ಚಿಂತಾಮಣಿ: ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ತೇರ್ಗಡೆಯಾಗಿರುವ ವಿದ್ಯಾರ್ಥಿಗಳು ಹಾಗೂ ಪೋಷಕರು ಪದವಿ ಪೂರ್ವ ಕಾಲೇಜು ಪ್ರವೇಶಾತಿ ಪಡೆಯಲು ಹುಡುಕಾಡುತ್ತಿದ್ದಾರೆ.
ನಾಯಿಕೊಡೆಗಳಂತೆ ಪಿಯು ಕಾಲೇಜುಗಳು ಹುಟ್ಟಿಕೊಂಡಿದ್ದರೂ ಶುಲ್ಕ ಮಾತ್ರ ಬಲು ದುಬಾರಿಯಾಗಿದ್ದು, ಜನಸಾಮಾನ್ಯರು ಶುಲ್ಕದ ಹೊರೆ ಬರಿಸಲಾರದೆ ಪರದಾಡುವಂತಾಗಿದೆ.
ಪಿಯು ಕಾಲೇಜುಗಳ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿವೆ. ಒಂದೆಡೆ ಸರ್ಕಾರಿ ಕಾಲೇಜುಗಳು ಕಡಿಮೆ ಶುಲ್ಕದಲ್ಲಿ ಪ್ರವೇಶಾತಿ ನೀಡುತ್ತಿದ್ದರೂ ವಿದ್ಯಾರ್ಥಿಗಳ ಕೊರತೆ ಎದ್ದು ಕಾಣುತ್ತಿದೆ. ಪೋಷಕರು ಕಾಲೇಜು ಪ್ರವೇಶಾತಿಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಸರ್ಕಾರಿ ಕಾಲೇಜಿಗೆ ದಾಖಲಿಸುವುದು ಕೀಳರಿಮೆ ಎಂಬ ಭಾವನೆಯಲ್ಲಿದ್ದಾರೆ.
ಸರ್ಕಾರಿ ಕಾಲೇಜು ಆಡಳಿತ ವರ್ಗಗಳು ಸಹ ಇತ್ತೀಚಿನ ವರ್ಷಗಳಲ್ಲಿ ಪ್ರವೇಶಾತಿ ಆಂದೋಲನವನ್ನು ನಡೆಸುತ್ತಿವೆ. ಆಯಾ ಕಾಲೇಜು ವ್ಯಾಪ್ತಿಯ ಗ್ರಾಮದ ಮನೆ-ಮನೆಗೂ ಹೋಗಿ ಕಡಿಮೆ ಶುಲ್ಕ ಅಗತ್ಯ ಮೂಲಸೌಲಭ್ಯಗಳಿವೆ. ಮಕ್ಕಳನ್ನು ತಮ್ಮ ಕಾಲೇಜಿಗೆ ಸೇರಿಸಿ ಎಂದು ಮನವಿ ಮಾಡುತ್ತಿದ್ದಾರೆ. ಇದಕ್ಕೆ ನೀರಸ ಮತ್ತು ನಿರ್ಲಕ್ಷ್ಯದ ಪ್ರತಿಕ್ರಿಯೆಯೂ ದೊರೆಯುತ್ತಿದೆ. ಖಾಸಗಿ ಕಾಲೇಜುಗಳ ವ್ಯಾಮೋಹ ಮತ್ತು ಸಮಾಜದಲ್ಲಿನ ಪ್ರತಿಷ್ಠೆಯಿಂದಾಗಿ ಸರ್ಕಾರಿ ಕಾಲೇಜುಗಳ ಪ್ರವೇಶಾತಿ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ ಎಂದು ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಚಿಂತಾಮಣಿ ತಾಲ್ಲೂಕಿನಲ್ಲಿ 6 ಸರ್ಕಾರಿ, 24 ಖಾಸಗಿ ಸೇರಿ ಒಟ್ಟು 30 ಪಿಯು ಕಾಲೇಜುಗಳಿವೆ. ಪರಿಶಿಷ್ಟ ಜಾತಿ/ ವರ್ಗದ ವಿದ್ಯಾರ್ಥಿಗಳು ಹಾಗೂ ಎಲ್ಲಾ ಜನಾಂಗದ ವಿದ್ಯಾರ್ಥಿನಿಯರಿಗೆ ₹255 ಪ್ರವೇಶಾತಿ ಶುಲ್ಕ. ಹಿಂದುಳಿದ ವರ್ಗಗಳಿಗೆ ₹783 ಮತ್ತು ಸಾಮಾನ್ಯ ವರ್ಗದವರಿಗೆ ₹ 1400 ಸರ್ಕಾರಿ ಶುಲ್ಕವಿದೆ. ಖಾಸಗಿ ಕಾಲೇಜುಗಳು ಈ ಶುಲ್ಕವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಖಾಸಗಿ ಕಾಲೇಜುಗಳಲ್ಲಿ ಸುಮಾರು ₹1 ಲಕ್ಷದಿಂದ ₹2 ಲಕ್ಷದವರೆಗೆ ಕಾಲೇಜು ಶುಲ್ಕ ಪಡೆಯುತ್ತಿದ್ದಾರೆ.
