ADVERTISEMENT

ಚಿಕ್ಕಬಳ್ಳಾಪುರ | ನಗರದಲ್ಲಿ ನೀರಿಗಾಗಿ ಪರಿತಪಿಸುವ ನಾಗರಿಕರು

ಉಸ್ತುವಾರಿ ಸಚಿವರ ಗಮನಕ್ಕೆ ತಂದರೂ ತೀರದ ಜಲಬಾಧೆ, ನಗರದಾದ್ಯಂತ ಖಾಸಗಿ ಟ್ಯಾಂಕರ್‌ಗಳ ದರ್ಶನ

ಎ.ಎಸ್.ಜಗನ್ನಾಥ್
Published 25 ಏಪ್ರಿಲ್ 2020, 19:30 IST
Last Updated 25 ಏಪ್ರಿಲ್ 2020, 19:30 IST
ನಗರದ ವಾರ್ಡ್‌ವೊಂದರಲ್ಲಿ ದಾನಿಗಳ ನೀರಿನ ಟ್ಯಾಂಕರ್‌ನಲ್ಲಿ ನೀರು ಹಿಡಿಯಲು ಮುಗಿಬಿದ್ದ ಜನರು
ನಗರದ ವಾರ್ಡ್‌ವೊಂದರಲ್ಲಿ ದಾನಿಗಳ ನೀರಿನ ಟ್ಯಾಂಕರ್‌ನಲ್ಲಿ ನೀರು ಹಿಡಿಯಲು ಮುಗಿಬಿದ್ದ ಜನರು   

ಗೌರಿಬಿದನೂರು: ಕೊರೊನಾ ವೈರಸ್‌ ಸೋಂಕಿನ ಭೀತಿಗೆ ಜೀವಭಯದಿಂದ ಮನೆ ಹಿಡಿದು ಕುಳಿತಿರುವ ನಗರದ ನಿವಾಸಿಗಳು ಇದೀಗ ಕೋವಿಡ್‌ ಜತೆಗೆ ಕುಡಿಯುವ ನೀರಿನ ಸಂಕಷ್ಟ ಎದುರಿಸುವಂತಾಗಿದೆ.

ನಗರಸಭೆ ವ್ಯಾಪ್ತಿಯಲ್ಲಿನ 31 ವಾರ್ಡ್‌ಗಳ ಪೈಕಿ ಬಹುತೇಕ ವಾರ್ಡ್‌ಗಳಲ್ಲಿ ಸಮರ್ಪಕ ನೀರಿನ ಪೂರೈಕೆ ಇಲ್ಲದೆ ಜನರು ಪರಿತಪಿಸುವಂತಾಗಿದೆ. ಪ್ರಸ್ತುತ ನಗರಸಭೆ ವ್ಯಾಪ್ತಿಯಲ್ಲಿ 126 ಕೊಳವೆಬಾವಿಗಳಿದ್ದು, ಅವುಗಳಲ್ಲಿ 56 ಮಾತ್ರ ನೀರು ಪೂರೈಸುತ್ತಿವೆ. ಇನ್ನುಳಿದ 76 ಕೊಳವೆಬಾವಿಗಳು ಬತ್ತಿ ಹೋಗಿವೆ.

ಪ್ರಸ್ತುತ ನಗರದಲ್ಲಿ ಲಭ್ಯವಿರುವ ಐದು ಓವರ್ ಹೆಡ್ ಟ್ಯಾಂಕ್‌ಗಳ‌ ಮೂಲಕ ನಗರದ ವಿವಿಧ ಬಡಾವಣೆಗಳಿಗೆ ನಿಗದಿತ ವೇಳಾಪಟ್ಟಿಯಂತೆ ಪೂರೈಕೆ ಮಾಡಲಾಗುತ್ತಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ADVERTISEMENT

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ನಗರಕ್ಕೆ ಆಗಮಿಸಿ ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಭೆ ಆಯೋಜಿಸಿದ್ದರು. ಆ ಸಭೆಯಲ್ಲಿ ಸ್ಥಳೀಯ ‌ಜನಪ್ರತಿನಿಧಿಗಳು ಮತ್ತು ನಾಗರಿಕರು ವಿವಿಧ ಬಡಾವಣೆಗಳಲ್ಲಿನ ನೀರಿನ ಸಮಸ್ಯೆ ಬಗೆಹರಿಸುವಂತೆ ಮನವಿ‌ ಮಾಡಿದ್ದರು.

ಆಗ ಸಚಿವರು ಸಮಸ್ಯೆ ಇರುವ ಕಡೆ ಕೂಡಲೇ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಆರ್.ಲತಾ ಅವರು ಒಂದು‌ ವಾರದೊಳಗೆ ನೀರಿನ ಸಮಸ್ಯೆ ಪರಿಹರಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ಆದರೆ, ನಗರದಲ್ಲಿ‌ ನೀರಿನ ಸಮಸ್ಯೆ ಮಾತ್ರ ಈವರೆಗೆ ಪರಿಹಾರವಾಗಲೇ ಇಲ್ಲ ಎಂಬುದು ಸ್ಥಳೀಯ ‌ನಾಗರಿಕರ ಆರೋಪ.

ಈ ವಿಚಾರವಾಗಿ ನಗರಸಭೆ ಆಯುಕ್ತ ಜಿ.ಎನ್‌.ಚಲಪತಿ ಅವರನ್ನು ಪ್ರಶ್ನಿಸಿದರೆ, ’ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೊಸದಾಗಿ ಎಂಟು ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ. ಅವುಗಳಲ್ಲಿ ಮೂರಕ್ಕೆ ಪಂಪು ಮತ್ತು ಮೋಟರ್ ಅಳವಡಿಸಲಾಗಿದೆ‘ ಎಂದು ಹೇಳಿದರು.

’ನಗರದ ಸಮೀಪದಲ್ಲಿರುವ ಸುಮಾರು 18 ಕೊಳವೆಬಾವಿಗಳನ್ನು ವಶಕ್ಕೆ ಪಡೆಯಲಾಗಿದೆ. ಹಂತಹಂತವಾಗಿ ನಗರಕ್ಕೆ ‌ನೀರು ಸರಬರಾಜು ಮಾಡುವ ಮೂಲಕ ನೀರಿನ ಸಮಸ್ಯೆಗೆ ಸ್ಪಂದಿಸಲಾಗುವುದು. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಪರೀಕ್ಷಿಸಲು ಮೀಟರ್ ಅಳವಡಿಕೆ ಮಾಡಲಾಗುವುದು‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.