ADVERTISEMENT

ಚಿಂತಾಮಣಿ | ಪ್ರದರ್ಶನ ಕಾಣದ ‘ಒಜಿ’ ಚಲನಚಿತ್ರ: ಗಲಾಟೆ

ಹಣ ಪಡೆದು ಚಲಚಿತ್ರಮಂದಿರದ ಮಾಲೀಕರು ಮೋಸ ಆರೋಪ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 6:28 IST
Last Updated 26 ಸೆಪ್ಟೆಂಬರ್ 2025, 6:28 IST
ಚಿಂತಾಮಣಿಯ ಆದರ್ಶ ಚಿತ್ರಮಂದಿರದ ಮುಂದೆ ನೆರೆದಿದ್ದ ಪ್ರೇಕ್ಷಕರು
ಚಿಂತಾಮಣಿಯ ಆದರ್ಶ ಚಿತ್ರಮಂದಿರದ ಮುಂದೆ ನೆರೆದಿದ್ದ ಪ್ರೇಕ್ಷಕರು   

ಚಿಂತಾಮಣಿ: ಪವನ್ ಕಲ್ಯಾಣ್ ನಟನೆಯ ‘ಒಜಿ’ ಚಲನಚಿತ್ರ ಪ್ರದರ್ಶಿಸದ ಹಿನ್ನೆಲೆ ಪವನ್ ಕಲ್ಯಾಣ್ ಅಭಿಮಾನಿಗಳು ಚಿತ್ರಮಂದಿರದ ಪರದೆ ಹಾಗೂ ವಸ್ತುಗಳನ್ನು ಧ್ವಂಸಗೊಳಿಸಿ ಗಲಾಟೆ ಮಾಡಿರುವ ಪ್ರಕರಣ ನಗರದ ಶಿಡ್ಲಘಟ್ಟ ರಸ್ತೆಯಲ್ಲಿರುವ ಆದರ್ಶ ಚಿತ್ರಮಂದಿರದಲ್ಲಿ ಬುಧವಾರ ರಾತ್ರಿ ನಡೆದಿದೆ.

ಪವನ್ ಕಲ್ಯಾಣ್ ನಟಿಸಿರುವ ‘ಒಜಿ’ ಚಲನಚಿತ್ರ ಪ್ರದರ್ಶನ ಮಾಡುತ್ತೇವೆ ಎಂದು ಚಿತ್ರಮಂದಿರದವರು ಹಣ ಪಡೆದು ಟಿಕೆಟ್ ವಿತರಿಸಿದ್ದರು. ಹಣ ಪಾವತಿಸಿ ಟಿಕೆಟ್ ಬುಕಿಂಗ್ ಮಾಡಿದ್ದ ಅಭಿಮಾನಿಗಳು ಬುಧವಾರ ರಾತ್ರಿ 8ಕ್ಕೆ ಚಿತ್ರಮಂದಿರಕ್ಕೆ ಬಂದಿದ್ದಾರೆ. ರಾತ್ರಿ 10 ಗಂಟೆಯಾದರೂ ಚಿತ್ರ ಪ್ರದರ್ಶನ ಮಾಡದ ಹಿನ್ನೆಲೆ ಆಕ್ರೋಶಗೊಂಡ ಅಭಿಮಾನಿಗಳು ದಾಳಿ ನಡೆಸಿದ್ದಾರೆ. ಚಿತ್ರಮಂದಿರದ ಪರದೆ ಹರಿದು, ಕುರ್ಚಿಗಳನ್ನು ಬಿಸಾಡಿ ಸಿಸಿ ಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿದ್ದಾರೆ.

ಚಿತ್ರಮಂದಿರದಲ್ಲಿ ನೂಕು ನುಗ್ಗಲು ಉಂಟಾಗಿತ್ತು. ವಿಷಯ ತಿಳಿದ ನಗರ ಠಾಣೆ ಇನ್‌ಸ್ಪೆಕ್ಟರ್‌ ವಿಜಿಕುಮಾರ ತಮ್ಮ ಸಿಬ್ಬಂದಿಯೊಂದಿಗೆ ದೌಡಾಯಿಸಿ ಪ್ರೇಕ್ಷಕರನ್ನು ಚಿತ್ರಮಂದಿರದಿಂದ ಹೊರಗಡೆ ಕಳುಹಿಸಿದ್ದಾರೆ.

ADVERTISEMENT

ಪವನ್ ಕಲ್ಯಾಣ್ ಅಭಿಮಾನಿಗಳು ನ್ಯಾಯ ಬೇಕು, ಹಣ ಪಡೆದು ಮೋಸ ಮಾಡಿರುವ ಚಿತ್ರಮಂದಿರ ಮಾಲೀಕರ ವಿರುದ್ಧ ಧಿಕ್ಕಾರ ಕೂಗಿದರು. ಚಿತ್ರಮಂದಿರದ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಕ್ಷಣವೇ ನಗರ ಠಾಣೆ ಪೊಲೀಸರು ಕ್ರಮ ಕೈಗೊಂಡರು.

ಪರಿಸ್ಥಿತಿ ಗಂಭೀರತೆ ಅರಿತ ಪೊಲೀಸರು ರಾತ್ರಿ 12 ಗಂಟೆಗೆ ಚಿತ್ರಮಂದಿರದ ಮಾಲೀಕರು ಮತ್ತು ಅಭಿಮಾನಿ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಚಿತ್ರ ವೀಕ್ಷಿಸಲು ಬಂದಿರುವ ಅಭಿಮಾನಿಗಳಿಗೆ ₹400 ರೂಪಾಯಿ ಹಣ ವಾಪಸ್ ಕೊಡಿಸುವ ಭರವಸೆ ನೀಡಲಾಯಿತು. ನಂತರ ಪರಿಸ್ಥಿತಿ ತಿಳಿಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.