ADVERTISEMENT

ಡೋಂಗಿ ರಾಜಕಾರಣ ನಡೆಯದು: ಶಾಸಕ ಎನ್‌.ಎಚ್.ಶಿವಶಂಕರ ರೆಡ್ಡಿ

ಇಂಧನ ಬೆಲೆ ಹೆಚ್ಚಳದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ; ಸುಧಾಕರ್ ವಿರುದ್ಧ ಶಿವಶಂಕರರೆಡ್ಡಿ ತೀವ್ರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 5:40 IST
Last Updated 16 ಜೂನ್ 2021, 5:40 IST
ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಖಂಡಿಸಿ ಕೇಂದ್ರ ಸರ್ಕಾರದ ಅಣಕು ಶವಸಂಸ್ಕಾರ ನಡೆಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು
ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಖಂಡಿಸಿ ಕೇಂದ್ರ ಸರ್ಕಾರದ ಅಣಕು ಶವಸಂಸ್ಕಾರ ನಡೆಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಆಡಳಿತ ಕುಸಿದಿದೆ. ಅಭಿವೃದ್ಧಿ ವಿಚಾರದಲ್ಲಿ ಪಕ್ಷಪಾತ ಹೆಚ್ಚಿದೆ. ಸಚಿವರ ಡೋಂಗಿ ರಾಜಕಾರಣ ಬಹಳ ದಿನ ನಡೆಯುವುದಿಲ್ಲ ಎಂದು ಶಾಸಕ ಎನ್‌.ಎಚ್.ಶಿವಶಂಕರ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಖಂಡಿಸಿ ಕಾಂಗ್ರೆಸ್ ಪಕ್ಷವು ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಕಳೆದ ಚುನಾವಣೆಯಲ್ಲಿ ನಾವು ಸ್ವಲ್ಪ ಯಾಮಾರಿದೆವು. ನಮ್ಮಿಂದ ಹಣ ಒದಗಿಸಲು ಸಾಧ್ಯವಾಗಲಿಲ್ಲ. ಮುಂದಿನ ಚುನಾವಣೆಯಲ್ಲಿ ಹಣಕ್ಕೆ ಮಣೆ ಹಾಕಿದರೆ ನಿಮ್ಮ ಕಥೆ ಗೋವಿಂದ. ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಮಾಧ್ಯಮಗಳ ಎದುರು ಮಾತನಾಡುವುದರಲ್ಲಿ ಇವರು ನೈಪುಣ್ಯ ಹೊಂದಿದ್ದಾರೆ. ಆದರೆ ಅಭಿವೃದ್ಧಿಗೆ ಕೊಡುಗೆ ಏನಿಲ್ಲ ಎಂದು ಟೀಕಿಸಿದರು.

ADVERTISEMENT

ಇವರು ಈ ಹಿಂದೆ ಎತ್ತಿನಹೊಳೆ ಯೋಜನೆ ಬೇಡ ಪರಮಶಿವಯ್ಯ ವರದಿ ಅನುಷ್ಠಾನ ಮಾಡಬೇಕು ಎಂದು ಹೇಳಿದ್ದರು. ಎತ್ತಿನಹೊಳೆಗೆ ವಿರೋಧ ಮಾಡಿದ್ದರು. ಎತ್ತಿನಹೊಳೆ ಯೋಜನೆಗೆ ಹಣ ಮಂಜೂರು ಮಾಡಿದ್ದೇ ಸಿದ್ದರಾಮಯ್ಯ ಸರ್ಕಾರ. ಬಿಜೆಪಿ ಸರ್ಕಾರ ಎತ್ತಿನಹೊಳೆ ಯೋಜನೆಯ ಬಗ್ಗೆ ಮಾತನಾಡುತ್ತಿದೆ. ಆದರೆ ಬಜೆಟ್‌ನಲ್ಲಿ ಯೋಜನೆ ಸಾಕಾರಕ್ಕೆ ಹಣವನ್ನೇ ಮೀಸಲಿಟ್ಟಿಲ್ಲ ಎಂದರು.

ಎಚ್‌.ಎನ್.ವ್ಯಾಲಿ ಯೋಜನೆ ಮಂಜೂರಾಗಿದ್ದು ಸಹ ಟಿ.ಬಿ.ಜಯಚಂದ್ರ ನೀರಾವರಿ ಸಚಿವರಾಗಿದ್ದದ ವೇಳೆ. ಆದರೆ ಈಗ ಸಚಿವರು ಆಧುನೀಕ ಭಗೀರಥನ ಡ್ರೆಸ್‌ನಲ್ಲಿ ಓಡಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೋವಿಡ್ ಲಸಿಕೆ ನೀಡುವಲ್ಲಿ ದಂಧೆ ನಡೆಯುತ್ತಿದೆ. ರೆಮ್‌ಡಿಸೀವರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಎಷ್ಟು ಜನರಿಗೆ ಕೋವಿಡ್ ಚಿಕಿತ್ಸೆ ನೀಡಿದ್ದಾರೆ, ಎಷ್ಟು ಹಣ ವೆಚ್ಚವಾಗಿದೆ ಎನ್ನುವ ಲೆಕ್ಕವನ್ನು ಜನರಿಗೆ ಆರೋಗ್ಯ ಸಚಿವರು ಮತ್ತು ಸರ್ಕಾರ ನೀಡಬೇಕು ಎಂದರು.

