ADVERTISEMENT

ಚಿತ್ರಾವತಿ ಹೂಳು ತೆಗೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 4:13 IST
Last Updated 16 ಅಕ್ಟೋಬರ್ 2021, 4:13 IST
ಬಾಗೇಪಲ್ಲಿ ತಾಲ್ಲೂಕಿನ ಪರಗೋಡು ಚಿತ್ರಾವತಿ ಅಣೆಕಟ್ಟು ಪ್ರದೇಶಕ್ಕೆ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಬಾಗೇಪಲ್ಲಿ ತಾಲ್ಲೂಕಿನ ಪರಗೋಡು ಚಿತ್ರಾವತಿ ಅಣೆಕಟ್ಟು ಪ್ರದೇಶಕ್ಕೆ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಬಾಗೇಪಲ್ಲಿ: ‘ತಾಲ್ಲೂಕಿನ ಪರಗೋಡು ಚಿತ್ರಾವತಿ ಅಣೆಕಟ್ಟು ಈಗಿರುವ ಅಡಿಗಳಿಗೆ 3 ಅಡಿಗಳಷ್ಟು ಎತ್ತರ ಮಾಡಬೇಕಾಗಿತ್ತು. ಇದರಿಂದ ನೀರಿನ ಶೇಖರಣಾ ಸಾಮರ್ಥ್ಯ ಹಾಗೂ ಅಂತರ್ಜಲ ಮಟ್ಟ ಹೆಚ್ಚಾಗುತ್ತಿತ್ತು. ಜನಪ್ರತಿನಿಧಿಗಳು, ಅಧಿಕಾರಿಗಳು ಅಣೆಕಟ್ಟನ್ನು 3 ಅಡಿಗಳಷ್ಟು ಮೇಲೆ ಕಟ್ಟಿಸಿಲ್ಲ. ಹೂಳು ತೆಗೆಸಿಲ್ಲ’ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದರು.

ತಾಲ್ಲೂಕಿನ ಪರಗೋಡು ಚಿತ್ರಾವತಿ ಅಣೆಕಟ್ಟು ತುಂಬಿ ಹರಿದಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮಾತನಾಡಿದರು.

‘ನಾನು ಶಾಸಕರಾಗಿದ್ದ ಅವಧಿಯಲ್ಲಿ ಚಿತ್ರಾವತಿ ಅಣೆಕಟ್ಟು ನಿರ್ಮಾಣ ಮಾಡಿಸಿದೆ. ಆಗಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಸಂಪೂರ್ಣ ಸಹಕಾರ ನೀಡಿದ್ದರು. ಇದೀಗ ಅವರನ್ನು ನೆನಪಿಸಿಕೊಳ್ಳುತ್ತೇನೆ. ಅಂದಾಜಿನ ಪ್ರಕಾರ ಚಿತ್ರಾವತಿ ಅಣೆಕಟ್ಟಿನಲ್ಲಿ 3 ಅಡಿ ಎತ್ತರ ಕಟ್ಟಬೇಕಾಗಿತ್ತು. ನಾನು ಆ ಸಂದರ್ಭದಲ್ಲಿ ಚುನಾವಣೆಯಲ್ಲಿ ಸೋತ ನಂತರ ಅಧಿಕಾರಿಗಳು, ನಂತರದ ಜನಪ್ರತಿನಿಧಿಗಳು 3 ಅಡಿ ಎತ್ತರ ಕಡಿಮೆ ಮಾಡಿದ್ದಾರೆ. ನಂತರ ಹೂಳು ತೆಗೆಯದೇ ಇರುವುದರಿಂದ ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆ ಆಗಿದೆ ಎಂದರು.

ADVERTISEMENT

ತಾಲ್ಲೂಕಿನಲ್ಲಿ ನದಿ ನಾಲೆಗಳು ಇಲ್ಲ. ಜಲಸಂಪತ್ತನ್ನು ವೃದ್ಧಿಸುವ ಯೋಜನೆಗಳು ಆಗಬೇಕಾಗಿದೆ. ನೀರಿನ ಮೂಲಗಳನ್ನು ರಕ್ಷಿಸಿ-ಬೆಳೆಸಬೇಕು. ಕೃಷಿ ಚಟುವಟಿಕೆಗಳಿಗೆ ಹಾಗೂ ಕುಡಿಯುವ ನೀರಿಗೆ ನೀರಿನ ಸಂಗ್ರಹಣೆ ಮುಖ್ಯ. ಚಿತ್ರಾವತಿಯ ನೀರಿನ ಒಳಹರಿವು ಹೆಚ್ಚಿಸಬೇಕು. ಚಿತ್ರಾವತಿ ತುಂಬಿ ಹರಿಯುತ್ತಿರುವುದು ಬಾಗೇಪಲ್ಲಿ ಹಾಗೂ ಗುಡಿಬಂಡೆ ತಾಲ್ಲೂಕಿನ ಜನರಲ್ಲಿ ಸಂತಸ ಮೂಡಿದೆ ಎಂದು
ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗೋಪಾಲಕೃಷ್ಣ, ಪ್ರಜಾ ಸಂಘರ್ಷ ಸಮಿತಿ ಮುಖಂಡರಾದ ಚನ್ನರಾಯಪ್ಪ, ಜಿ.ಎಂ.ರಾಮಕೃಷ್ಣಪ್ಪ, ಮದ್ದಿಲೇಟಿರೆಡ್ಡಿ, ಸುಧಾಕರರೆಡ್ಡಿ, ರಾಮರೆಡ್ಡಿ, ಮಂಜುನಾಥ್, ಮಂಜುನಾಥಸ್ವಾಮಿ, ಎ.ನರಸಿಂಹರೆಡ್ಡಿ, ರಾಮಾಂಜಿ, ಜುಬೇರ್ ಅಹಮದ್, ಎಲ್.ವೆಂಕಟೇಶ್, ಅಶ್ವಥ್ಥಪ್ಪ, ಜಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.