ಚಿಂತಾಮಣಿ: ಶ್ರಾವಣಮಾಸದ ಕೊನೆಯ ಶನಿವಾರದ ನಗರ ಹಾಗೂ ತಾಲ್ಲೂಕಿನ ದೇವಾಲಯಗಳಿಗೆ ಭಕ್ತರ ಸಾಗರವೇ ಹರಿದುಬಂದಿತ್ತು.
ದೇವಾಲಯಗಳಲ್ಲಿ ಅಲಂಕಾರ, ಪೂಜೆ, ವಿದ್ಯುತ್ ದೀಪಾಲಂಕಾರ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿದವು.
ವರದಾದ್ರಿ ಬೆಟ್ಟದಲ್ಲಿರುವ ವರದಾಂಜನೇಯ ದೇವಾಲಯದಲ್ಲಿ ಅಲಂಕಾರ, ಪೂಜೆ ಹಮ್ಮಿಕೊಳ್ಳಲಾಗಿತ್ತು. 108 ಕೆ.ಜಿ ಪುಳಿಯೋಗರೆ ತಿರುಪ್ಪಾವಾಡ ಸೇವೆಯನ್ನು ನೆರವೇರಿಸಲಾಯಿತು.
ಕೈವಾರದಲ್ಲೂ ದೇವಾಲಯಗಳಿಗೆ ಭಕ್ತರು ಎಡತಾಕುತ್ತಿದ್ದರು. ಯೋಗಿನಾರೇಯಣ ಮಠ, ಅಮರನಾರೇಯಣ ದೇವಸ್ಥಾನ, ಭೀಮಲಿಂಗೇಶ್ವರ ದೇವಸ್ಥಾನಗಳಲ್ಲಿ ಅಭಿಷೇಕ, ಅಲಂಕಾರ, ಪೂಜೆ, ಮಂಗಳಾರತಿ ಕಾರ್ಯಕ್ರಮ ಅದ್ದೂರಿಯಾಗಿ ನಡೆದವು.
ಬೂರಗಮಾಕಲಹಳ್ಳಿಯ ವೀರಾಂಜನೇಯ ದೇವಾಲಯದಲ್ಲೂ ಪೂಜೆ, ಅಲಂಕಾರ ಮಾಡಲಾಗಿತ್ತು. ವೀರಾಂಜನೇಯಗೆ ಮಾಡಿದ್ದ ಅಲಂಕಾರ ಭಕ್ತರ ಆಕರ್ಷಣೆಯಾಗಿತ್ತು. ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಜನರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಆಲಂಬಗಿರಿಯ ಲಕ್ಷ್ಮಿವೆಂಕಟರಮಣ ದೇವಾಲಯದಲ್ಲೂ ಪೂಜೆ, ಅಲಂಕಾರ ಕಣ್ಣಕೋರೈಸುವಂತಿತ್ತು. ದೇವಾಲಯದ ಒಳಗಡೆ ವಿದ್ಯುತ್ ದೀಪಾಲಂಕಾರ ಜಗಮಗಿಸುತ್ತಿತ್ತು. ಭಕ್ತರು ಬೆಳಗ್ಗೆಯಿಂದ ಸಂಜೆವರೆಗೂ ಸಂಕೀರ್ತನಾ ಸೇವೆ ಸಮರ್ಪಿಸಿದರು.
ಮಹಾಕೈಲಾಸಗಿರಿ, ಮುರುಗಮಲ್ಲದ ಮುಕ್ತೀಶ್ವರ ದೇವಾಲಯ, ಕುರುಟಹಳ್ಳಿಯ ವೀರಾಂಜನೇಯ ದೇವಾಲಯ, ನಗರದ ಕನಂಪಲ್ಲಿಯ ಪಂಚಮುಖಿ ಆಂಜನೇಯ, ನಾಗನಾಥೇಶ್ವರ, ಅಜಾದ್‌ಚೌಕದ ಹರಿಹರೇಶ್ವರ, ಬೆಂಗಳೂರು ರಸ್ತೆಯ ಶನಿಮಹಾತ್ಮ ದೇವಾಲಯಗಳಲ್ಲೂ ಅಲಂಕಾರ, ಪೂಜೆ ಮತ್ತಿತರ ಕಾರ್ಯಕ್ರಗಳು ನೆರವೇರಿದವು.
ಚಿಲಕಲನೇರ್ಪು ಹೋಬಳಿಯ ಏನಿಗದಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಕುಂಠಪುರದ ವೆಂಕಟರಮಣ ದೇವಾಲಯದಲ್ಲೂ ಅಲಂಕಾರ, ಪೂಜೆ ನೆರವೇರಿದವು. ಗ್ರಾಮೀಣ ಭಾಗದ ನೂರಾರು ಜನರು ಆಗಮಿಸಿ ಹಣ್ಣುಕಾಯಿ ನೀಡಿ ಪೂಜೆ ಮಾಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.