ADVERTISEMENT

ಚಿಕ್ಕಬಳ್ಳಾಪುರ: ಜಾತಿ ನಡುವೆ ಡಿಸಿಸಿ ಅಧ್ಯಕ್ಷ ಗಾದಿ ತೊಯ್ದಾಟ

ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ವೀಕ್ಷಕರ ನೇಮಕ

ಡಿ.ಎಂ.ಕುರ್ಕೆ ಪ್ರಶಾಂತ
Published 5 ಜುಲೈ 2025, 6:30 IST
Last Updated 5 ಜುಲೈ 2025, 6:30 IST
ಬಿ.ಎನ್.ಚಂದ್ರಪ್ಪ
ಬಿ.ಎನ್.ಚಂದ್ರಪ್ಪ   

ಚಿಕ್ಕಬಳ್ಳಾಪುರ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ಕೆಪಿಸಿಸಿ ಮುಂದಾಗಿದೆ. ಈ ಸಂಬಂಧ ಚಿತ್ರದುರ್ಗ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎಂ.ನಾರಾಯಣಸ್ವಾಮಿ ಅವರನ್ನು ವೀಕ್ಷಕರನ್ನಾಗಿ ಕೆಪಿಸಿಸಿಯು ನೇಮಿಸಿದೆ. 

ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೇಶವರೆಡ್ಡಿ ಎರಡು ಅವಧಿ ಪೂರ್ಣಗೊಳಿಸಿದ್ದಾರೆ. ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿಯೂ ಸರ್ಕಾರ ಅವರನ್ನು ನೇಮಿಸಿದೆ. ಕೆಲವು ತಿಂಗಳ ಹಿಂದೆ ಜಿಲ್ಲಾ ಕಾಂಗ್ರೆಸ್‌ಗೆ ಹೊಸ ಸಾರಥಿ ನೇಮಿಸಬೇಕು ಎನ್ನುವ ಕೂಗು ಪಕ್ಷದಲ್ಲಿ ಪ್ರಬಲವಾಗಿ ಕೇಳಿ ಬಂದಿತ್ತು. ಆಗಾಗ್ಗೆ ಹೊಸ ಅಧ್ಯಕ್ಷರ ನೇಮಕದ ವಿಚಾರವು ಪಕ್ಷದಲ್ಲಿ ಚರ್ಚೆಗೆ ಬರುತ್ತಿದೆ. ಈ ಬಗ್ಗೆ ಮುಖಂಡರು ಕೆಪಿಸಿಸಿಗೆ ಮನವಿ ಸಹ ಸಲ್ಲಿಸಿದ್ದರು. 

ಈಗ ವೀಕ್ಷಕರ ನೇಮಕದೊಂದಿಗೆ ಬದಲಾವಣೆಗೆ ಅಖಾಡ ಸಿದ್ಧವಾಗಿದೆ. ವಿಶೇಷವಾಗಿ ಜಾತಿಯ ನಡುವೆಯೇ ಜಿಲ್ಲಾ ಅಧ್ಯಕ್ಷ ಸ್ಥಾನ ತೊಯ್ದಾಡುವ ಸಾಧ್ಯತೆ ದಟ್ಟವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕಾರಣ ಈ ಹಿಂದಿನಿಂದಲೂ ಜಾತಿಗಳ ನಡುವಿನ ತೊಯ್ದಾಟವೇ ಆಗಿರುವ ಕಾರಣ ನೇಮಕಗಳಲ್ಲಿಯೂ ‘ಜಾತಿ’ ಪ್ರಮುಖವಾಗಿ ಗಣನೆಗೆ ಬರುತ್ತದೆ.

ADVERTISEMENT

ಕುರುಬ ಸಮುದಾಯ ನಾಯಕರಾದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಗಂಗರೇಕಾಲುವೆ ನಾರಾಯಣಸ್ವಾಮಿ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಪ್ರಮುಖವಾಗಿ ಕೇಳಿ ಬರುತ್ತಿತ್ತು. ನಾರಾಯಣಸ್ವಾಮಿ ಅವರೇ ಅಧ್ಯಕ್ಷರಾಗಿ ಆಯ್ಕೆಯಾಗುವರು ಎನ್ನುವ ಒಮ್ಮತದ ಅಭಿಪ್ರಾಯ ಕಾಂಗ್ರೆಸ್‌ನಲ್ಲಿತ್ತು. 

