ಚಿಕ್ಕಬಳ್ಳಾಪುರ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಸಂಬಂಧ ಕೆಪಿಸಿಸಿ ನೇಮಿಸಿರುವ ವೀಕ್ಷಕರು ಮೂರು ತಿಂಗಳಾದರೂ ಜಿಲ್ಲೆಗೆ ಕಾಲಿಟ್ಟಿಲ್ಲ! ಇದು ಕಾಂಗ್ರೆಸ್ ಪಕ್ಷದೊಳಗಿನ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಗೊಂದಲಕ್ಕೂ ಕಾರಣವಾಗಿದೆ.
ಜುಲೈ 4ರಂದು ಕೆಪಿಸಿಸಿಯು ಜಿಲ್ಲಾ ಅಧ್ಯಕ್ಷರ ಆಯ್ಕೆ ಸಂಬಂಧ ವೀಕ್ಷಕರನ್ನು ನೇಮಿಸಿತ್ತು. ಚಿತ್ರದುರ್ಗ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎಂ.ನಾರಾಯಣಸ್ವಾಮಿ ವೀಕ್ಷಕರಾಗಿದ್ದಾರೆ.
ಈ ಇಬ್ಬರು ವೀಕ್ಷಕರ ನೇಮಕವಾಗುತ್ತಲೇ ಜಿಲ್ಲಾ ಕಾಂಗ್ರೆಸ್‌ನಲ್ಲಿ ಚಟುವಟಿಕೆಗಳು ಸಹ ಜೋರಾಗಿದ್ದವು. ಹೊಸ ಸಾರಥಿ ಯಾರು ಆಗುತ್ತಾರೆ. ಯಾರ ಪರವಾಗಿ ಹೆಚ್ಚು ಅಭಿಪ್ರಾಯಗಳು ಮತ್ತು ಒಲವು ಮೂಡುತ್ತದೆ ಎಂದು ಪಕ್ಷದಲ್ಲಿ ಚರ್ಚೆ ಆಗುತ್ತಿತ್ತು. ಆದರೆ ವೀಕ್ಷಕರು ಇಂದಿಗೂ ಜಿಲ್ಲೆಗೆ ಬಂದು ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿಲ್ಲ.
ಸ್ಥಳೀಯ ಕೆಪಿಸಿಸಿ ಸದಸ್ಯರು, ಡಿಸಿಸಿ ಅಧ್ಯಕ್ಷರು, ಮಾಜಿ ಶಾಸಕರು, ಮಾಜಿ ಸಂಸದರು, ನಿಗಮ ಮಂಡಳಿ ಅಧ್ಯಕ್ಷರು, ಜಿ.ಪಂ ಮಾಜಿ ಅಧ್ಯಕ್ಷರು, ಸದಸ್ಯರು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಪಕ್ಷದ ಸದಸ್ಯರು, ಜಿಲ್ಲೆಯ ಕಾಂಗ್ರೆಸ್ ಪ್ರಮುಖರ ಸಭೆ ಕರೆದು ಅವರ ಜೊತೆ ಚರ್ಚಿಸಿ ಹೆಸರು ಶಿಫಾರಸು ಮಾಡಬೇಕು ಎಂದು ವೀಕ್ಷಕರಿಗೆ ಕೆಪಿಸಿಸಿ ನಿರ್ದೇಶನ ನೀಡಿತ್ತು. ಅಭಿಪ್ರಾಯ ಸಂಗ್ರಹಿಸಲು ಮತ್ತು ಅಧ್ಯಕ್ಷರ ಆಯ್ಕೆಗೆ ಯಾವುದೇ ಕಾಲಮಿತಿಯನ್ನು ಕೆಪಿಸಿಸಿ ನಿಗದಿಗೊಳಿಸಿರಲಿಲ್ಲ. ಆದರೆ ವೀಕ್ಷಕರ ನೇಮಕವು ಆಕಾಂಕ್ಷಿಗಳಲ್ಲಿ ಆಸೆಯನ್ನು ಗರಿಗೆದರಿಸಿತ್ತು.