ಬ್ಯಾಂಕ್‌ ಲೂಟಿಕೋರರಿಗೆ ನೆರವು: ದೇಶದ ಬ್ಯಾಂಕ್‌ಗಳನ್ನು ಲೂಟಿ ಮಾಡಿದ 50 ಮಂದಿ ಗುಜರಾತ್‌ನವರಾಗಿದ್ದಾರೆ. ಇವರಿಗೆ ಕೇಂದ್ರ ಸರ್ಕಾರ ನೆರವು ನೀಡಿದೆ. ಆದಾನಿ ಮತ್ತು ಅಂಬಾನಿ ಉದ್ಯಮಗಳ ಆಸ್ತಿ ಹೆಚ್ಚುತ್ತಿದೆ. ಇವರು ಶ್ರೀಮಂತರಾಗುತ್ತಿದ್ದಾರೆ. ಕಾಂಗ್ರೆಸ್ ತನ್ನ ಆಡಳಿತ ಅವಧಿಯಲ್ಲಿ ಸ್ಥಾಪಿಸಿದ ಸಂಸ್ಥೆಗಳನ್ನು ಈ ಉದ್ಯಮಿಗಳಿಗೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮಾರಾಟ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಟಿ.ಬಿ.ಜಯಚಂದ್ರ ಟೀಕಿಸಿದರು.

ನರೇಂದ್ರ ಮೋದಿ ನೇತೃತ್ವದ ಈ 7 ವರ್ಷಗಳ ಆಡಳಿತದಲ್ಲಿ ದೇಶದಲ್ಲಿ 380 ದಶ ಲಕ್ಷ ಉದ್ಯೋಗಗಳು ನಷ್ಟವಾಗಿವೆ. ಶೇ 40ರಷ್ಟು ಜನರು ಬಡತನ ರೇಖೆಗಿಂತ ಕೆಳಗಿಳಿದಿದ್ದಾರೆ. ಇವರಿಗೆ ಅಧಿಕಾರ ನಡೆಸುವ ನೈತಿಕತೆ ಇಲ್ಲ ಎಂದರು.

ಶಾಸಕ ಸುಬ್ಬಾರೆಡ್ಡಿ, ಕೇಂದ್ರ ಸರ್ಕಾರ ಉದ್ದಿಮೆಗಳ ಜತೆ ಶಾಮೀಲಾಗಿದೆ. ಇವರಿಗೆ ಬಡವರ ಬಗ್ಗೆ ಕರುಣೆಯೇ ಇಲ್ಲ. ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಪೆಟ್ರೋಲ್ ಬೆಲೆ ಹೆಚ್ಚಿತು ಎಂದು ಇವರು ದೇಶದಾದ್ಯಂತ ಪ್ರತಿಭಟಿಸಿದರು. ಆದರೆ ಈಗ ₹ 100 ಬೆಲೆ ದಾಟಿದೆ ಎಂದರು.

ಬಿ.ಬಿ.ರಸ್ತೆಯ ಭರತ್ ಪೆಟ್ರೋಲ್ ಬಂಕ್ ಮುಂದೆ ಜಮಾಯಿಸಿದ ಕಾರ್ಯಕರ್ತರು ಬೈಕ್‌ಗೆ ಬಿಳಿಬಟ್ಟೆ ಹೊದ್ದಿಸಿ ಹೂ, ಕುಂಕುಮವಿಟ್ಟು ಪೂಜೆ ಸಲ್ಲಿಸಿದರು. ಕೇಂದ್ರ ಸರ್ಕಾರದ ಅಣಕು ಶವಸಂಸ್ಕಾರ ನಡೆಸಿದರು. ಬಾಯಿಬಡಿದುಕೊಳ್ಳುತ್ತ ಘೋಷಣೆಗಳನ್ನು ಕೂಗಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಮಾಜಿ ಶಾಸಕ ಮುನಿಯಪ್ಪ, ಎನ್‌ಎಸ್‌ಯುಐ ರಾಜ್ಯ ಸಂಚಾಲಕ ಮುನೀಂದ್ರ, ಮುಖಂಡರಾದ ಯಲುವಳ್ಳಿ ರಮೇಶ್, ಮುನೇಗೌಡ, ಅಡ್ಡಗಲ್ ಶ್ರೀಧರ್, ರಾಜಶೇಖರ್, ಸುಮಿತ್ರಾ, ಲಾಯರ್ ನಾರಾಯಣಸ್ವಾಮಿ, ಅಂಬರೀಷ್, ಮಮತಾ ಮೂರ್ತಿ, ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.