ADVERTISEMENT

ಗುಡಿಬಂಡೆ: ಗ್ಯಾರೇಜ್‌ನಲ್ಲೇ ಉಳಿದ ನಿರ್ಮಾಣ ಯಂತ್ರ

ಪಟ್ಟಣ ಪಂಚಾಯಿತಿ ಕೆಲಸಕ್ಕೆ ಖಾಸಗಿ ಯಂತ್ರ ಬಳಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2025, 6:35 IST
Last Updated 25 ಮೇ 2025, 6:35 IST
ಪಟ್ಟಣ ಪಂಚಾಯಿತಿಯಿಂದ ಖರೀದಿಸಿದ ಯಂತ್ರ
ಪಟ್ಟಣ ಪಂಚಾಯಿತಿಯಿಂದ ಖರೀದಿಸಿದ ಯಂತ್ರ   

ಗುಡಿಬಂಡೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಾಜಕಾಲುವೆ, ಚರಂಡಿ ಹಾಗೂ ಇನ್ನಿತರ ಪಟ್ಟಣ ಪಂಚಾಯಿತಿ ಕೆಲಸಕ್ಕಾಗಿ ಲಕ್ಷಾಂತರ ರೂ ವೆಚ್ಚ ಮಾಡಿ ಪಟ್ಟಣ ಪಂಚಾಯಿತಿಗೆ ಮೂರು ವರ್ಷದ ಹಿಂದೆ ತರಿಸಿದ್ದ ಯಂತ್ರವು ಸರಿಯಾದ ನಿರ್ವಹಣೆ ಇಲ್ಲದೆ ದುರಸ್ತಿಗಾಗಿ ಇಟ್ಟು ಐದು ತಿಂಗಳಾಗಿದೆ.

ಗ್ಯಾರೇಜ್ ಅವರಿಗೆ ಪಾವತಿ ಮಾಡಬೇಕಾದ ಹಣವನ್ನು ಪಾವತಿಸದೇ ನಿರ್ಲಕ್ಷ್ಯ ವಹಿಸಿ ಯಂತ್ರವು ಗ್ಯಾರೇಜಿನಲ್ಲೇ ಉಳಿದಿದೆ. ಇದರಿಂದ ಪಟ್ಟಣ ಪಂಚಾಯಿತಿಯ ಸ್ವಚ್ಛತಾ ಕೆಲಸಕ್ಕೆ ಹಾಗೂ ಇತರೆ ಕೆಲಸಗಳಿಗೆ ತೊಂದರೆಯಾಗಿದೆ. ಪಟ್ಟಣ ಪಂಚಾಯಿತಿಯ ಯಂತ್ರ ಇದ್ದರೂ ಇದೀಗ ಖಾಸಗಿ ಯಂತ್ರವನ್ನು ಬಳಸುವಂತಾಗಿದೆ.

ಗುಡಿಬಂಡೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 8 ಎಕರೆ ಜಾಗದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಗ್ರಾಮದ ಬಳಿ ಕಲ್ಲು, ಬಂಡೆ ಚರಂಡಿ ನಿರ್ಮಿಸಲು ಹಾಗೂ ಟ್ರ್ಯಾಕ್ಟರ್‌ಗಳಿಗೆ ಮಣ್ಣು ತುಂಬಲು ಸ್ವಂತ ಪಟ್ಟಣ ಪಂಚಾಯಿತಿಯ ಯಂತ್ರ ಸಹಕಾರಿ ಆಗುತ್ತಿತ್ತು. ಅದನ್ನು ಸರಿಯಾದ ನಿರ್ವಹಣೆ ಮಾಡಲಾಗದೆ ಅದು ಕೆಟ್ಟು ಹೋಗಿದೆ. ಇದೀಗ ಗ್ಯಾರೇಜ್‌ನಲ್ಲಿದೆ ಎಂದು ಖಾಸಗಿ ಯಂತ್ರದ ಮುಖಾಂತರ ಕೆಲಸ ಮಾಡುತ್ತಿದ್ದು ಲಕ್ಷಗಟ್ಟಲೆ ವೆಚ್ಚದ ಯಂತ್ರವನ್ನು ಕೂಡಲೇ ಸರಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ADVERTISEMENT

ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಭಾ ಶಿರಿನ್ ಮಾತನಾಡಿ, ಪಟ್ಟಣ ಪಂಚಾಯಿತಿ ಯಂತ್ರ ಕೆಟ್ಟುಹೋಗಿದೆ. ಅದಕ್ಕೆ ಸರಿಸುಮಾರು ₹90 ಸಾವಿರದಿಂದ ₹1 ಲಕ್ಷದವರೆಗೂ ದುರಸ್ತಿಗೆ ಪಾವತಿ ಮಾಡಬೇಕಾಗಿದೆ. ಸದ್ಯ ನಮ್ಮಲ್ಲಿರುವ ಹಣದಲ್ಲಿ ಪೌರ ಕಾರ್ಮಿಕರಿಗೆ ಸಂಬಳ ನೀಡುತ್ತಾ ನಿರ್ವಹಣೆ ಮಾಡಲಾಗುತ್ತಿದೆ. ಶೀಘ್ರವೇ ಹಣ ಪಾವತಿ ಮಾಡಿ ಯಂತ್ರವನ್ನು ತರಲಾಗುತ್ತದೆ ಎಂದು ತಿಳಿಸಿದರು.

9ನೇ ವಾರ್ಡ್‌ನ ಪಟ್ಟಣ ಪಂಚಾಯಿತಿ ಸದಸ್ಯೆ ವೀಣಾ ನಿತಿನ್ ಮಾತನಾಡಿ, ಗುಡಿಬಂಡೆ ಪಟ್ಟಣ ಪಂಚಾಯಿತಿಗೆ ಸರಿಸುಮಾರು 3 ವರ್ಷದ ಹಿಂದೆ ಹೊಸದಾಗಿ ಯಂತ್ರ ತರಲಾಗಿತ್ತು. ಅದನ್ನು ಸರಿಯಾದ ಸಮಯಕ್ಕೆ ಸರ್ವಿಸ್ ಮಾಡಿಸದೆ ಹಾಗೆ ಅದನ್ನು ಉಪಯೋಗಿಸಿದ ಕಾರಣ ಅದು ಕೆಟ್ಟು ಹೋಗಿದೆ. 4-5 ತಿಂಗಳಿಂದ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಕೇಳಿದರು ಕೂಡ ಏನು ಪ್ರಯೋಜನವಾಗಿಲ್ಲ ಎಂದರು.

ಪಟ್ಟಣದ ನಿವಾಸಿ ನವೀನ್ ಕುಮಾರ್ ಜಿಎನ್ ಮಾತನಾಡಿ, ಖಾಸಗಿಯವರ ಯಂತ್ರದಿಂದ ಕೆಲಸ ಮಾಡಿದವರಿಗೆ ಬಿಲ್ ಪಾವತಿ ಮಾಡಲು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಬಳಿ ಹಣವಿದೆ. ಆದರೆ ಕೆಟ್ಟು ಹೋಗಿರುವ ಯಂತ್ರವನ್ನು ಸರಿಪಡಿಸಿ ತರಲು ಪಟ್ಟಣ ಪಂಚಾಯಿತಿಯಲ್ಲಿ ಹಣವಿಲ್ಲವೇ ಎಂದು ಪ್ರಶ್ನೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.