ತಾವು ಶಿಫಾರಸು ಮಾಡುವ ವ್ಯಕ್ತಿಯು ಜಿಲ್ಲಾ ಮಟ್ಟದಲ್ಲಿ ಸಕ್ರಿಯವಾಗಿ ಪಕ್ಷದಲ್ಲಿ ಗುರುತಿಸಿಕೊಂಡಿರಬೇಕು. ಸಂಘಟನಾ ಸಾಮರ್ಥ್ಯ, ಪಕ್ಷದಲ್ಲಿ ಹಿರಿತನ, ಪ್ರಾಮಾಣಿಕತೆ, ಪಕ್ಷ ನಿಷ್ಠೆ ಮಾನದಂಡವಾಗಿ ಪರಿಗಣಿಸಬೇಕು. ಅಂತಹ ವ್ಯಕ್ತಿಗಳ ಎರಡು ಅಥವಾ ಮೂರು ಹೆಸರನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ವೀಕ್ಷಕರಿಗೆ ನಿರ್ದೇಶನ ನೀಡಿದ್ದರು.
ವೀಕ್ಷಕರಾಗಿ ನೇಮಕವಾದ ವೇಳೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದ ಬಿ.ಎನ್.ಚಂದ್ರಪ್ಪ, ‘ಅಭಿಪ್ರಾಯ ಸಂಗ್ರಹಕ್ಕೆ ಚಿಕ್ಕಬಳ್ಳಾಪುರಕ್ಕೆ ಶೀಘ್ರ ಭೇಟಿ ನೀಡಲಾಗುವುದು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿ ದಿನಾಂಕ ನಿಗದಿಪಡಿಸಿಕೊಂಡು ನಮ್ಮ ತಂಡದ ಜೊತೆ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡುವೆ’ ಎಂದಿದ್ದರು. ಹೀಗೆ ಹೇಳಿ ಮೂರು ತಿಂಗಳಾಗಿದೆ.
ಎರಡು ಅವಧಿ ಪೂರ್ಣಗೊಳಿಸಿರುವ ಕೇಶವ ರೆಡ್ಡಿ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೇಶವರೆಡ್ಡಿ ಎರಡು ಅವಧಿ ಪೂರ್ಣಗೊಳಿಸಿದ್ದಾರೆ. ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿಯೂ ಸರ್ಕಾರ ಅವರನ್ನು ನೇಮಿಸಿದೆ.
ಲೋಕಸಭೆ ಚುನಾವಣೆ ಪೂರ್ಣವಾದ ನಂತರ ಜಿಲ್ಲಾ ಕಾಂಗ್ರೆಸ್‌ಗೆ ಹೊಸ ಸಾರಥಿ ನೇಮಿಸಬೇಕು ಎನ್ನುವ ಕೂಗು ಪಕ್ಷದಲ್ಲಿ ಪ್ರಬಲವಾಗಿ ಕೇಳಿ ಬಂದಿತ್ತು. ಆಗಾಗ್ಗೆ ಹೊಸ ಅಧ್ಯಕ್ಷರ ನೇಮಕದ ವಿಚಾರವು ಪಕ್ಷದಲ್ಲಿ ಚರ್ಚೆಗೆ ಬರುತ್ತಿದೆ. ಈ ಬಗ್ಗೆ ಮುಖಂಡರು ಕೆಪಿಸಿಸಿಗೆ ಮನವಿ ಸಹ ಸಲ್ಲಿಸಿದ್ದರು.
ಇಷ್ಟೆಲ್ಲದರ ನಡುವೆ ವೀಕ್ಷಕರ ನೇಮಕದೊಂದಿಗೆ ಅಧ್ಯಕ್ಷರ ಬದಲಾವಣೆಗೆ ಅಖಾಡ ಸಿದ್ಧವಾಗಿದೆ ಎಂದೇ ಭಾವಿಸಲಾಗಿತ್ತು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಗಂಗರೇಕಾಲುವೆ ನಾರಾಯಣಸ್ವಾಮಿ ಹಾಗೂ ಮಂಚೇನಹಳ್ಳಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎನ್.ಪ್ರಕಾಶ್ ಹೆಸರು ಅಧ್ಯಕ್ಷ ಸ್ಥಾನಕ್ಕೆ ಪ್ರಮುಖವಾಗಿ ಚರ್ಚೆಯಲ್ಲಿವೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕರಾದ ಎಸ್.ಎನ್.ಸುಬ್ಬಾರೆಡ್ಡಿ, ಪ್ರದೀಪ್ ಈಶ್ವರ್, ಮಾಜಿ ಸಚಿವರಾದ ಎನ್.ಎಚ್.ಶಿವಶಂಕರ ರೆಡ್ಡಿ, ಶಿಡ್ಲಘಟ್ಟದ ವಿ.ಮುನಿಯಪ್ಪ ಸೇರಿದಂತೆ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರ ನಿಲುವುಗಳು ಆಯ್ಕೆಯಲ್ಲಿ ಪ್ರಮುಖವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.