ಚಿಂತಾಮಣಿ: ತಾಲ್ಲೂಕಿನ ಕುರುಬೂರಿನಲ್ಲಿರುವ ಕೃಷಿ ಮತ್ತು ರೇಷ್ಮೆ ಕಾಲೇಜಿನ 3ನೇ ಸೆಮಿಷ್ಟರ್ ವಿದ್ಯಾರ್ಥಿಗಳು ಕೃಷಿಯಲ್ಲಿ ಉದ್ಯಮಶೀಲತೆ ವಿಷಯದಲ್ಲಿ ಪ್ರಾಯೋಗಿಕ ತರಬೇತಿಗಾಗಿ ಕುರುಟಹಳ್ಳಿಯ ರೈತ ರಾಧಾಕೃಷ್ಣ ಅವರ ತೋಟದಲ್ಲಿರುವ ಸೋಲಾರ್ ಘಟಕಕ್ಕೆ ಭೇಟಿ ನೀಡಿದ್ದರು.
ರಾಧಾಕೃಷ್ಣ ಅವರ ತೋಟವು ಕೃಷಿ ಪ್ರಯೋಗಶಾಲೆಯಾಗಿದ್ದು ಕೃಷಿ ಕಾಲೇಜುಗಳ ವಿದ್ಯಾರ್ಥಿಗಳು, ಬೇರೆ ಬೇರೆ ತಾಲ್ಲೂಕು ಮತ್ತು ಜಿಲ್ಲೆಯ ಪ್ರಗತಿಪರ ರೈತರ ಅಧ್ಯಯನ ತಂಡಗಳು ಭೇಟಿ ನೀಡುತ್ತವೆ.
ಕೃಷಿ ಮತ್ತು ರೇಷ್ಮೆ ವಿದ್ಯಾರ್ಥಿಗಳು ರೈತರ ಬಗ್ಗೆ ಗಮನಹರಿಸಬೇಕು. ಕಾಲೇಜಿನಲ್ಲಿ ಕಲಿಯುವುದರ ಜತೆಗೆ ಪ್ರಗತಿಪರ ರೈತರ ತೋಟಗಳಿಗೆ ಭೇಟಿ ನೀಡಿ ಪ್ರಾಯೋಗಿಕವಾಗಿ ಅನುಭವ ಪಡೆಯಬೇಕು. ವಿದ್ಯಾರ್ಥಿಗಳ ಸಂಶೋಧನೆ, ಕಲಿಕೆಯ ವಿಷಯಗಳನ್ನು ರೈತರಿಗೆ ನೀಡಬೇಕು. ರೈತರ ಅನುಭವಗಳನ್ನು ವಿದ್ಯಾರ್ಥಿಗಳು ಹಂಚಿಕೊಳ್ಳಬೇಕು ಎಂದು ರಾಧಾಕೃಷ್ಣ ವಿದ್ಯಾರ್ಥಿಗಳಿಗೆ ವಿವರಿಸಿದರು.
ಜಮೀನಿನಲ್ಲಿರುವ ಕೃಷಿ ಹೊಂಡ ಕೇವಲ ನೀರು ಶೇಖರಣೆಗೆ ಮಾತ್ರವಲ್ಲ. ಸುತ್ತಲೂ ಬಾಳೆ, ಕಬ್ಬು, ಹೂ ಗಿಡಗಳು ಬೆಳೆಸಲಾಗಿದೆ. ಒಳಗಡೆ ಮೀನು ಸಾಕಾಣಿಕೆ ಮಾಡುತ್ತೇವೆ. ಕೃಷಿ ಹೊಂಡಕ್ಕೆ ಸರ್ಕಾರದಿಂದ ಪ್ರೋತ್ಸಾಹ ಧನ ಸಿಗುತ್ತದೆ. ರೈತರು ಸಮಗ್ರ ಕೃಷಿ ಪದ್ಧತಿಯನ್ನು ಕೈಗೊಳ್ಳಬೇಕು. ಕೃಷಿ ತೋಟದಲ್ಲಿ ಮೀನು ಸಾಕಾಣಿಕೆ, ಜೇನು ಸಾಕಾಣಿಕೆ, ಕುರಿ, ಕೋಳಿ, ಮೇಕೆ, ಹಸುಗಳ ಸಾಕಾಣಿಕೆಯನ್ನು ಮಾಡುತ್ತೇವೆ. ಸಮಗ್ರ ಕೃಷಿ ಪದ್ಧತಿಯನ್ನು ಕೃಷಿ ವಿದ್ಯಾರ್ಥಿಗಳು ರೈತರಿಗೆ ಮನವರಿಕೆ ಮಾಡಬೇಕು ಎಂದರು.
ವಿದ್ಯಾರ್ಥಿಗಳು ಕೃಷಿಯ ವಿವಿಧ ಸಮಸ್ಯೆ, ಬೆಳೆ ಪದ್ಧತಿ, ಬೆಳವಣಿಗೆ, ಕೊಯ್ಲು, ಮಾರುಕಟ್ಟೆ ಮತ್ತಿತರ ಹಲವಾರು ವಿಷಯಗಳ ಕುರಿತು ರಾಧಾಕೃಷ್ಣ ಅವರೊಂದಿಗೆ ಚರ್ಚೆ, ಸಂವಾದ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.