ಚಿಂತಾಮಣಿ: ಏಕ ಬಳಕೆ ಪ್ಲಾಸ್ಟಿಕ್ ಅನ್ನು ಸರ್ಕಾರ ನಿಷೇಧಗೊಳಿಸಿದೆ. ನಿಷೇಧಿತ ಪ್ಲಾಸ್ಟಿಕ್ ಉತ್ಪಾದಿಸುವ, ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ನಿಯಮವನ್ನೂ ರೂಪಿಸಿದೆ. ಆದರೆ ಇದು ಬಹುತೇಕ ನಗರ ಮತ್ತು ಪಟ್ಟಣಗಳಲ್ಲಿ ಕಾನೂನಿಗಷ್ಟೇ ಸೀಮಿತವಾಗಿದೆ. ಇವುಗಳಿಗೆ ತದ್ವಿರುದ್ಧ ಎನ್ನುವಂತೆ ಚಿಂತಾಮಣಿಯಲ್ಲಿ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಲಾಗಿದೆ.
ನಗರವವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕೆಂದು ಚಿಂತಾಮಣಿ ನಗರಸಭೆ ಪಣತೊಟ್ಟಿದ್ದು, ಇದಕ್ಕೆ ಬೇಕಾದ ಸಕಲ ಸಿದ್ಧತೆ ನಡೆಸುತ್ತಿದೆ. ನಿಷೇಧಿತ ಪ್ಲಾಸ್ಟಿಕ್ ಬಳಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿದೆ. ಹೋಟೆಲ್, ಬೇಕರಿ ಮತ್ತು ಅಂಗಡಿ–ಮುಂಗಟ್ಟುಗಳ ಮೇಲೆ ದಾಳಿ ನಡೆಸಿ, ಪ್ಲಾಸ್ಟಿಕ್ ವಶ ಪಡಿಸಿಕೊಂಡು, ದಂಡ ವಿಧಿಸುತ್ತಿದೆ.
ಇದುವರಗೆ ನಗರಸಭೆ ಸಿಬ್ಬಂದಿ ಸಾವಿರಕ್ಕೂ ಅಧಿಕ ದಾಳಿಗಳನ್ನು ನಡೆಸಿ, ₹12 ಲಕ್ಷ ದಂಡ ಸಂಗ್ರಹಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಹಾಗೂ ನಗರಸಭೆ ಸಿಬ್ಬಂದಿ ಇಚ್ಛಾಶಕ್ತಿಯಿಂದ ಶೇ 95ರಷ್ಟು ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಸಾಧನೆ ಮಾಡಲಾಗಿದೆ. ಇನ್ನೂ ಕದ್ದು ಮುಚ್ಚಿ ನಡೆಯುತ್ತಿರುವ ಶೇ 5 ರಷ್ಟನ್ನು ಸಂಪೂರ್ಣ ನಿಯಂತ್ರಿಸಿ ಶೀಘ್ರದಲ್ಲೇ ‘ಪ್ಲಾಸ್ಟಿಕ್ ಮುಕ್ತ ನಗರ’ ಘೋಷಣೆಗೆ ಚಿಂತಾಮಣಿ ನಗರಸಭೆ ಅಣಿಯಾಗುತ್ತಿದೆ.
ನಗರಸಭೆ ಪೌರಾಯುಕ್ತರು ಮತ್ತು ಸಿಬ್ಬಂದಿಗಳ ಶ್ರಮದಿಂದ ನಗರದಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಬಂದಿದೆ. ಇದರಲ್ಲಿ ಸಾರ್ಜನಿಕರ ವಿವೇಚನೆ ಮತ್ತು ಸಹಕಾರವು ಇದೆ.
ತಳ್ಳುವ ಗಾಡಿ ವ್ಯಾಪಾರಸ್ಥರು, ಹಣ್ಣು, ಹೂ ಮಾರಾಟಗಾರರು ಸೇರಿದಂತೆ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಚೀಲ ಬದಲಾಗಿ ಪರಿಸರಸ್ನೇಹಿ ಚೀಲ ಮಾಡಲಾಗುತ್ತಿದೆ.
