ADVERTISEMENT

ಮಂಚೇನಹಳ್ಳಿ ಗ್ರಾ.ಪಂ ‘ಕೈ‌’ ವಶ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 7:57 IST
Last Updated 1 ಏಪ್ರಿಲ್ 2021, 7:57 IST
ಮಂಚೇನಹಳ್ಳಿ ಗ್ರಾ.ಪಂ ಯಲ್ಲಿ ಅತ್ಯಧಿಕ ಸ್ಥಾನಗಳನ್ನು ಪಡೆದ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಮಂಚೇನಹಳ್ಳಿ ಗ್ರಾ.ಪಂ ಯಲ್ಲಿ ಅತ್ಯಧಿಕ ಸ್ಥಾನಗಳನ್ನು ಪಡೆದ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.   

ಗೌರಿಬಿದನೂರು: ತಾಲ್ಲೂಕಿನ ‌ಮಂಚೇನಹಳ್ಳಿ ಗ್ರಾ.ಪಂ ಚುನಾವಣಾ ಫಲಿತಾಂಶವು ಬುಧವಾರ ಪ್ರಕಟಗೊಂಡಿದ್ದು, ಗ್ರಾ.ಪಂ ವ್ಯಾಪ್ತಿಯ 6 ವಾರ್ಡ್‌ಗಳಲ್ಲಿನ ಒಟ್ಟು 20 ಸದಸ್ಯರಿಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 12, ಬಿಜೆಪಿ ಬೆಂಬಲಿತ 5 ಹಾಗೂ 3 ಪಕ್ಷೇತರರ ಅಭ್ಯರ್ಥಿಗಳು ಜಯಗಳಿಸಿ ದಾಖಲೆ ನಿರ್ಮಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ರವರ ಕನಸಿನ ಕೂಸಾಗಿದ್ದ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿನ ಮಂಚೇನಹಳ್ಳಿಯನ್ನು ಬಿಜೆಪಿ ಸರ್ಕಾರದಲ್ಲಿ ನೂತನ ತಾಲ್ಲೂಕು ‌ಕೇಂದ್ರವಾಗಿ ಘೋಷಣೆ ಮಾಡಿಸಿದ್ದರು. ನಂತರದ ದಿನಗಳಲ್ಲಿ ಈ‌ ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಆಧ್ಯತೆ ನೀಡಿದ್ದರು. ಇವರಿಗೆ ಬೆಂಬಲವಾಗಿ ಅನೇಕ‌ ನಾಯಕರು ಮಾತೃ ಪಕ್ಷಗಳನ್ನು ತೊರೆದು ಕಮಲ ಪಾಳಯಕ್ಕೆ ಸೇರ್ಪಡೆಯಾಗಿದ್ದರು.‌

ಸಚಿವರಿಗೆ ಪ್ರತಿ ವಿಧಾನಸಭೆ ಚುನಾವಣೆ ವೇಳೆ ಮಂಚೇನಹಳ್ಳಿ ವ್ಯಾಪ್ತಿಯಲ್ಲಿ ಕಾರ್ಯಕರ್ತರು‌ ಮತ್ತು ಮತದಾರರು ಹೆಚ್ಚಿನ ಬಹುಮತದ ಮತಗಳನ್ನು ‌ನೀಡಿ ಗೆಲುವಿನ ದಡ ಸೇರಿಸುತ್ತಿದ್ದರು. ಈ ಭಾಗದಲ್ಲಿನ ಒಟ್ಟು 7 ಗ್ರಾ.ಪಂ ಗಳಲ್ಲಿ ‌ಈಗಾಗಲೇ 6 ಪಂಚಾಯಿತಿಗಳು ಕಮಲ ಪಾಳಯದ ವಶವಾಗಿದ್ದವು. ಉಳಿದಂತೆ ನೂತನ ತಾಲ್ಲೂಕು ‌ಕೇಂದ್ರದಲ್ಲಿದ್ದ ಮಂಚೇನಹಳ್ಳಿ ಗ್ರಾ.ಪಂ ಯನ್ನು ತನ್ನ ತೆಕ್ಕೆಗೆ ಪಡೆಯಲು ಸಚಿವರು ಹಾಗೂ ಅವರ ಬೆಂಬಲಿಗರಿಗೆ ಈ ಚುನಾವಣೆಯು ಪ್ರತಿಷ್ಠೆಯ ಕಣವಾಗಿತ್ತು. ಆದರೆ ಈ ಭಾಗದ ಮತದಾರರು ಕಳೆದ 7-8 ವರ್ಷಗಳಿಂದ ಅಭಿವೃದ್ಧಿ ‌ಕಾಣದೆ, ಜ್ವಲಂತ ಸಮಸ್ಯೆಗಳು‌ ಪರಿಹಾರ ಕಾಣದೆ ಕೇವಲ‌ ಭರವಸೆಯಲ್ಲೆ ದಿನದೂಡುತ್ತಿದ್ದ ಜನಪ್ರತಿನಿಧಿಗಳಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

