ADVERTISEMENT

ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ಜೀವನಮೂರ್ತಿ ಭರವಸೆ

ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಜೀವನಮೂರ್ತಿ ಭರವಸೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 3:54 IST
Last Updated 24 ಫೆಬ್ರುವರಿ 2021, 3:54 IST
ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್.ಇ.ಜೀವನಮೂರ್ತಿ ಮಾತನಾಡಿದರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್.ಇ.ಜೀವನಮೂರ್ತಿ ಮಾತನಾಡಿದರು   

ಚಿಕ್ಕಬಳ್ಳಾಪುರ: ‘ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಬಯಲುಸೀಮೆ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ’ ಎಂದು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್.ಇ.ಜೀವನಮೂರ್ತಿ ಹೇಳಿದರು.

ನಗರದ ಹೊರವಲಯದ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಮಂಡಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

‘ಸರ್ಕಾರ ಚಿತ್ರದುರ್ಗವನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯನ್ನು ರಚಿಸಿದೆ. ಈ ಮಂಡಳಿಯ ಕಾರ್ಯ ವ್ಯಾಪ್ತಿಯು ಕೃಷಿ ಇಲಾಖೆಯಿಂದ ಯೋಜನಾ ಇಲಾಖೆಯ ಆಡಳಿತ ವ್ಯಾಪ್ತಿಗೆ ವರ್ಗಾವಣೆ ಹೊಂದಿರುತ್ತದೆ. ಬಯಲುಸೀಮೆ ಪ್ರದೇಶದ ಅಭಿವೃದ್ಧಿಗಾಗಿ, ಈ ಪ್ರದೇಶಗಳ ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳು ಹಾಗೂ ಇತರೆ ಕಾರ್ಯಗಳಿಗಾಗಿ ಅನುದಾನ ವಿನಿಯೋಗಿಸಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಸರ್ಕಾರ ಮಂಡಳಿಗೆ ಬಿಡುಗಡೆ ಮಾಡುವ ಒಟ್ಟು ಅನುದಾನದಲ್ಲಿ ಶೇ 60 ರಷ್ಟು ಅನುದಾನವನ್ನು ಈ ಭಾಗದಲ್ಲಿ ಅಂತರ್ಜಲ ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ಮತ್ತು ಉಳಿದಂತೆ ಶೇ 40ರಷ್ಟು ಅನುದಾನವನ್ನು ರಸ್ತೆ, ಚರಂಡಿ, ಶಾಲಾ-ಕಾಲೇಜುಗಳ ಅಭಿವೃದ್ಧಿ ಒಳಗೊಂಡಂತೆ ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ ವಿನಿಯೋಗಿಸಲಾಗುತ್ತದೆ ಎಂದರು.

ರಾಜ್ಯದ 8 ಜಿಲ್ಲೆಗಳು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಒಳಪಟ್ಟಿವೆ. ಜಿಲ್ಲೆಗಳ ಪುನರ್ ವಿಂಗಡಣೆಯಾದ ಬಳಿಕ 6 ಜಿಲ್ಲೆಗಳನ್ನು ಸೇರಿಸಿಕೊಂಡು ಒಟ್ಟು 14 ಜಿಲ್ಲೆಗಳ 58 ತಾಲ್ಲೂಕುಗಳ ವ್ಯಾಪ್ತಿಗೆ ಬರುವ 70 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.

ಚೆಕ್‍ಡ್ಯಾಂ ನಿರ್ಮಾಣ, ಕೊಳವೆಬಾವಿ ಮರುಪೂರಣ ಘಟಕ, ದನಕರುಗಳಿಗೆ ನೀರಿನ ವ್ಯವಸ್ಥೆ, ರಸ್ತೆ, ಚರಂಡಿ, ಅಭಿವೃದ್ಧಿ, ಸಣ್ಣ ಕೆರೆಗಳ ಬದು ಮತ್ತು ಕೋಡಿ ನಿರ್ಮಾಣ, ಗೋಕಟ್ಟೆ, ಕಲ್ಯಾಣಿಗಳ ಜೀರ್ಣೋದ್ಧಾರ
ಸೇರಿದಂತೆ ಇತರೆ ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳು, ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ
ಶಾಲಾ ಕೊಠಡಿಗಳು, ಅಂಗನವಾಡಿ ಕಟ್ಟಡಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಮಂಡಳಿ ಮೂಲಕ ಅನುದಾನ ನೀಡಲಾಗುತ್ತಿದೆ ಎಂದರು.

2020-21ನೇ ಸಾಲಿನಲ್ಲಿ(ಜನವರಿ ಅಂತ್ಯದವರೆಗೆ) ಒಟ್ಟು ₹22.73 ಕೋಟಿ ಅನುದಾನ ಲಭ್ಯವಿದ್ದು, ಈ ಪೈಕಿ 265 ಕಾಮಗಾರಿಗಳನ್ನು ಕೈಗೊಂಡು ₹20.48 ಕೋಟಿ ಸಾಧನೆ ಮಾಡಲಾಗಿದೆ. 2020-21ನೇ ಸಾಲಿನ ಮುಂದುವರೆದ ವಿಶೇಷ ಸಾಮಾನ್ಯ ಯೋಜನೆ ₹79.82 ಕೋಟಿ ಮುಂದುವರೆದ ಸಾಮಾನ್ಯ ಯೋಜನೆ ಕಾಮಗಾರಿಗಳಿಗೆ ₹5.40 ಕೋಟಿ ಸೇರಿ ಒಟ್ಟಾರೆ ₹85.22 ಕೋಟಿ ಅನುದಾನದ ಅಗತ್ಯತೆ ಇದೆ. ಆದರೆ, 2020-21ನೇ ಸಾಲಿನ ಆಯವ್ಯಯದಲ್ಲಿ ಸಾಮಾನ್ಯ ಯೋಜನೆಯಡಿ ₹16.72 ಕೋಟಿ ನಿಗದಿಪಡಿಸಿದ ಅನುದಾನ, ₹83 ಲಕ್ಷ ಆರಂಭಿಕ ಶುಲ್ಕ ಸೇರಿ ಒಟ್ಟು ₹17.55 ಕೋಟಿ ಬಳಸಿಕೊಂಡರೂ ₹67.67 ಕೋಟಿ ಕೊರತೆಯಾಗಿದೆ. ಈ ಅನುದಾನವನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರ್ಕಾರ ಒದಗಿಸುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್, ಮಂಡಳಿಯ ಕಾರ್ಯದರ್ಶಿಗಳಾದ ಎಸ್.ವೈ.ಬಸವರಾಜಪ್ಪ, ಉಪ ಕಾರ್ಯದರ್ಶಿ ಕೃಷ್ಣಾನಾಯಕ್ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.