ಪ್ರತಿಷ್ಠಿತ ಕಾಲೇಜುಗಳು ಲಕ್ಷಗಳ ಲೆಕ್ಕದಲ್ಲಿ ಶುಲ್ಕ ವಿಧಿಸುತ್ತಿದೆ. ಕಾಲೇಜು ಶುಲ್ಕ ಕೇಳಿ ಹೌಹಾರುವಂತಾಗುತ್ತಿದೆ. ಉನ್ನತ ದರ್ಜೆಯ ಕೋರ್ಸ್‌ಗಳನ್ನು ಓದಿಸಲು ಸಾಲದ ಮೊರೆ ಹೋಗಬೇಕಿದೆ ಎಂಬುದು ಪೋಷಕರ ಅಳಲಾಗಿದೆ.
ನಗರದಲ್ಲಿನ 3-4 ಪಿಯು ಕಾಲೇಜುಗಳನ್ನು ಹೊರತುಪಡಿಸಿ ಇತರೆ ಕಾಲೇಜುಗಳಿಗೆ ಸ್ವಂತ ಕಟ್ಟಡ, ಆಟದ ಮೈದಾನ, ಪ್ರಯೋಗಾಯ, ಗ್ರಂಥಾಲಯ ಮತ್ತಿತರ ಯಾವ ಸೌಲಭ್ಯಗಳಿಲ್ಲ. ಆದರೂ ಆ ಕಾಲೇಜುಗಳ ಶುಲ್ಕ ಮಾತ್ರ ಹೆಚ್ಚಾಗಿದೆ ಎಂಬುದು ಪೋಷಕರ ಮಾತಾಗಿದೆ.
Cut-off box - ಕೋಟ್: ಸರ್ಕಾರಿ ಪಿಯು ಕಾಲೇಜಿನಲ್ಲಿ ಎಲ್ಲ ಸೌಲಭ್ಯವಿದೆ. ಉತ್ತಮ ಫಲಿತಾಂಶವೂ ಪಡೆದಿದೆ. ಗ್ರಾಮಗಳ ಮನೆ-ಮನೆಗೂ ತೆರಳಿ ಪೋಷಕರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಖಾಸಗಿ ಕಾಲೇಜುಗಳ ವ್ಯಾಮೋಹ ಹಾಗೂ ಸಮಾಜದಲ್ಲಿನ ಪ್ರತಿಷ್ಠೆಯಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುನಿರೆಡ್ಡಿ ಪ್ರಾಂಶುಪಾಲ ಬಟ್ಲಹಳ್ಳಿ ಪಿಯು ಕಾಲೇಜು. ಕೋಟ್: ಖಾಸಗಿ ಪಿಯು ಕಾಲೇಜುಗಳು ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ದುಬಾರಿ ಶುಲ್ಕ ವಿಧಿಸುತ್ತಿವೆ. ಖಾಸಗಿ ಕಾಲೇಜುಗಳ ಶುಲ್ಕಕ್ಕೆ ಕಡಿವಾಣ ಹಾಕುವವರೇ ಇಲ್ಲ. ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಪೋಷಕರು ಕಣ್ಣೀರು ಹಾಕುವಂತಾಗಿದೆ. ರಾಮಯ್ಯ ಪೋಷಕಕೈವಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.