ADVERTISEMENT

ಫಲಿತಾಂಶದ ‌ಬಳಿಕ ಕೇವಲ 5 ಸ್ಥಾನಗಳನ್ನು ಮಾತ್ರ ಪಡೆದಿರುವ ಬಿಜೆಪಿ ನಾಯಕರು ಕಂಗೆಟ್ಟಿದ್ದು, ಸಚಿವರಿಗೆ ನೀಡಿದ್ದ ಭರಪೂರ ಭರವಸೆಗಳು ಹುಸಿಯಾಗಿದ್ದು, ಕನಿಷ್ಠ ಗ್ರಾ.ಪಂ ಅಧಿಕಾರವನ್ನು ಹಿಡಿಯಲು ಸಾಧ್ಯವಾಗುಷ್ಟು ಸ್ಥಾನಗಳನ್ನು ಪಡೆಯಲು ಸಾಧ್ಯವಾಗದೆ ನಿರಾಶರಾಗಿದ್ದು, ಪರ್ಯಾಯ ಚಿಂತನೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಇನ್ನು ದಶಕಗಳಿಂದಲೂ ‌ಕೂಡ ಮಂಚೇನಹಳ್ಳಿ ಹೋಬಳಿಯು ಕಾಂಗ್ರೆಸ್ ‌ನ ಭದ್ರಕೋಟೆಯಾಗಿದ್ದು, ಈ‌ ಭಾಗದ ಜನರನ್ನು ಕೆಲ ಜನಪ್ರತಿನಿಧಿಗಳು ಹಣದಾಸೆಗಾಗಿ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರು. ಇದರಿಂದ ಎಚ್ಚೆತ್ತ ನಾಗರೀಕರು ಅವಕಾಶಕ್ಕಾಗಿ ಕಾಯುತ್ತಾ ಈ‌ ಬಾರಿಯ ಗ್ರಾ.ಪಂ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿ ಜನಮತದ ಅಭಿಪ್ರಾಯವನ್ನು ಹೊರ ತಂದಂತಿದೆ.

ಸಚಿವರ ನೇತೃತ್ವದಲ್ಲಿ ಬಿಜೆಪಿ ಪಾಳಯ ಶಕ್ತವಾಗುವ ಜತೆಗೆ ಈ‌ ಭಾಗದಲ್ಲಿನ ಕಾಂಗ್ರೆಸ್ ‌ಹಾಗೂ ಜೆಡಿಎಸ್ ಕಾರ್ಯಕರ್ತರನ್ನು ಅವರು ತೀವ್ರವಾಗಿ ಕಡೆಗಣಿಸಿದ್ದರು. ಇದರಿಂದ ಸಮಯಕ್ಕಾಗಿ ಕಾಯುತ್ತಿದ್ದ ಅವರುಗಳು ಈ‌ ಬಾರಿಯ ಗ್ರಾ.ಪಂ ಚುನಾವಣೆಯಲ್ಲಿ ಜೆಡಿಎಸ್ ಮತ್ತು‌ ಕಾಂಗ್ರೆಸ್ ಕಾರ್ಯಕರ್ತರು ಮೈತ್ರಿ‌ ಮಾಡಿಕೊಂಡು ಚುನಾವಣೆಯಲ್ಲಿ ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅತ್ಯಧಿಕ 12 ಸ್ಥಾನಗಳನ್ನು ಪಡೆಯುವ ಮೂಲಕ‌ ಕ್ಷೇತ್ರದಲ್ಲಿ ರಾಜಕೀಯ ‌ಪುನರ್ಜನ್ಮ‌ ಪಡೆದಂತಾಗಿದ್ದಾರೆ.

ಒಟ್ಟು 20 ಸ್ಥಾನಗಳಿಗಾಗಿ ಚುನಾವಣೆಯಲ್ಲಿ 54 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 5,342 ಚಲಾವಣೆಯಾದ ಒಟ್ಟು ಮತಗಳು. ಪುರುಷ - 2626 ; ಮಹಿಳೆ - 2716.

ವಿಜೇತರ ಪಟ್ಟಿ: 1 ನೇ ವಾರ್ಡ್‌ ರಾಮಾಂಜಿನಪ್ಪ, 2 ನೇ ವಾರ್ಡ್ ನಾರಾಯಣಸ್ವಾಮಿ, 3ನೇ ವಾರ್ಡ್ ಗಂಗಾದೇವಿ, 4ನೇ ವಾರ್ಡ್
ಜೆ.ವಿ‌.ನಾರಾಯಣಪ್ಪ, 5ನೇ ವಾರ್ಡ್ ಯಶೋಧ ಶ್ರೀಧರ್, 6ನೇ ವಾರ್ಡ್ ನರಸಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.