ಒಳಮೀಸಲಾತಿ ಶೀಘ್ರವಾಗಿ ಜಾರಿಗೊಳಿಸಲು ವಿಧಾನಸಭೆ ಅಧಿವೇಶನದಲ್ಲಿ ಬೆಂಬಲ ನೀಡಬೇಕು ಹಾಗೂ ಮುಖ್ಯಮಂತ್ರಿ ಮೇಲೆ ಒತ್ತಡ ತರುವಂತೆ ಒತ್ತಾಯಿಸಿ ಸಮಿತಿಯ ಪದಾಧಿಕಾರಿಗಳು, ಮುಖಂಡರು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ಗೆ ಭಾನುವಾರ ಮನವಿ ಸಲ್ಲಿಸಿದರು.
ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಒಳಮೀಸಲಾತಿಯನ್ನು ರಾಜ್ಯ ಸರ್ಕಾರವೇ ಜಾರಿಗೊಳಿಸಬಹುದು ಎಂದು ಸುಪ್ರಿಂಕೋರ್ಟ್ ತೀರ್ಪು ನೀಡಿ ಒಂದು ವರ್ಷ ಕಳೆದರೂ ಸರ್ಕಾರ ಕಾಲಹರಣ ಮಾಡಿಕೊಂಡಿರುವುದು ಸಮುದಾಯದ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.
ಸಮಿತಿ ಮುಖಂಡ ಅಮರ್ ಮಾತನಾಡಿ, 30 ವರ್ಷಗಳಿಂದ ನಿರಂತರ ಹೋರಾಟದ ಪ್ರತಿಫಲವಾಗಿ ಒಳಮೀಸಲಾತಿಯ ಅವಕಾಶ ಸಿಕ್ಕಿದೆ. ಸರ್ಕಾರ ಅದನ್ನು ಜಾರಿಗೆ ತರುವಲ್ಲಿ ಕಾಲಹರಣ ಮಾಡುತ್ತಿದೆ. ಸದಾಶಿವ ಆಯೋಗ, 2011ರಲ್ಲಿ ಜಾತಿಗಣತಿ, 2012ರಲ್ಲಿ ಸದಾಶಿವ ಆಯೋಗದ ವರದಿ, ನಾಗಮೋಹನ್‌ದಾಸ್ ವರದಿ ಹಾಗೂ ಬಿಜೆಪಿ ಸರ್ಕಾರದ ಮಾಧುಸ್ವಾಮಿ ವರದಿ ಸೇರಿದಂತೆ ಎಲ್ಲ ಆಯೋಗಗಳು ಒಳಮೀಸಲಾತಿಯ ಪರವಾಗಿ ವರದಿ ನೀಡಿವೆ ಎಂದರು.
ಪ್ರಗತಿಪರ ಚಿಂತಕ ಎನ್.ಕೃಷ್ಣಪ್ಪ ಮಾತನಾಡಿ, ಸುಪ್ರೀಂಕೋರ್ಟ್‌ನ ಸಂವಿಧಾನದ ಪೀಠವು ಒಳ ಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀರ್ಪು ಪ್ರಕಟಿಸಿತು. ರಾಜ್ಯ ಸರ್ಕಾರ ಆಮೆಗತಿಯಲ್ಲಿ ಸಾಗಿದೆ. ಆಯೋಗ ರಚಿಸಬೇಕೆನ್ನುವುದು ಮಾದಿಗ ಸಮಾಜದ ಯಾರೊಬ್ಬರ ಬೇಡಿಕೆಯೂ ಆಗಿರಲಿಲ್ಲ. ಸರ್ಕಾರದ ಈ ನಿಧಾನಗತಿಯ ನಿರ್ಲಕ್ಷ್ಯದ ಧೋರಣೆ ನೋಡಿದರೆ ಅವಕಾಶ ವಂಚಿತ ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ಕೊಡುವ ಮನಸ್ಸಿಲ್ಲವೆಂಬುದು ಸ್ಪಷ್ಟವಾಗುತ್ತದೆ ಎಂದು ದೂರಿದರು.
ಒಳಮೀಸಲಾತಿ ಜಾರಿ ಆಗುವವರೆಗೆ ಸರ್ಕಾರ ಯಾವುದೇ ಉದ್ಯೋಗ ನೇಮಕಾತಿ ಮಾಡುವುದಿಲ್ಲ ಎಂದು ಭರವಸೆ ಕೊಟ್ಟಿತ್ತು. ಆದರೆ ನೇಮಕಾತಿ ಘೋಷಣೆಗಳು ವಿವಿಧ ಇಲಾಖೆಯಿಂದ ಬರುತ್ತಲೆ ಇದೆ. ಇದು ಖಂಡನಾರ್ಹ ವಿಷಯವಾಗಿದೆ. ಹರಿಯಾಣದ ಬಿಜೆಪಿ ಸರ್ಕಾರ ಸುಪ್ರಿಂಕೋರ್ಟಿನ ತೀರ್ಪು ಬಂದ ಮೊದಲ ವಾರದಲ್ಲೇ ಒಳ ಮೀಸಲಾತಿ ಜಾರಿ ಮಾಡಿದೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಬದ್ಧತೆ ತೋರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.
ಮುಖಂಡ ಜಂಗಮಶೀಗೇಹಳ್ಳಿ ದೇವರಾಜ್, ರಾಜಣ್ಣ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪೂಜಪ್ಪ, ಗಂಗಲಪ್ಪ, ಶೇಷಾದ್ರಿ, ಕೃಷ್ಣಪ್ಪ, ಬೀಡಾ ಶ್ರೀನಿವಾಸ್, ಬಿವಿ ವೆಂಕಟಾಣಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.