ಆದರೆ ಈಗ ಒಕ್ಕಲಿಗ ಸಮುದಾಯದ ನಾಯಕ ಹಾಗೂ ಮಂಚೇನಹಳ್ಳಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎನ್.ಪ್ರಕಾಶ್ ಹೆಸರು ಮುನ್ನೆಲೆಗೆ ಬಂದಿದೆ. ಪ್ರಕಾಶ್ ಆಯ್ಕೆಗೆ ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಪ್ರಮುಖ ಮುಖಂಡರು ಒಲವು ತೋರಿದ್ದಾರೆ ಎನ್ನುತ್ತವೆ ಮೂಲಗಳು. ಪ್ರಕಾಶ್ ಸ್ಥಳೀಯವಾಗಿಯೇ ನೆಲೆ ನಿಂತಿರುವುದು ಮತ್ತು ಮುನ್ನುಗ್ಗುವ ಕಾರಣಕ್ಕೆ ಅವರ ಪರವಾಗಿ ಹೆಚ್ಚು ಒಲವು ವ್ಯಕ್ತವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಬಾಗೇಪಲ್ಲಿ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ, ಮಾಜಿ ಸಚಿವ ಶಿಡ್ಲಘಟ್ಟದ ವಿ.ಮುನಿಯಪ್ಪ ಸೇರಿದಂತೆ ಆ ಕ್ಷೇತ್ರದ ಕಾಂಗ್ರೆಸ್ ನಾಯಕರ ನಿಲುವುಗಳು ಆಯ್ಕೆಯಲ್ಲಿ ಪ್ರಮುಖವಾಗುತ್ತದೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಪ್ರದೀಪ್ ಈಶ್ವರ್ ವಿರುದ್ಧವಿರುವ ಕಾಂಗ್ರೆಸ್ ನಾಯಕರ ಬಣದಲ್ಲಿ ‍ಪಿ.ಎನ್.ಪ್ರಕಾಶ್ ಪ್ರಮುಖರಾಗಿದ್ದಾರೆ. ಪ್ರಕಾಶ್ ಹೆಸರು ಅಧ್ಯಕ್ಷ ಸ್ಥಾನದ ವಿಚಾರವಾಗಿ ಚರ್ಚೆಗೆ ಬರುತ್ತಿದ್ದಂತೆಯೇ ಪ್ರದೀಪ್ ಈಶ್ವರ್ ಬೆಂಬಲಿಗರು ನಾರಾಯಣಸ್ವಾಮಿ ಬೆಂಬಲಿಸಿ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ನಾರಾಯಣಸ್ವಾಮಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಜಾತಿಯೇ ಪ್ರಮುಖವಾಗುವ ಸಾಧ್ಯತೆ ಇದೆ. ಪಕ್ಷ ನಿಷ್ಠೆ, ವರ್ಚಸ್ಸು ನಂತರದ ಸ್ಥಾನ ಪಡೆಯಲಿವೆ.  

ಸ್ಥಳೀಯ ಕೆಪಿಸಿಸಿ ಸದಸ್ಯರು, ಡಿಸಿಸಿ ಅಧ್ಯಕ್ಷರು, ಮಾಜಿ ಶಾಸಕರು, ಮಾಜಿ ಸಂಸದರು, ನಿಗಮ ಮಂಡಳಿ ಅಧ್ಯಕ್ಷರು, ಜಿ.ಪಂ ಮಾಜಿ ಅಧ್ಯಕ್ಷರು, ಸದಸ್ಯರು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಪಕ್ಷದ ಸದಸ್ಯರು, ಜಿಲ್ಲೆಯ ಕಾಂಗ್ರೆಸ್ ಪ್ರಮುಖರ ಸಭೆ ಕರೆದು ಅವರ ಜೊತೆ ಚರ್ಚಿಸಿ ಹೆಸರು ಶಿಫಾರಸು ಮಾಡಬೇಕು ಎಂದು ವೀಕ್ಷಕರಿಗೆ ಕೆಪಿಸಿಸಿ ನಿರ್ದೇಶನ ನೀಡಿದೆ. 