ರಾಮೇಗೌಡ ಪೌರಾಯುಕ್ತರಾಗಿದ್ದಾಗ ಸ್ವಚ್ಛನಗರ ಎಂಬ ರಾಜ್ಯ ಮಟ್ಟದ ಪ್ರಶಸ್ತಿಗೆ ಚಿಂತಾಮಣಿ ನಗರಸಭೆ ಭಾಜನವಾಗಿತ್ತು. ಈಗ ಮತ್ತೆ ಸ್ವಚ್ಛ ಮತ್ತು ಹಸಿರು ನಗರವಾಗಿ ರೂಪಿಸುವ ಮೂಲಕ ಪ್ರಶಸ್ತಿ ರೇಸ್‌ನಲ್ಲಿ ಚಿಂತಾಮಣಿ ನಗರಸಬೆ.
ನಗರಸಭೆಯಿಂದ ತಳ್ಳುಗಾಡಿಯ ವರ್ತಕರು ಸೇರಿದಂತೆ ಎಲ್ಲ ವ್ಯಾಪಾರಿಗಳ ಸಭೆ ನಡೆಸಿ ಪ್ಲಾಸ್ಟಿಕ್‌ನಿಂದ ಆಗುತ್ತಿರುವ ಅನಾಹುತ ಬಗ್ಗೆ ಜಾಗೃತಿ ಮೂಡಿಸಲಾಯಿತು. ಜೊತೆಗೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ಬಿಟ್ಟು, ಪರಿಸರ ಸ್ನೇಹಿ ಚೀಲ ಬಳಸಲು ಮೂರು ತಿಂಗಳು ಕಾಲಾವಕಾಶ ನೀಡಲಾಗಿತ್ತು. ಇದರ ನಂತರವು ಪ್ಲಾಸ್ಟಿಕ್ ಮಾರಾಟ ಮಾಡುವ ಮತ್ತು ಬಳಸುವವರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಲಾಯಿತು. ದಾಳಿಯಲ್ಲಿ ಸಿಕ್ಕ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಲಾಯಿತು. ಎರಡು ಬಾರಿ ನಿಯಮ ಉಲ್ಲಂಘಿಸಿದರೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನೂ ನಗರಸಭೆಯಿಂದ ನೀಡಲಾಗಿತ್ತು.
ಪ್ಲಾಸ್ಟಿಕ್ ವಿರುದ್ಧ ಹೋರಾಟಕ್ಕೆ ಮೊದಲಿಗೆ ವರ್ತಕರಿಂದ ವಿರೋಧ ವ್ಯಕ್ತಪಡಿಸಿದರು. ಚುನಾವಣೆಯಲ್ಲಿ ತಾವು ಮತದಾನ ಮಾಡುವುದಿಲ್ಲ ಎಂಬ ಎಚ್ಚರಿಕೆ ನೀಡಿದರು.
‘ನಾನು ಸೋತರೂ ಪರವಾಗಿಲ್ಲ. ಸಮಾಜ ಹಾಗೂ ಮುಂದಿನ ಪೀಳಿಗೆಯ ಆರೋಗ್ಯ ಮುಖ್ಯ’ ಎಂಬ ಸಚಿವರ ದೃಢ ನಿರ್ಧಾರ ನಾವು ಪ್ಲಾಸ್ಟಿಕ್ ಬಳಸುವವರ ವಿರುದ್ಧ ನಿರ್ಭಿತಿಯಿಂದ ಕೆಲಸ ಮಾಡಲು ಸಾಧ್ಯವಾಯಿತು ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.
