ಚಿಕ್ಕಬಳ್ಳಾಪುರ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ ಘಟನೆ ಖಂಡಿಸಿ ಶನಿವಾರ ನಗರದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಮತ್ತು ಮುಖಂಡರು ಪ್ರತಿಭಟಿಸಿದರು.
ರಕ್ತವನ್ನು ಚೆಲ್ಲುತ್ತೇವೆ ನ್ಯಾಯ ಪಡೆಯುತ್ತೇವೆ, ದೇಶದ್ರೋಹಿ ರಾಕೇಶ್ ಕಿಶೋರ್‌ಗೆ ಧಿಕ್ಕಾರ, ಆತನನ್ನು ಗಡಿಪಾರು ಮಾಡಬೇಕು ಎಂದು ಘೋಷಣೆಗಳನ್ನು ಕೂಗಿದರು. ಆತನ ಪ್ರತಿಕೃತಿಗೆ ಚಪ್ಪಲಿ ಏಟು ನೀಡಿ ದಹಿಸಿದರು.
ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ವೆಂಕಟರಮಣಪ್ಪ ಮಾತನಾಡಿ, ದೇಶದ ಇತಿಹಾಸದಲ್ಲಿ ಎಂದೂ ನಡೆಯದ ಕೃತ್ಯ ನಡೆದಿದೆ. ಸನಾತನಿ ವಕೀಲ ಶೂ ಎಸೆದಿದ್ದು ನಾಚಿಕೆಗೇಡು. ಇದು ದೇಶದಲ್ಲಿ ಕಪ್ಪು ದಿನದ ಸಂಕೇತ. ಹಿಂದೂ ಧರ್ಮದ ಜನರ ವಿರುದ್ಧ ತೀರ್ಪು ಕೊಡುತ್ತಿದ್ದಾರೆ ಎನ್ನುವುದು ರಾಕೇಶ್ ಕಿಶೋರ್ ಆರೋಪ. ಆದರೆ ಆ ಸ್ಥಾನದಲ್ಲಿ ಕುಳಿತವರು ಪಕ್ಷಪಾತ ಮಾಡದೆ ನ್ಯಾಯ ಮತ್ತು ಸಂವಿಧಾನಕ್ಕೆ ಅನುಗುಣವಾಗಿ ತೀರ್ಪು ನೀಡಬೇಕು. ಆ ಕೆಲಸವನ್ನು ಗವಾಯಿ ಅವರು ಮಾಡುತ್ತಿದ್ದಾರೆ ಎಂದರು.
ಗವಾಯಿ ಅವರ ತಂದೆ ಆರ್‌ಪಿಐ ಪಕ್ಷದಿಂದ ಬೆಳೆದವರು. ಉನ್ನತ ಸ್ಥಾನ ಅಲಂಕರಿಸಿದವರು. ಶೂ ಎಸೆತ ಘಟನೆಯನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಖಂಡಿಸಬೇಕು. ಆದರೆ ಆ ರೀತಿಯಲ್ಲಿ ಆಗುತ್ತಿಲ್ಲ ಎನ್ನುವುದು ಬೇಸರದ ಸಂಗತಿ ಎಂದರು.
ದೇಶದಿಂದಲೇ ರಾಕೇಶ್ ಕಿಶೋರ್‌ನನ್ನು ಗಡಿಪಾರು ಮಾಡುವವರೆಗೂ ಆರ್‌ಪಿಐ ಪ್ರತಿಭಟನೆ ಮುಂದುವರಿಸುತ್ತದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರು ಸಹ ಸಂಸತ್ತಿನಲ್ಲಿ ಈ ಬಗ್ಗೆ ಹೋರಾಟ ನಡೆಸುವರು ಎಂದರು.
ರಾಕೇಶ್ ಕಿಶೋರ್ ಬೆಂಬಲಿಸುವ ಮನಸ್ಸುಗಳೂ ನಮ್ಮ ನಡುವೆ ಇವೆ. ಇದರಿಂದ ದೇಶಕ್ಕೆ ಆಪತ್ತು. ಆತನ ಹಿನ್ನೆಲೆ ಏನು, ಎಂದಾದರೂ ಹಿಂದೂ ಧರ್ಮದ ಪರವಾಗಿ ಕಾಣಿಸಿಕೊಂಡಿದ್ದಾನೆಯೇ ಎನ್ನುವುದನ್ನು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ನಮ್ಮ ಬಳಿಯೂ ಶೂ, ಚಪ್ಪಲಿಗಳು ಇವೆ. ಈ ಘಟನೆಯನ್ನು ಸಮರ್ಥಿಸುವವರು ನಮ್ಮ ಎದುರು ಬನ್ನಿ. ನಾವು ನಿಮ್ಮ ಮೇಲೆ ಚಪ್ಪಲಿ, ಶೂ ಎಸೆದು ಅದನ್ನು ಸಮರ್ಥಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಆರ್‌ಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವತ್ಥಪ್ಪ, ಜಿಲ್ಲಾ ಉಪಾಧ್ಯಕ್ಷರಾದ ವೆಂಕಟರಾಮಪ್ಪ, ಮುನಿ ಅಂಜಿನಪ್ಪ, ಯುವ ಘಟಕದ ಅಧ್ಯಕ್ಷ ಹರಿಪ್ರಸಾದ್, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಪ್ರಕಾಶ್, ಮುನಿರಾಜು, ವಿಜಯ್ ಕುಮಾರ್, ರಾಮಕೃಷ್ಣ, ಶ್ರೀನಿವಾಸ್, ರಾಮಾಚಾರಿ, ವೆಂಕಟಪತಿ, ಮಂಜುನಾಥ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.