ಪ್ರಜಾವಾಣಿ ವಾರ್ತೆ
ಚಿಂತಾಮಣಿ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಮಾಳಪ್ಪಲ್ಲಿಯ ನಿವಾಸಿ ನಿವೃತ್ತ ಮುಖ್ಯ ಶಿಕ್ಷಕ ಕೆ.ಎನ್.ರಮಣಾರೆಡ್ಡಿ ನಿವಾಸದಲ್ಲಿ ‘ಮನೆಗೊಂದು ಕವಿಗೋಷ್ಠಿ’ಯನ್ನು ಶನಿವಾರ ಆಯೋಜಿಸಲಾಯಿತು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಬೇಟರಾಯಪ್ಪ ಮಾತನಾಡಿ, ಮನೆಗೊಂದು ಕವಿಗೋಷ್ಠಿ ಕಾರ್ಯಕ್ರಮವು ಯುವ ಹಾಗೂ ಉದಯೋನ್ಮುಖ ಕವಿಗಳಿಗೆ ಉತ್ತಮ ವೇದಿಕೆಯಾಗಿದೆ. ತಾಲ್ಲೂಕಿನ ಹಲವಾರು ಯುವ ಕವಿಗಳು ಕವನ, ಚುಟುಕು, ಹನಿಗವನಗಳನ್ನು ವಾಚನ ಮಾಡಿದರು. ಇದು ಉತ್ತಮ ಬೆಳವಣಿಗೆಯಾಗಿದ್ದು, ಕವಿಗೋಷ್ಠಿ ಕಾರ್ಯಕ್ರಮಗಳು ಮನೆ ಮನೆಯಲ್ಲೂ ನಡೆಯುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮ ಆಯೋಜಕ ಕೆ.ಎನ್.ರಮಣಾರೆಡ್ಡಿ ಮಾತನಾಡಿ, 20–25 ವರ್ಷಗಳಿಂದ ಕನ್ನಡದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಶಾಲೆಗಳಲ್ಲಿ ನಿಯಮಿತವಾಗಿ ಕನ್ನಡದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಎಲ್ಲ ಕನ್ನಡಪರ ಸಂಘಟನೆಗಳು ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ವಿ.ಶ್ರೀನಿವಾಸನ್ ಮಾತನಾಡಿ, ಪರಿಷತ್ ವತಿಯಿಂದ ಪ್ರತಿ ತಿಂಗಳು ಮನೆಗೊಂದು ಕವಿಗೋಷ್ಠಿ, ಶಾಲಾ ಅಂಗಳದಲ್ಲಿ ಕವಿ-ಕಾವ್ಯ, ಹುಣ್ಣಿಮೆಯಂದು ಸಾಧಕರ ಸ್ಮರಣೆ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕನ್ನಡಾಭಿಮಾನಿಗಳಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಕಾರ್ಯಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಶಿಕ್ಷಕ ಸುಬ್ರಮಣಿ, ನಾಗರಾಣಿ, ಸರಸ್ವತಮ್ಮ ಕನ್ನಡ ಗೀತೆಗಳ ಗಾಯನ ಮಾಡಿ ರಂಜಿಸಿದರು. ಪ್ರಾಯೋಜಕರಾದ ರಮಣಿ ಮತ್ತು ರಮಣಾರೆಡ್ಡಿ ದಂಪತಿಯನ್ನು ಸನ್ಮಾನಿಸಲಾಯಿತು.
ಪರಿಷತ್ತಿನ ಕಾರ್ಯದರ್ಶಿ ಕುಂಟಿಗಡ್ಡೆ ಲಕ್ಷ್ಮಣ್, ಪದಾಧಿಕಾರಿಗಳಾದ ಕೆ.ಬಾಲಾಜಿ, ಈಶ್ವರಸಿಂಗ್, ಕೆ.ಎಂ.ವೆಂಕಟೇಶ್, ರಂಗನಾಥ್, ಹಿರಿಯ ಸಾಹಿತಿ ಪರಮೇಶ್ವರಗುಪ್ಯ, ಗುರುಪ್ರಸನ್ನ, ಶಿ.ಮ.ಮಂಜುನಾಥ್, ಲಕ್ಷ್ಮಿಪತಿ, ನಾಗರಾಜು, ವೆಂಕಟರವಣಪ್ಪ, ಅಶ್ವತ್ಥ್,ವೆಂಕಟರೆಡ್ಡಿ, ಸರಸ್ವತಮ್ಮ, ನಾಗರಾಣಿ, ಕೆ.ರವಣಪ್ಪ ಕವನವಾಚನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.