12 ಲಕ್ಷ ದಂಡ ಸಂಗ್ರಹ: ನಗರಸಭೆಯ ಸಿಬ್ಬಂದಿ ಮಳಿಗೆಗಳ ಮೇಲೆ ಪದೇ ಪದೇ ದಾಳಿ ನಡೆಸಿ ದಂಡ ವಿಧಿಸಿದರು. ₹12 ಲಕ್ಷ ದಂಡ ಸಂಗ್ರಹವಾಗಿತ್ತು. ಅದರಿಂದ ಪೌರಕಾರ್ಮಿಕರಿಗೆ ಎರಡು ತಿಂಗಳು ವೇತನ ನೀಡಲಾಯಿತು ಎಂದು ಪೌರಾಯುಕ್ತ ಚಲಪತಿ ತಿಳಿಸಿದರು.
ಆದರೂ ಕದ್ದು-ಮುಚ್ಚಿ ಪ್ಲಾಸ್ಟಿಕ್ ವ್ಯವಹಾರ ನಡೆಯುತ್ತಿತ್ತು. ಒಬ್ಬ ವ್ಯಾಪಾರಿಯ ನಾಲ್ಕು ಉಗ್ರಣಗಳ ಮೇಲೆ ದಾಳಿ ನಡಸಿ ಮಾಲು ಸಮೇತ ಹಿಡಿಯಲಾಯಿತು. ಟನ್ ಗಟ್ಟಲೆ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಯಿತು. ಅವರ ಮೇಲೆ ಕೊಕದ್ದಮೆ ಹೂಡಲಾಯಿತು. ನ್ಯಾಯಾಲಯ ₹30 ಸಾವಿರ ದಂಡ ತಪ್ಪಿದರೆ 5 ವರ್ಷ ಜೈಲು ಶಿಕ್ಷೆ ವಿಧಿಸಿತು. ಇತರೆ 9 ಮಾಲೀಕರ ವೃತ್ತಿ ಪರವಾನಗಿ ರದ್ದುಪಡಿಸಲಾಯಿತು. ಇದರಿಂದ ನಗರದ ವ್ಯಾಪಾರಿಗಳು ಬದ್ಧಿ ಕಲಿತರು. ಪ್ಲಾಸ್ಟಿಕ್ ನಿಯತ್ರಣಕ್ಕೆ ಬಂತು ಎನ್ನುತ್ತಾರೆ ಪೌರಾಯುಕ್ತ ಚಲಪತಿ.
ನಗರಸಭೆ ಕೈಗೊಂಡ ನಿರಂತರ ಜಾಗೃತಿ ಕಾರ್ಯಕ್ರಮಗಳಿಂದ ನಗರದಲ್ಲಿ ಸಂಗ್ರಹವಾಗುತ್ತಿದ್ದ 9 ಟನ್ ಕಸ 4ಟನ್‌ಗೆ ಇಳಿದಿದೆ.
ಸುತ್ತಮುತ್ತಲಿನ ಪರಿಸರವನ್ನು ನಾಗರಿಕ ಸಮಾಜ ಗಂಭೀರವಾಗಿ ಪರಿಗಣಿಸಬೇಕು. ಪ್ಲಾಸ್ಟಿಕ್ ಬಳಕೆಯಿಂದ ಹೊರಬರುವ ಸಂಕಲ್ಪ ಕೈಗೊಳ್ಳಬೇಕು. ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕೆ ಕಾನೂನು ಜತೆಗೆ ಸಾರ್ವಜನಿಕರ ಸಹಕಾರವು ಅಗತ್ಯ.ಡಾ.ಎಂ.ಸಿ.ಸುಧಾಕರ್ ಸಚಿವ
ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಜನರ ಸಹಕಾರ ಬೇಕು. ಪ್ಲಾಸ್ಟಿಕ್ ಮುಕ್ತ ಸಮಾಜ ಮನೆಯಿಂದಲೇ ಆರಂಭವಾಗಬೇಕು. ಸದಾ ಖಾದಿ ಬಟ್ಟೆಯ ಕೈಚೀಲ ಇರಬೇಕು. ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಹಾಗೂ ಹಸಿರು ಚಿಂತಾಮಣಿ ಮಾಡಲು ನಗರಸಭೆಯ ಸಿಬ್ಬಂದಿ ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ. ನಗರದ ರಸ್ತೆಗಳ ಇಕ್ಕೆಲ್ಲಗಳಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದೆ.ಜಿ.ಎನ್.ಚಲಪತಿ ಪೌರಾಯುಕ್ತ
ಯಿಂದಲೇ ಆರಂಭವಾಗಲಿ *** ನಾಗರಿಕರ ಸಹಕಾರ ಅಗತ್ಯ ಆರೋಗ್ಯಕರ ಸಮಾಜಕ್ಕಾಗಿ ನಗರಸಭೆ ಉತ್ತಮ ಕಾರ್ಯಕ್ರಮ ಕೈಗೊಂಡಿದೆ. ಪ್ಲಾಸ್ಟಿಕ್ ಬಳಕೆ ಮುಂದುವರೆಸಿದರೆ ಮುಂದಿನ ಪೀಳಿಗೆ ಬದುಕುವುದೇ ದುಸ್ತರವಾಗುತ್ತದೆ. ಪ್ಲಾಸ್ಟಿಕ್ ಮುಕ್ತ ನಗರಕ್ಕೆ ನಾಗರಿಕರು ಕೈಜೋಡಿಸಬೇಕು. ಎಷ್ಟೇ ಕಷ್ಟ ತೊಂದರೆ ಆದರೂ ಸಹ ಪ್ಲಾಸ್ಟಿಕ್ ಬಳಕೆ ಮಾಡದಿರಲು ಪಣತೊಡಬೇಕು.ಸಿ.ಎ.ರಮೇಶ್ ನಾಗರಿಕ
ಶಾಲೆ–ಕಾಲೇಜುಗಳಲ್ಲಿ ಅರಿವು ಪ್ಲಾಸ್ಟಿಕ್ ರಹಿತ ಜೀವನವನ್ನು ರೂಡಿಸಿಕೊಳ್ಳಬೇಕು. ಪ್ಲಾಸ್ಟಿಕ್ ನಿಂದ ಉಂಟಾಗುವ ಹಾನಿಯ ಬಗ್ಗೆ ಶಾಲಾ–ಕಾಲೇಜುಗಳಲ್ಲಿ ಗಂಭೀರವಾಗಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕು.ಅಶ್ವತ್ಥಮ್ಮ ನಿವೃತ್ತ ಪ್ರಾಂಶುಪಾಲೆ
ಪರಿಸರ ಜಾಗೃತಿ ಸಭೆ ನಡೆಸಿದರೆ ಯಾವ ಅರ್ಥವೂ ಇಲ್ಲ. ಜನರು ಸ್ವತ: ಪರಿಸರ ಕಾಪಾಡುವ ಪ್ರತಿಜ್ಞೆ ಕೈಗೊಳ್ಳಬೇಕು. ಮನೆ ಹೊರಗಡೆ ಎಲ್ಲಿಯೂ ಪ್ಲಾಸ್ಟಿಕ್ ಬಳಸಬಾರದು. ಮನೆಯಿಂದ ಹೊರಗಡೆ ಹೊರಟಾಗ ಪರಿಸರಸ್ನೇಹಿ ಕೈಚೀಲ ತೆಗೆದುಕೊಂಡು ಹೋಗಬೇಕು. ಮನೆ ಮಾರುಕಟ್ಟೆ ಮದುವೆ ಮತ್ತಿತರ ಸಮಾರಂಭ ಸೇರಿದಂತೆ ಎಲ್ಲಿಯೂ ಪ್ಲಾಸ್ಟಿಕ್ ಬಳಸಬಾರದು. ಇತರರಿಗೂ ಜಾಗೃತಿ ಮೂಡಿಸಬೇಕು.ಪಾಪಣ್ಣ ಮಾಜಿ ಅಧ್ಯಕ್ಷ ಕಸಾಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.