ಈ ಹಿನ್ನೆಲೆಯಲ್ಲಿ ಬಹುಸಂಖ್ಯೆಯ ಪದಾಧಿಕಾರಿಗಳು, ಪಕ್ಷದ ನಾಯಕರ ಅಭಿಪ್ರಾಯವು ಅಧ್ಯಕ್ಷರ ಆಯ್ಕೆಯಲ್ಲಿ ಗಣನೆಗೆ ಬರಲಿದೆ.

‘ಅಭಿಪ್ರಾಯ ಸಂಗ್ರಹಕ್ಕೆ ಚಿಕ್ಕಬಳ್ಳಾಪುರಕ್ಕೆ ಶೀಘ್ರ ಭೇಟಿ’

‘ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿ ದಿನಾಂಕ ನಿಗದಿಪಡಿಸಿಕೊಂಡು ನಮ್ಮ ತಂಡದ ಜೊತೆ ಚಿಕ್ಕಬಳ್ಳಾಪುರಕ್ಕೆ ಶೀಘ್ರದಲ್ಲಿಯೇ ಭೇಟಿ ನೀಡುವೆ’ ಎಂದು ವೀಕ್ಷಕ ಬಿ.ಎನ್.ಚಂದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ಅಧ್ಯಕ್ಷರ ನೇಮಕಕ್ಕೆ ಯಾವುದೇ ಕಾಲಮಿತಿ ನೀಡಿಲ್ಲ. ಪಕ್ಷವು ಯಾರ ಅಭಿಪ್ರಾಯ ಸಂಗ್ರಹಿಸಬೇಕು ಎಂದು ತಿಳಿಸಿದೆಯೊ ಅವರ ಅಭಿಪ್ರಾಯ ಪಡೆಯಲಾಗುವುದು. ಅಗತ್ಯವಿದ್ದರೆ ಒಬ್ಬೊಬ್ಬರನ್ನೇ ಕರೆಯಿಸಿ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು. ‘ಜಾತಿ ಪಕ್ಷ ನಿಷ್ಠೆ ಮಾನದಂಡವಾಗಲಿದೆ. ನಾವು ಗೋಪ್ಯವಾಗಿ ನೀಡಿದ ಹೆಸರುಗಳಲ್ಲಿ ಕೆಪಿಸಿಸಿ ಅಧ್ಯಕ್ಷರು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವರು ಎಂದು ಹೇಳಿದರು.

ಮುಚ್ಚಿದ ಲಕೋಟೆಯಲ್ಲಿ ಶಿಫಾರಸು

ತಾವು ಶಿಫಾರಸು ಮಾಡುವ ವ್ಯಕ್ತಿಯು ಜಿಲ್ಲಾ ಮಟ್ಟದಲ್ಲಿ ಸಕ್ರಿಯವಾಗಿ ಪಕ್ಷದಲ್ಲಿ ಗುರುತಿಸಿಕೊಂಡಿರಬೇಕು. ಸಂಘಟನಾ ಸಾಮರ್ಥ್ಯ ಪಕ್ಷದಲ್ಲಿ ಹಿರಿತನ ಪ್ರಾಮಾಣಿಕತೆ ಪಕ್ಷ ನಿಷ್ಠೆ ಮಾನದಂಡವಾಗಿ ಪರಿಗಣಿಸಬೇಕು. ಅಂತಹ ವ್ಯಕ್ತಿಗಳ ಎರಡು ಅಥವಾ ಮೂರು ಹೆಸರನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ವೀಕ್ಷಕರಿಗೆ ನಿರ್ದೇಶನ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.